Site icon Vistara News

Gujarat Election 2022 | ಅಸ್ಮಿತೆ ಹಾದಿಯಲ್ಲಿ ಬಿಜೆಪಿ, ಮಾರ್ಗ ಬದಲಿಸಿದ ಕೈ, ರೋಡ್ ಬ್ರೇಕರ್ ಆಪ್!

Gujarat Election Result

| ಮಲ್ಲಿಕಾರ್ಜುನ ತಿಪ್ಪಾರ, ಬೆಂಗಳೂರು

ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ (Gujarat Election 2022) ಎದುರಿಸಲಿರುವ ಗುಜರಾತ್‌ನಲ್ಲಿ ಪ್ರಚಾರದ ಅಬ್ಬರ ಮುಗಿಲು ಮುಟ್ಟಿದೆ. ಈವರೆಗೆ ಕಾಂಗ್ರೆಸ್-ಬಿಜೆಪಿ ನಡುವಿನ ಜಿದ್ದಾಜಿದ್ದಿ ಕಣವಾಗಿದ್ದ ಗುಜರಾತ್‌‌ಗೆ ಆಪ್ ಎಂಟ್ರಿಯಿಂದಾಗಿ ಚುನಾವಣೆಯ ರಣಕಣವೇ ಬದಲಾಗಿ ಹೋಗಿದೆ. ಆಪ್ ಎರಡೂ ಪಕ್ಷಗಳನ್ನು ಸೋಲಿಸಿ ಅಧಿಕಾರಕ್ಕೆ ಏರಲಿದೆ ಎಂದಲ್ಲ. ಆದರೆ, ಯಾವ ಪಕ್ಷದ್ದಾದರೂ ‘ಪಾರ್ಟಿ’ ಹಾಳು ಮಾಡುವ ಸಾಮರ್ಥ್ಯವಂತೂ ಅನಾಯಸವಾಗಿ ದಕ್ಕಿದೆ!

ಇತ್ತ ಕಾಂಗ್ರೆಸ್ ಖಟ್ಲಾ ಬೈಠಕ್ ಮತ್ತು ಅನೌಪಚಾರಿಕ ಪ್ರಚಾರ ಸಭೆಗಳಿಗೆ ಹೆಚ್ಚು ಒತ್ತು ನೀಡಿದ್ದರೆ, ಈ ಬಗ್ಗೆ ಬಿಜೆಪಿಗೂ ಅರಿವಿದೆ. 2017ರಲ್ಲಿ ಎರಡಂಕಿಗೆ ಬಿಜೆಪಿಯನ್ನು ಕಟ್ಟಿ ಹಾಕುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿತ್ತು. ಈಗ ಆಪ್ ಎಂಟ್ರಿಯಿಂದ ಎಲ್ಲವೂ ಬದಲಾಗಿದೆ. ತ್ರಿಕೋನ ಸ್ಪರ್ಧೆಯಂತೂ ಏರ್ಪಟ್ಟಿದೆ. ಆದರೆ, ಮತದಾರರ ಮನಸ್ಸಿನಲ್ಲಿ ಏನಿದೆ? ಉತ್ತರಕ್ಕೆ ಡಿ.8ರವರೆಗೆ ಕಾಯಬೇಕಾಗುತ್ತದೆ. ಡಿ.1ರಂದು ಮೊದಲ ಹಂತ ಹಾಗೂ ಡಿ.5ರಂದು ಎರಡನೇ ಹಂತದ ಚುನಾವಣೆ ನಡೆಯಲಿದೆ.

ಬಿಜೆಪಿಗೆ ಗೆಲುವು ಸಲೀಸಾ?
ಈ ಬಾರಿಯೂ ಬಿಜೆಪಿ ಗುಜರಾತ್ ಎಲೆಕ್ಷನ್ ಗೆದ್ದು ಅಧಿಕಾರ ಹಿಡಿಯಲಿದೆ. ಮೇಲ್ನೋಟದ ಲೆಕ್ಕಾಚಾರಗಳು ಇದನ್ನೇ ಸಾಬೀತುಪಡಿಸುತ್ತಿವೆ. ಚುನಾವಣಾ ಪೂರ್ವ ಕೆಲವು ಸಮೀಕ್ಷೆಗಳೂ ಈಗಾಗಲೇ ಬಿಜೆಪಿಯನ್ನು ಅಧಿಕಾರದಲ್ಲಿ ಕೂಡಿಸಿವೆ. 27 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಗೆ 2022ರ ಚುನಾವಣೆ ಕೇಕ್ ವಾಕ್ ಆಗಲಿದೆಯೇ? ಈ ಮಾತನ್ನು ಸ್ವತಃ ಬಿಜೆಪಿ ನಾಯಕರೇ ಒಪ್ಪಲು ರೆಡಿ ಇಲ್ಲ!

ಭಾರೀ ಅಬ್ಬರದ ಪ್ರಚಾರದೊಂದಿಗೆ ಬಿಜೆಪಿ ಚುನಾವಣೆಯನ್ನು ಎದುರಿಸುತ್ತಿದೆ. ತನ್ನೆಲ್ಲ ಶಕ್ತಿ-ಸಾಮರ್ಥ್ಯಗಳನ್ನು ವಿನಿಯೋಗಿಸುತ್ತಿದೆ. ಇದರ ಹೊರತಾಗಿಯೂ ಬಿಜೆಪಿಯ ಏಕೈಕ ಆಶಾಕಿರಣ ಪ್ರಧಾನಿ ನರೇಂದ್ರ ಮೋದಿ. ಮೋದಿ ಮ್ಯಾಜಿಕ್ ನಡೆದರೆ ಮಾತ್ರವೇ ಬಿಜೆಪಿಯ ಗೆಲುವು ಸಲೀಸಾಗುತ್ತ ಹೋಗಲಿದೆ. ಮತ್ತು ಬಹುಶಃ ಇದೇ ತಂತ್ರ ಬಿಜೆಪಿಯನ್ನು ಕೈ ಹಿಡಿಯಬಹುದು. ಯಾಕೆಂದರೆ, ಇಲ್ಲಿ ಭಾವನಾತ್ಮಕ ಅಂಶಗಳು ಕೆಲಸ ಮಾಡುವ ಸಾಧ್ಯತೆ ಹೆಚ್ಚಾಗಿದೆ. 27 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದೆ. ಇತ್ತೀಚೆಗೆ ಸಂಭವಿಸಿದ ಮೋರ್ಬಿ ಸೇತುವೆ ದುರಂತವು ಬಿಜೆಪಿಯ ಮೇಲಿನ ಅಸಮಾಧಾನಕ್ಕೂ ಕಾರಣವಾಗಿದೆ. ಹೀಗಿದ್ದೂ, ಗುಜರಾತಿಗಳು ಬಿಜೆಪಿಯನ್ನು ಕೈ ಹಿಡಿಯುವ ಸಾಧ್ಯತೆಗಳೇ ಹೆಚ್ಚು. ಯಾಕೆಂದರೆ, ಮೋದಿ ಮತ್ತು ಶಾ. ಈ ಇಬ್ಬರು ನಾಯಕರು ಗುಜರಾತ್‌ನವರು. ಒಂದೊಮ್ಮೆ ಬಿಜೆಪಿ ಸೋತರೆ, ಅದು ಇತರ ರಾಜ್ಯದ ಚುನಾವಣೆಗಳ ಮೇಲೂ ಪ್ರಭಾವ ಬೀರಲಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ಗುಜರಾತಿ ಅಸ್ಮಿತೆಯನ್ನೇ ಪ್ರಚಾರದಲ್ಲಿ ಬಳಸುತ್ತಿದೆ.

ಇದರ ನಡುವೆ ಕಾಂಗ್ರೆಸ್ ಸದ್ದಿಲ್ಲದೇ ಸಿದ್ಧತೆಯಲ್ಲಿದ್ದರೆ, ಆಪ್ ನಗರ ಪ್ರದೇಶದಲ್ಲಿ ಸದ್ದು ಮಾಡುತ್ತಿದೆ. ಪರಿಣಾಮವಾಗಿ ಬಿಜೆಪಿ ಈ ಬಾರಿ ತುಸು ಹೆಚ್ಚು ಶ್ರಮವಹಿಸಬೇಕಾದ ಅಗತ್ಯವಿದೆ. ಇಷ್ಟೆಲ್ಲ ಪ್ರತಿಕೂಲ ಪರಿಸ್ಥಿತಿಯ ಹೊರತಾಗಿಯೂ ಬಿಜೆಪಿ ಗೆಲ್ಲುವ ಅವಕಾಶಗಳೇ ಹೆಚ್ಚು. ಯಾಕೆಂದರೆ, ಈಗಲೂ ನರೇಂದ್ರ ಮೋದಿ ಮೇಲೆ ಜನರಿಗೆ ವಿಶ್ವಾಸವಿದೆ. ಬಹುಶಃ ಮೋದಿ ಮಾತ್ರ ಗೆಲುವಿಗೆ ಕಾರಣವಾಗಬಲ್ಲರು ಎನ್ನುತ್ತಾರೆ ರಾಜಕೀಯ ಪರಿಣತರು.

ಕಾಂಗ್ರೆಸ್ ಸೋತಿದೆ, ಅವಸಾನವಾಗಿಲ್ಲ!
ಗುಜರಾತ್‌ನಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನೆಲಕಚ್ಚಿದೆ ಎಂಬ ಅಭಿಪ್ರಾಯವಿದೆ. ಆದರೆ, ವಾಸ್ತವ ಪರಿಸ್ಥಿತಿ ಆ ರೀತಿ ಇಲ್ಲ. 2017ರಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ನೇತೃತ್ವದ ಭಾರೀ ಪ್ರಚಾರ ಕೈಗೊಂಡಿತ್ತು. ಗೆದ್ದೇ ಗೆಲ್ಲುವ ಆತ್ಮವಿಶ್ವಾಸದೊಂದಿಗೆ ಮುನ್ನುಗ್ಗಿತ್ತು. ಜಯ ಸಿಗಲಿಲ್ಲ; ಬಿಜೆಪಿಯನ್ನು ಎರಡಂಕಿಗೆ ಇಳಿಸಿದ ಕೀರ್ತಿ ಲಭಿಸಿತಷ್ಟೇ. ಆದರೆ, ಕಾಂಗ್ರೆಸ್ ಈ ಬಾರಿ ಭಿನ್ನ ಹಾದಿಯನ್ನು ಹಿಡಿದಿರುವುದು ಸ್ಪಷ್ಟ.

ಬಹುಶಃ ಸುದ್ದಿಗಳ ಮೇಲೆ ನಿಗಾ ಇಟ್ಟವರಿಗೆ ಅರಿವು ಉಂಟಾಗಿರಬಹುದು. ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಂಪುಟದ ಎಲ್ಲ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ನಾಯಕರು, ಭರ್ಜರಿ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಬೃಹತ್ ರ್ಯಾಲಿ, ರೋಡ್ ಶೋ, ಸಾರ್ವಜನಿಕ ಸಭೆಗಳನ್ನು ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನದ್ದು ಸದ್ದೇ ಇಲ್ಲ! ಹೌದು, ಕಾಂಗ್ರೆಸ್ ಈ ಬಾರಿ ಸದ್ದಿಲ್ಲದೇ ಪ್ರಚಾರ ಕೈಗೊಳ್ಳುವ ದಾರಿ ಹಿಡಿದಿದೆ. ವಿಶೇಷವಾಗಿ ಗ್ರಾಮೀಣ ಗುಜರಾತ್‌ನಲ್ಲಿ ಡೋರ್ ಟು ಡೋರ್ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಚಿಕ್ಕ ಚಿಕ್ಕ ಸಭೆಗಳನ್ನು ಮಾಡುತ್ತಿದೆ. ಇಂದಿನ ಗುಜರಾತ್ ನಿರ್ಮಾಣದಲ್ಲಿ ಕಾಂಗ್ರೆಸ್ ಸರ್ಕಾರದ ಕೊಡುಗೆಯನ್ನು ಮತದಾರರಿಗೆ ವಿವರಿಸುವ ಪ್ರಯತ್ನಗಳು ನಡೆದಿವೆ. ಜತೆಗೆ 27 ವರ್ಷಗಳಿಂದ ಆಡಳಿತದಲ್ಲಿರುವ ಬಿಜೆಪಿಯ ವೈಫಲ್ಯಗಳ್ನು ಮನದಟ್ಟು ಮಾಡುವ ಕೆಲಸ ಮಾಡುತ್ತಿದೆ. ಹಾಗಾಗಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಯಾವ ಪ್ರಮುಖ ನಾಯಕರು ಹೈಪ್ ಕ್ರಿಯೇಟ್ ಮಾಡುವ ಮಟ್ಟಕ್ಕೆ ಹೋಗಿಲ್ಲ.

ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೂ ಈ ಬಗ್ಗೆ ತಮ್ಮ ಪಕ್ಷದ ಕಾರ್ಯಕರ್ತರು, ನಾಯಕರನ್ನು ಎಚ್ಚರಿಸಿದ್ದಾರೆ. ಹುಷಾರಾಗಿರಿ, ಅವರು(ಕಾಂಗ್ರೆಸ್) ರ್ಯಾಲಿ, ಸಾರ್ವಜನಿಕ ಸಭೆ, ಪತ್ರಿಕಾಗೋಷ್ಠಿಗಳನ್ನು ಮಾಡುತ್ತಿಲ್ಲ ಎಂದಾದರೆ, ಸದ್ದಿಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂದರ್ಥ ಎಂದು ಪ್ರಧಾನಿ ಮೋದಿ ಹೇಳಿರುವುದು ಕಾಂಗ್ರೆಸ್ ತಂತ್ರವನ್ನು ಬಹಿರಂಗಪಡಿಸಿದೆ.

ಹಾಗಂತ, ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದರ್ಥವಲ್ಲ. ಆದರೆ, ಅವರು ಅಳವಡಿಸಿಕೊಂಡಿರುವ ತಂತ್ರವು ಬಿಜೆಪಿ ಸ್ವಲ್ಪವೇ ಯಾಮಾರಿದರೂ ಬಹುದೊಡ್ಡ ಹೊಡೆತವನ್ನು ನೀಡಲಿದೆ. ಇಷ್ಟಾಗಿಯೂ, ಕಾಂಗ್ರೆಸ್ ತನ್ನದೇ ಆದ ಕೆಲವು ಸಮಸ್ಯೆಗಳಿಂದ ಬಳಲುತ್ತಿದೆ. ಇಡೀ ರಾಜ್ಯಕ್ಕೆ ಪರಿಚಯ ಇರುವ ಪ್ರಭಾವಿ ಸ್ಥಳೀಯ ನಾಯಕನಿಲ್ಲ. 19 ಶಾಸಕರು ಬಿಜೆಪಿ ಸೇರಿದ್ದಾರೆ. ಇರುವ ನಾಯಕರ ಮಧ್ಯೆಯೇ ಒಗ್ಗಟ್ಟಿಲ್ಲ. ವಿಶೇಷವಾಗಿ ನಗರ ಪ್ರದೇಶದಲ್ಲಿ ಈಗ ಬಿಜೆಪಿಯ ಜತೆಗೆ ಆಮ್ ಆದ್ಮಿ ಪಾರ್ಟಿ ಕೂಡ ಎದುರಿಸಬೇಕಾಗಿದೆ.

ಆಮ್ ಆದ್ಮಿ ಪಾರ್ಟಿ ಎಕ್ಸ್‌ ಫ್ಯಾಕ್ಟರ್
2017ರ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನಡೆದಿತ್ತು. ಈ ಬಾರಿ ತ್ರಿಕೋನ ಸ್ಪರ್ಧೆ ಖಚಿತವಾಗಿದೆ. ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಅಧಿಕಾರದಲ್ಲಿರುವ ಆಪ್, ಅಬ್ಬರದೊಂದಿಗೆ ಗುಜರಾತ್ ಪ್ರವೇಶವನ್ನು ಮಾಡುತ್ತಿದೆ. ಆಪ್, ಬಿಜೆಪಿಗೆ ಹೊಡೆತ ನೀಡುತ್ತದೆಯೋ ಅಥವಾ ಕಾಂಗ್ರೆಸ್‌ ಮತಗಳನ್ನು ಕದಿಯುತ್ತದೆಯೋ ಕಾದು ನೋಡಬೇಕು. ಆದರೆ, ಈಗಿರುವ ಲೆಕ್ಕಾಚಾರ ಪ್ರಕಾರ, ಗುಜರಾತ್ ನಗರ ಪ್ರದೇಶದಲ್ಲಿ ಬಿಜೆಪಿಯ ಮತದ ಬುಟ್ಟಿಗೆ ಆಪ್ ಕನ್ನ ಹಾಕುವ ಸಾಧ್ಯತೆ ಇದೆ. ಸ್ವತಃ ಬಿಜೆಪಿಯ ನಾಯಕರು ತೆರೆಮರೆಯಲ್ಲಿ ಇದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಬಿಜೆಪಿಯ ಬಲಾಢ್ಯ ಕ್ಷೇತ್ರಗಳಲ್ಲಿ ಆ ಪಕ್ಷಕ್ಕೆ ಬೆದರಿಕೆಯೊಡ್ಡುತ್ತಿದೆ. ಕಾಂಗ್ರೆಸ್‌ನ ನಗರ ಮತದಾರರೂ ಆಪ್‌ ಕಡೆ ವಾಲಬಹುದು.

ಗುಜರಾತ್‌ನಲ್ಲೂ ಆಪ್ ಉಚಿತ ಕೊಡುಗೆಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತಿದೆ. ಹಾಗೆ ನೋಡಿದರೆ, ಕಾಂಗ್ರೆಸ್‌ ನಗರ ಪ್ರದೇಶಗಳಲ್ಲಿ ಹೆಚ್ಚಿನ ಶ್ರಮ ಹಾಕುತ್ತಿಲ್ಲ. ಹಾಗಾಗಿ, ಆಪ್‌ನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಒಂದೊಮ್ಮೆ, ಬಿಜೆಪಿಗೆ ಪ್ರಬಲ ಹೊಡೆತ ನೀಡುವಲ್ಲಿ ಆಪ್ ಸಕ್ಸೆಸ್ ಆದರೆ ಕಾಂಗ್ರೆಸ್‌ಗೆ ಬಂಪರ್ ಹೊಡೆದಂತೆಯೇ ಸರಿ. ಇದು ಗೇಮ್‌ ಚೇಂಜರ್ ಆಗಬಹುದು. ಇಲ್ಲವೇ ಪಕ್ಷದ ಚುನಾವಣಾ ಗೆಲುವಿನ ಬರವನ್ನು ನೀಗಿಸಬಹುದು. ಯಾವ ಪಕ್ಷಕ್ಕೂ ಬಹುಮತ ಸಿಗದಿದ್ದರೆ, ಕಾಂಗ್ರೆಸ್-ಆಪ್ ಜಂಟಿ ಸರ್ಕಾರವನ್ನೂ ನಿರೀಕ್ಷಿಸಬಹುದು. ಹಾಗಾಗಿ, 2022ರ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಎಕ್ಸ್ ಫ್ಯಾಕ್ಟರ್ ಆಗಬಹುದು. ಇದೆಲ್ಲವೂ ಲೆಕ್ಕಾಚಾರವಷ್ಟೇ. ಮತದಾರರ ಒಡಲಾಳ ಬಲ್ಲವರಾರು?

ಬಿಜೆಪಿ ತಂತ್ರಗಳೇನು?
| ಗುಜರಾತಿ ಅಸ್ಮಿತೆಯನ್ನೇ ಮುಂದು ಮಾಡಿರುವ ಬಿಜೆಪಿ.
| 2007, 20012ರಲ್ಲಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮತ್ತು ನಾನೇ ಗುಜರಾತ್- ನಾನೇ ಅಭಿವೃದ್ಧಿಯಂಥ ಥೀಮ್‌ಗಳ ಮೂಲಕ ಮೋದಿ ಚುನಾವಣೆ ಗೆದ್ದಿದ್ದರು. ಈಗ “ಆ ಗುಜರಾತ್ ಮೈ ಬನ್ವಾಯು ಛೆ'(ಈ ಗುಜರಾತ್ ನಾನು ಮಾಡಿದ್ದು) ಎಂಬ ಅಸ್ಮಿತೆಯನ್ನು ಮುಂದಿಟ್ಟುಕೊಂಡು ಮೋದಿ ಮತ ಕೇಳುತ್ತಿದ್ದಾರೆ.
| ಪಾಟಿದಾರ್‌ ಸಮುದಾಯಕ್ಕೆ ಮಣೆ. ವಿಜಯ್ ರೂಪಾನಿ ಅವರನ್ನು ಕೆಳಗಿಳಿಸಿ, ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಮಾಡಲಾಗಿದೆ.
| ಪಾಟಿದಾರ್ ಆಂದೋಲನದ ರೂವಾರಿ ಹಾರ್ದಿಕ್ ಪಟೇಲ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು, ಆಡಳಿತ ವಿರೋಧಿ ಅಲೆಯನ್ನು ಮೀರುವ ಪ್ರಯತ್ನ ಮಾಡಲಾಗಿದೆ.
| 27 ವರ್ಷಗಳಿಂದ ಅಧಿಕಾರ ವಂಚಿತವಾಗಿದ್ದರೂ ಕಾಂಗ್ರೆಸ್ ವೋಟ್ ಶೇರ್ ಶೇ.38ಕ್ಕಿಂತ ಕಡಿಮೆಯಾಗಿಲ್ಲ. ಈ ಸಂಗತಿಯೇ ಬಿಜೆಪಿಗೆ ಹೆಚ್ಚು ಬಾಧಿತವಾಗಿದೆ. ಕಳೆದ ಬಾರಿ ಶೇ.40 ವೋಟ್ ಷೇರ್ ಪಡೆದಿತ್ತು ಕಾಂಗ್ರೆಸ್.
| ಅಬ್ಬರದ ಪ್ರಚಾರ ತಂತ್ರಕ್ಕೆ ಮಾರು ಹೋದ ಬಿಜೆಪಿ.
| ಬೃಹತ್ ಸಭೆಗಳು, ರ್ಯಾಲಿಗಳು, ಪ್ರಚಾರ ಸಭೆಗಳನ್ನು ನಡೆಸಲಾಗುತ್ತಿದೆ.

ಸೈಲೆಂಟ್ ಕಿಲ್ಲರ್- ಕಾಂಗ್ರೆಸ್ ಸ್ಟ್ರಾಟರ್ಜಿ
| ಯಾವುದೇ ಅಬ್ಬರದ ಪ್ರಚಾರ ಸಭೆ, ರ್ಯಾಲಿ, ಬೃಹತ್ ಸಾರ್ವಜನಿಕ ಸಭೆಗಳಿಲ್ಲ.
| ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರಿಂದ ಸಿಮೀತ ಪ್ರಚಾರ.
| ಡೋರ್ ಟು ಡೋರ್ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ.
| ಗ್ರಾಮೀಣ ಪ್ರದೇಶದಲ್ಲಿ ಚಿಕ್ಕ ಚಿಕ್ಕ ಸಭೆಗಳ ಮೂಲಕ ಪ್ರಚಾರ
| 2017ರಲ್ಲಾದ ತಪ್ಪುಗಳನ್ನು ಗುರುತಿಸಿ, ಹೊಸ ಪದ್ಧತಿಯನ್ನು ಅಳವಡಿಸಿಕೊಂಡಿರುವ ಕಾಂಗ್ರೆಸ್
| ಈ ಬಾರಿ 125 ಸೀಟು ಗೆಲ್ಲುವ ಗುರಿಯೊಂದಿಗೆ ತಂತ್ರ ಹೆಣೆದು, ಜಾರಿ ಮಾಡುತ್ತಿರುವ ಕೈ ಪಕ್ಷ.
| ಮೋರ್ಬಿ ದುರಂತ, ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳ ಬಿಡುಗಡೆ ಸೇರಿ ಬಿಜೆಪಿಯ ವಿರುದ್ಧ 22 ಅಂಶಗಳ ಆರೋಪ ಪಟ್ಟಿ ರಿಲೀಸ್ ಮಾಡಿರುವ ಕಾಂಗ್ರೆಸ್
| ಪರಿವರ್ತನ್(ಬದಲಾವಣೆ) ಥೀಮ್ ಮೂಲಕ ಚುನಾವಣೆ ಎದುರಿಸುತ್ತಿರುವ ಕೈ ಪಕ್ಷ.

ಆಮ್ ಆದ್ಮಿ ಅಬ್ಬರ ಜೋರು!
| ಆಶ್ವಾಸನೆಗಳ ಮಳೆಯನ್ನೇ ಸುರಿಸುತ್ತಿದೆ ಆಪ್. ಅಬ್ಬರದ ಪ್ರಚಾರದ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.
| ಶಾಲೆ, ಆಸ್ಪತ್ರೆ, ವಿದ್ಯುತ್, ಉದ್ಯೋಗಗಳ ಭರವಸೆ ನೀಡುತ್ತಿದೆ.
| ದಿಲ್ಲಿ ಮತ್ತು ಗುಜರಾತ್ ಮಾಡೆಲ್‌ಗಳ ಮಧ್ಯೆ ಹೋಲಿಕೆಯನ್ನು ಪ್ರಸ್ತಾಪ.
| ಕಾಂಗ್ರೆಸ್-ಬಿಜೆಪಿಯ ಹೊರತಾದ ಆಯ್ಕೆ. ಮತದಾರರಿಗೆ ಮನವರಿಕೆ ಮಾಡಿಸುತ್ತಿರುವ ಆಪ್.
| ಆಪ್‌ನಿಂದ ಬಿಜೆಪಿ ಕೂಡ ತನ್ನ ರಣತಂತ್ರ ಬದಲಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.
| ಜಾತಿ ಸಮೀಕರಣದ ಬದಲಿಗೆ ಕೆಲಸಗಾರರ ವರ್ಗದ ಮೇಲೆ ಹೆಚ್ಚು ಗಮನ. ಜತೆಗೇ, ಹಿಂದುತ್ವದ ಪರ ತಾನು ಎಂದು ಬಿಂಬಿಸಿಕೊಳ್ಳುತ್ತಿದೆ.

ಇದನ್ನೂ ಓದಿ | Gujarat election 2022 | ಬಿಜೆಪಿ ಯಾತ್ರೆಗೆ ಬ್ರೇಕ್‌ ಹಾಕಲಿದೆಯಾ ಆಪ್‌ ಸ್ಪರ್ಧೆ, ಬುಡಕಟ್ಟು ಜನರ ಸಿಟ್ಟು?

Exit mobile version