Site icon Vistara News

Gujarat election 2022 | ಬಿಜೆಪಿ ಯಾತ್ರೆಗೆ ಬ್ರೇಕ್‌ ಹಾಕಲಿದೆಯಾ ಆಪ್‌ ಸ್ಪರ್ಧೆ, ಬುಡಕಟ್ಟು ಜನರ ಸಿಟ್ಟು?

Gujarat Election

ನವ ದೆಹಲಿ: ಗುಜರಾತ್‌ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿರುವಂತೆ, ಬಿಜೆಪಿ- ಕಾಂಗ್ರೆಸ್-‌ ಆಮ್‌ ಆದ್ಮಿ ಪಾರ್ಟಿ ನಡುವಿನ ಪೈಪೋಟಿಯೂ ಹೆಚ್ಚುತ್ತಿದೆ. ಸದ್ಯ ಆಡಳಿತ ಪಕ್ಷ ಬಿಜೆಪಿಗೆ ಇಲ್ಲಿ ತುಸು ಕಂಪನ ಮೂಡಿಸಿರುವುದೆಂದರೆ ಆಪ್‌ನ ಪೈಪೋಟಿ ಹಾಗೂ ಬುಡಕಟ್ಟು ಜನಾಂಗದಲ್ಲಿ ಎದುರಾಗಿರುವ ಆಕ್ರೋಶ.

ಡಿಸೆಂಬರ್‌ 1ರಂದು ಗುಜರಾತ್‌ನಲ್ಲಿ ಮೊದಲ ಹಂತದ ಮತದಾನ 89 ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿದೆ. ಇದರಲ್ಲಿ 35ರಷ್ಟು ಕ್ಷೇತ್ರಗಳು ದಕ್ಷಿಣ ಗುಜರಾತಿನ ಭರೂಚ್‌, ನರ್ಮದಾ, ತಾಪಿ, ದಾಂಗ್‌, ಸೂರತ್‌, ವಲ್ಸಾಡ್‌ ಹಾಗೂ ನೌಸಾರಿ ಜಿಲ್ಲೆಗಳಲ್ಲಿ ಹರಡಿಕೊಂಡಿವೆ. 2017ರ ಚುನಾವಣೆಯಲ್ಲಿ ಬಿಜೆಪಿ ಈ 35 ಕ್ಷೇತ್ರಗಳಲ್ಲಿ 25ನ್ನು ಹಿಡಿತಕ್ಕೆ ತಂದುಕೊಂಡಿತ್ತು. ಕಾಂಗ್ರೆಸ್ ಹಾಗೂ ಬಿಟಿಪಿ (ಭಾರತೀಯ ಟ್ರೈಬಲ್‌ ಪಾರ್ಟಿ) ಕ್ರಮವಾಗಿ 8 ಹಾಗೂ 2 ಸೀಟುಗಳನ್ನು ಗೆದ್ದುಕೊಂಡಿದ್ದವು. ಆದರೆ ಈ ಪ್ರದೇಶದಲ್ಲಿರುವ 14 ಬುಡಕಟ್ಟು ಸಮುದಾಯದ ಮೀಸಲು ಕ್ಷೇತ್ರಗಳಲ್ಲಿ 5ನ್ನು ಮಾತ್ರವೇ ಬಿಜೆಪಿ ಗೆದ್ದುಕೊಂಡಿತ್ತು. ಕಾಂಗ್ರೆಸ್‌ನಿಂದ ಎರಡು ಕ್ಷೇತ್ರಗಳನ್ನು ಕಸಿದುಕೊಂಡಿತ್ತು. ಪಟ್ಟಣದ ಮತದಾರರಲ್ಲಿ ಬಹುಮಂದಿಯನ್ನು ಬಿಜೆಪಿ ಸೆಳೆದಿದ್ದರೂ, ಬುಡಕಟ್ಟು ಜನರಿರುವ ಪ್ರದೇಶಗಳು ಈಗಲೂ ಬಿಜೆಪಿಯ ಪಾಲಿಗೆ ಸಂಕಷ್ಟಕರ ಎಂದೇ ಹೇಳಲಾಗುತ್ತದೆ.

ಪಾಟೀದಾರ ಪ್ರತಿಭಟನೆ

2015ರಲ್ಲಿ ಹಾರ್ದಿಕ್‌ ಪಟೇಲ್‌ ನೇತೃತ್ವದಲ್ಲಿ ನಡೆದ ಪಾಟೀದಾರ ಸಮುದಾಯದ ಪ್ರತಿಭಟನೆಗೆ ಸೂರತ್‌ ಕೇಂದ್ರವಾಗಿತ್ತು. ಆಗ ದೊಡ್ಡ ಪ್ರಮಾಣದ ಹಿಂಸಾಚಾರವೂ ನಡೆದಿತ್ತು. ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತಂದ ಸಂದರ್ಭದಲ್ಲಿ ಸೂರತ್‌ನ ಜವಳಿ ಉದ್ಯಮಿಗಳು ಕೂಡ ರೊಚ್ಚಿಗೆದ್ದು ಬೀದಿಗೆ ಇಳಿದಿದ್ದರು. ಮುಷ್ಕರಗಳು ನಡೆದಿದ್ದವು. ಇಷ್ಟೆಲ್ಲಾ ಪ್ರತಿಭಟನೆ, ಆಕ್ರೋಶಗಳಿದ್ದರೂ ಸೂರತ್‌ ಜಿಲ್ಲೆಯ 16 ಕ್ಷೇತ್ರಗಳಲ್ಲಿ 15ನ್ನು ಬಿಜೆಪಿಯೇ ಗೆದ್ದಿತ್ತು. ಇದರಲ್ಲಿ ಪಾಟೀದಾರ ಪ್ರಾಬಲ್ಯದ ವರಚ್ಚಾ, ಕಾಮೆಜ್‌, ಕತರ್‌ಗಾಮ್‌ಗಳೂ ಇದ್ದವು. ಸೂರತ್‌ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಲಾಗದಿದ್ದ ಒಂದೇ ಕ್ಷೇತ್ರ ಎಂದರೆ ಬುಡಕಟ್ಟು ಸಮುದಾಯ ಪ್ರಾಬಲ್ಯದ ಮಾಂಡ್ವಿ.

ಇದನ್ನೂ ಓದಿ | ಮೊಗಸಾಲೆ ಅಂಕಣ | ಗುಜರಾತ್ ಚುನಾವಣೆ: ಯಾರು ಹಿತವರು ಈ ಮೂವರೊಳಗೆ!?

ಆಪ್‌ ದಾಪುಗಾಲು

ಆದರೆ ಈ ಬಾರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷದ ರಂಗಪ್ರವೇಶದೊಂದಿಗೆ ಸನ್ನಿವೇಶ ಇನ್ನಷ್ಟು ಕುತೂಹಲಕಾರಿಯಾಗಿದೆ. ಆಪ್‌ನ ಪ್ರಚಾರ ಆಕ್ರಮಣಕಾರಿಯಾಗಿದೆ. ಕಳೆದ ಬಾರಿ ಪೌರ ಚುನಾವಣೆಗಳಲ್ಲೂ ಆಪ್‌ನ ಸಾಧನೆ ಗಣನೀಯವಾಗಿದೆ. ಸೂರತ್‌ ನಗರಪಾಲಿಕೆ ಚುನಾವಣೆಯಲ್ಲಿ 27 ಕ್ಷೇತ್ರಗಳಲ್ಲಿ ಆಪ್‌ ಗೆದ್ದಿದೆ. ಇಲ್ಲಿ ಕಾಂಗ್ರೆಸ್‌ ಸಾಧನೆ ಶೂನ್ಯ.

ಹಾರ್ದಿಕ್‌ ಪಟೇಲ್‌ ಅವರ ಒಂದು ಕಾಲದ ಆತ್ಮೀಯ ಸಂಗಾತಿ ಅಲ್ಪೇಶ್‌ ಕಥೀರಿಯಾರನ್ನು ಆಪ್‌ ವರಚ್ಚಾ ಕ್ಷೇತ್ರದಲ್ಲಿ ನಿಲ್ಲಿಸಿದೆ. ಇನ್ನೊಬ್ಬ ಮಾಜಿ ಪಾಟೀದಾರ್‌ ಅನಾಮತ್‌ ಆಂದೋಲನ ಸಮಿತಿ ನಾಯಕ ಧಾರ್ಮಿಕ ಮಾಳವೀಯ ಓಲ್ಪಾಡ್‌ ಕ್ಷೇತ್ರದಿಂದ ಆಪ್‌ ಟಿಕೆಟ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಆಪ್‌ನ ಗುಜರಾತ್‌ ಘಟಕದ ಅಧ್ಯಕ್ಷ ಗೋಪಾಲ್‌ ಇಟಾಲಿಯಾ ಕೂಡ ಪಾಟೀದಾರ್‌ ಜನಾಂಗದವರು. ಇವರು ಕತರ್‌ಗಾಮ್‌ ಕ್ಷೇತ್ರದ ಅಭ್ಯರ್ಥಿ. ಪಾಟೀದಾರ ಸಮುದಾಯದ ಬೆಂಬಲದಿಂದ ಬಹಳಷ್ಟು ಬದಲಾವಣೆಯಾಗಲಿದೆ ಎಂದು ಆಪ್‌ ರಾಜ್ಯ ಉಪಾಧ್ಯಕ್ಷ ಭೀಮ್‌ಭಾಯ್‌ ಚೌಧುರಿ ಹೇಳುತ್ತಾರೆ.

ಇದನ್ನೂ ಓದಿ | Gujarat Election | ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 125 ಸೀಟು: ಗೆಹ್ಲೋಟ್ ವಿಶ್ವಾಸ

ʼʼಈ ಬಾರಿ ಪಾಟೀದಾರರು ಆಪ್‌ ಪರವಾಗಿ ನಿಲ್ಲಲಿದ್ದಾರೆ. ಕಳೆದ ಬಾರಿ ಆಪ್‌ ಇಲ್ಲಿ ಸಾಕಷ್ಟು ಸಕ್ರಿಯವಾಗಿರಲಿಲ್ಲ. ಕೇಜ್ರಿವಾಲ್‌ ಕೂಡ ಇಲ್ಲಿ ಪ್ರಚಾರಕ್ಕೆ ಬಂದಿರಲಿಲ್ಲ. ಪಕ್ಷ ದಿಲ್ಲಿ ಹಾಗೂ ಪಂಜಾಬ್‌ನಲ್ಲಿ ಮಾಡುತ್ತಿರುವ ಸಾಧನೆಯನ್ನು ಮತದಾರರು ಗಮನಿಸುತ್ತಿದ್ದಾರೆʼʼ ಎಂದು ಭೀಮ್‌ಭಾಯ್‌ ಹೇಳಿದ್ದಾರೆ. ಸದ್ಯ ಬುಡಕಟ್ಟು ಮೀಸಲಿನ 14 ಕ್ಷೇತ್ರಗಳಲ್ಲಿ 7 ಬಿಜೆಪಿಯ ಬಳಿ ಇದೆ.

ಬುಡಕಟ್ಟು ಆಕ್ರೋಶ

ನೌಸಾರಿ ಹಾಗೂ ವಲ್ಸಾಡ್‌ ಜಿಲ್ಲೆಗಳಲ್ಲಿ ಹೆದ್ದಾರಿ ಕಾಮಗಾರಿಗಾಗಿ ನಡೆದಿರುವ ಭೂಸ್ವಾಧೀನದ ವಿರುದ್ಧ ಹೋರಾಟದ ನಾಯಕತ್ವವನ್ನು ಯುವ ಬುಡಕಟ್ಟು ಮುಖವಾಗಿರುವ ಅನಂತ್‌ ಪಟೇಲ್‌ ವಹಿಸಿದ್ದು, ಇವರು ಕಾಂಗ್ರೆಸ್‌ನ ಶಾಸಕ. ಇವರು ಪಕ್ಷದ ರಾಜ್ಯ ಬುಡಕಟ್ಟು ಘಟಕದ ಅಧ್ಯಕ್ಷ ಕೂಡ. ದಕ್ಷಿಣ ಗುಜರಾತ್‌ನ ಪಾರ್‌- ತಾಪಿ- ನರ್ಮದಾ ರಿವರ್‌ ಲಿಂಕ್‌ ಪ್ರಾಜೆಕ್ಟ್‌ ವಿರುದ್ಧ ನಡೆದಿರುವ ಹೋರಾಟವನ್ನು ಇವರು ಸಂಘಟಿಸಿದ್ದರು.

ಈ ಯೋಜನೆಯಡಿ ಕಟ್ಟಲಾಗುವ ಅಣೆಕಟ್ಟುಗಳಿಂದ ತಮ್ಮ ಜಮೀನು ಮುಳುಗಡೆಯಾಗಲಿದೆ ಬುಡಕಟ್ಟು ಜನತೆ ಆತಂಕಿತರಾಗಿದ್ದಾರೆ. ಇದಕ್ಕಾಗಿ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ, ಯೋಜನೆಯನ್ನು ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಇತ್ತೀಚೆಗೆ ಘೋಷಿಸಿದ್ದರು. ಆದರೂ, ಬುಡಕಟ್ಟು ಜನತೆ ಎಂದೂ ಬಿಜೆಪಿಯನ್ನು ನಂಬುವುದಿಲ್ಲ ಎಂದು ಕಾಂಗ್ರೆಸ್‌ ಘೋಷಿಸಿದೆ. ʼʼಬುಡಕಟ್ಟು ಜನತೆ ಕಾಂಗ್ರೆಸ್‌ನಲ್ಲಿ ನಂಬಿಕೆಯಿಟ್ಟಿದ್ದಾರೆ. ಬಿಜೆಪಿಯನ್ನು ಗೆಲ್ಲಿಸುವುದಿಲ್ಲ. ಅದಕ್ಕಾಗಿಯೇ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಲ್ಸಾಡ್‌ ಜಿಲ್ಲೆಯಲ್ಲಿ ಎರಡು ರ್ಯಾಲಿ ನಡೆಸಿದ್ದಾರೆʼʼ ಎಂದು ಕಾಂಗ್ರೆಸ್‌ ಹೇಳಿದೆ.

ʼʼಹಾಗೇನೂ ಇಲ್ಲ. ನಾವು ಇಲ್ಲಿ ಬುಡಕಟ್ಟು ಪ್ರದೇಶಗಳಿಗೆ ಪಂಚಾಯತ್‌ ವಿಸ್ತರಣೆಯಂಥ ಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಇದು ಇಲ್ಲಿನವರ ಬಹುಕಾಲದ ಬೇಡಿಕೆಯಾಗಿತ್ತು. ಕೆಲವರು ಬುಡಕಟ್ಟು ಸಮುದಾಯವನ್ನು ಬಿಜೆಪಿ ವಿರುದ್ಧ ಸುಳ್ಳು ಹೇಳಿ ಎತ್ತಿ ಕಟ್ಟುತ್ತಿದ್ದಾರೆʼʼ ಎಂದು ಬಿಜೆಪಿ ಹೇಳಿದೆ.

Exit mobile version