ಅಹಮದಾಬಾದ್: ಇದೇ ಮೊದಲ ಬಾರಿ ಗುಜರಾತ್‌ನ ಕಣಕ್ಕಿಳಿದರೂ ಕನಿಷ್ಠ ಆರು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಹುಟ್ಟಿಸಿರುವ (Gujarat election results) ಆಮ್ ಆದ್ಮಿ ಪಾರ್ಟಿ ಹಲವಾರು ಕಡೆಗಳಲ್ಲಿ ಕಾಂಗ್ರೆಸ್‌ನ ಗೆಲುವಿನ ಸಾಧ್ಯತೆಗೆ ಅಡ್ಡಗಾಲು ಹಾಕಿದೆ. ಜತೆಗೆ ಸಾಕಷ್ಟು ಮತ ಬಾಚಿಕೊಳ್ಳುವ ಮೂಲಕ ಮೊದಲ ಹೆಜ್ಜೆಯಲ್ಲೇ ಭರವಸೆ ಮೂಡಿಸಿದೆ. ಈಗಾಗಲೇ ೧೨ ಶೇಕಡಾದಷ್ಟು ಮತಗಳನ್ನು ಪಡೆದಿದೆ. ಇಷ್ಟಾದರೂ ಆಮ್ ಆದ್ಮಿ ಪಾರ್ಟಿಯ ಮುಖ್ಯಮಂತ್ರಿ ಅಭ್ಯರ್ಥಿ ಈಶುದಾನ್ ಗಡ್ವಿ ಅವರು ಹಿನ್ನಡೆ ಅನುಭವಿಸಿದ್ದಾರೆ. ಹಿನ್ನಡೆ-ಮುನ್ನಡೆಯ ಚಕ್ರದಲ್ಲಿ ಸಿಲುಕಿದ್ದ ಅವರು ಮಧ್ಯಾಹ್ನ ೧೨.೩೦ರ ಹೊತ್ತಿಗೆ ೭೯೫೬ ಮತಗಳಿಂದ ಹಿಂದಿದ್ದರು.
ಈಶುದಾನ್ ಗಡ್ವಿ ಅವರು ಖಂಬಾಲಿಯಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದು, ಬಿಜೆಪಿಯ ಮುಲೂ ಭಾಯಿ ಬೇರಾ ಅವರು ಮುನ್ನಡೆಯಲ್ಲಿದ್ದಾರೆ. ಆಮ್ ಆದ್ಮಿ ಪಾರ್ಟಿ ಗುಜರಾತ್‌ನಲ್ಲಿ ಸಾಕಷ್ಟು ಮತಗಳನ್ನು ಬಾಚಿಕೊಂಡಿದ್ದರೂ ಸಿಎಂ ಅಭ್ಯರ್ಥಿ ಮಾತ್ರ ಏದುಸಿರುವ ಬಿಡುವಂತಾಗಿದೆ.
ಜಿಗ್ನೇಶ್ ಮೇವಾನಿಗೂ ಕಷ್ಟ
ಈ ನಡುವೆ, ವಡಗಾಂವ್ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಜಿಗ್ನೇಶ್ ಮೇವಾನಿ ಅವರಿಗೂ ಸ್ವಲ್ಪ ಕಷ್ಟವಾಗಿದೆ. ಇಲ್ಲಿ ಬಿಜೆಪಿಯ ಮಣಿಭಾಯ್ ಜೀತಾಭಾಯ್ ವಘೇಲಾ ಅವರು ಮೇವಾನಿ ಅವರಿಗಿಂತ ೨೦೦೦ ಮತಗಳಿಂದ ಮುಂದಿದ್ದಾರೆ.
ರವೀಂದ್ರ ಜಡೇಜಾ ಪತ್ನಿ ಗೆಲುವಿನತ್ತ
ಜಾಮ್‌ನಗರ್ ಉತ್ತರ ಕ್ಷೇತ್ರದಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ, ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜಾ ಅವರ ಸ್ಪರ್ಧೆಯಲ್ಲಿ ಮುಂದಿದ್ದಾರೆ. ರಿವಾಬಾ ಅವರಿ ೪೯ ಸಾವಿರ ಮತ ಪಡೆದಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಆಮ್ ಆದ್ಮಿಯ ಕರ್ಸನ್‌ಭಾಯ್ ಕರ್ಮೂರ್ ಅವರು ೨೪ ಸಾವಿರ ಮತಗಳನ್ನಷ್ಟೇ ಪಡೆದಿದ್ದಾರೆ.
ಇದನ್ನೂ ಓದಿ | Gujarat Election Results| ಗುಜರಾತ್‌ನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದ ಕೇಜ್ರಿವಾಲ್ ಈಗ ಟ್ರೋಲ್; ಇಲ್ಲಿವೆ ಫನ್ನಿ ವಿಡಿಯೊಗಳು