ನವ ದೆಹಲಿ: ಗುಜರಾತ್‌ನ ೧೮೨ ವಿಧಾನಸಭಾ ಕ್ಷೇತ್ರಗಳ ಪೈಕಿ ೧೫೬ ಸ್ಥಾನಗಳನ್ನು ಗೆದ್ದುಕೊಂಡು ಬೀಗಿದೆ ಬಿಜೆಪಿ. ಕಾಂಗ್ರೆಸ್ ೧೭ ಸ್ಥಾನಕ್ಕೆ ಕುಸಿದಿದೆ. ಹಾಗಿದ್ದರೆ ಮಹಾ ವಿಜಯ ಮತ್ತು ಮಹಾಪತನದ ನಡುವೆ ಕೊಂಡಿಯಾಗಿ ನಿಂತಿರುವುದು ಆಮ್ ಆದ್ಮಿ ಪಾರ್ಟಿಯಾ? ಈ ಒಂದು ಪ್ರಶ್ನೆ ಫಲಿತಾಂಶವನ್ನು (Gujarat Election results) ನೋಡಿದ ಎಲ್ಲರ ಮನದಲ್ಲೂ ಮೂಡುತ್ತದೆ. ಆಮ್ ಆದ್ಮಿ ಪಾರ್ಟಿ ತಾನು ಗುಜರಾತ್‌ನಲ್ಲಿ ನೆಲೆ ಊರುವ ಪ್ರಯತ್ನದಲ್ಲಿ ಈಗಾಗಲೇ ನೆಲೆ ಊರಿದ್ದ ಕಾಂಗ್ರೆಸನ್ನು ಬುಡಮೇಲು ಮಾಡಿದೆಯಾ? ಆ ಮೂಲಕ ಬಿಜೆಪಿಯ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆಯಾ?
ಗುಜರಾತ್ ಚುನಾವಣೆಯ ಫಲಿತಾಂಶದ ಅಂಕಿ ಅಂಶಗಳು ಇದನ್ನು ಸ್ವಲ್ಪ ಮಟ್ಟಿಗೆ ದೃಢೀಕರಿಸುತ್ತವೆ. ಆಮ್ ಆದ್ಮಿ ಪಾರ್ಟಿ ೨೦೧೭ರ ಚುನಾವಣೆಯಲ್ಲೇ ಗುಜರಾತ್‌ನಲ್ಲಿ ಸ್ಪರ್ಧೆ ನಡೆಸಿತ್ತು. ಆದರೆ ಅದು ತೀರಾ ನಗಣ್ಯವಾಗಿತ್ತು. ಯಾಕೆಂದರೆ, ಅದಕ್ಕೆ ಒಟ್ಟಾರೆಯಾಗಿ ಸಿಕ್ಕಿದ್ದು ೨೪,೯೧೮ ಮತಗಳು. ಅಂದರೆ ೦.೧ ಶೇಕಡಾ ಮತ. ಅದೇ ಆಮ್ ಆದ್ಮಿ ಪಾರ್ಟಿ ಐದು ವರ್ಷಗಳ ಬಳಿಕ ಶೇ. ೧೨.೯ರಷ್ಟು ಮತಗಳನ್ನು ಪಡೆದಿದೆ. ಐದು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಈ ಜಯ ಗಳಿಸುವ ದಾರಿಯಲ್ಲಿ ಅದಕ್ಕೆ ಬಿಜೆಪಿಯನ್ನು ಬೆರಳ ತುದಿಯಲ್ಲಿ ಸ್ಪರ್ಶಿಸುವುದಕ್ಕೂ ಸಾಧ್ಯವಾಗಿಲ್ಲ. ಅದು ಸೋಲಿಸಿದ್ದೆಲ್ಲ ಕಾಂಗ್ರೆಸ್‌ನ್ನೇ ಎನ್ನುವುದು ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ.
ಗುಜರಾತ್‌ನಲ್ಲಿ ಬಿಜೆಪಿ ಗೆಲುವಿಗೆ ಎರಡು ಕಾರಣಗಳಿವೆ. ಒಂದನೆಯದು ಬಿಜೆಪಿಯ ನಿಜವಾದ ಶಕ್ತಿ. ಪ್ರಧಾನಿ ನರೇಂದ್ರ ಮೋದಿ ಅವರ ಪರಿಶ್ರಮ, ಅವರ ಬಗೆಗೆ ಗುಜರಾತ್‌ನ ಜನವರಿಗೆ ಇರುವ ಪ್ರೀತಿ, ಗುಜರಾತ್‌ನಲ್ಲಿ ನಡೆದಿರುವ ಅಭಿವೃದ್ಧಿ ಚಟುವಟಿಕೆಗಳು ಎಲ್ಲವೂ ಸೇರಿ ಬಿಜೆಪಿಯನ್ನು ಗೆಲ್ಲಿಸಿವೆ. ಈ ಮೂಲಕ ಅದರ ಸ್ಥಾನ ಸಂಖ್ಯೆ ಕಳೆದ ಬಾರಿಯ ೯೯ರಿಂದ ೧೫೬ಕ್ಕೇರಿದೆ. ಆದರೆ, ಇಲ್ಲಿ ಕೇವಲ ಸ್ಥಾನ ಸಂಖ್ಯೆ ಏರಿದ್ದಲ್ಲ. ಬಿಜೆಪಿಯ ಮತಬೇಟೆ ಪ್ರಮಾಣವೂ ಹೆಚ್ಚಾಗಿದೆ. ಕಳೆದ ಬಾರಿ ೪೯ ಶೇಕಡಾ ಮತ ಪಡೆದಿದ್ದ ಪಕ್ಷ ಈ ಬಾರಿ ಅದನ್ನು ಶೇಕಡಾ ೫೨.೫ಕ್ಕೇರಿಸಿಕೊಂಡಿದೆ. ಹೀಗಾಗಿ ಬಿಜೆಪಿಯ ಗೆಲುವು ಎನ್ನುವುದು ಬೇರೆ ಯಾವ ಫ್ಯಾಕ್ಟರ್‌ಗಳನ್ನೂ ಅವಲಂಬಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ಅದೇ ಹೊತ್ತಿಗೆ ಬಿಜೆಪಿಯ ಸ್ಥಾನ ಬಲ ದೊಡ್ಡ ಪ್ರಮಾಣದಲ್ಲಿ ಹೆಚ್ಚಲು ಆಮ್ ಆದ್ಮಿ ಪಾರ್ಟಿಯ ಕೊಡುಗೆ ಇರುವುದನ್ನು ಅಲ್ಲಗಳೆಯುವಂತಿಲ್ಲ. ಅದನ್ನು ಪ್ರೂವ್ ಮಾಡುವ ಕೆಲವು ಅಂಶಗಳು ಇಲ್ಲಿವೆ.
೧. ೩೪ ಸ್ಥಾನಗಳಲ್ಲಿ ಆಪ್‌ಗೇ ಎರಡನೇ ಸ್ಥಾನ
ಗುಜರಾತ್ ಕಳೆದ ನಾಲ್ಕು ದಶಕಗಳಿಂದ ಕಾಂಗ್ರೆಸ್-ಬಿಜೆಪಿ ನೇರ ಸಮರವನ್ನಷ್ಟೇ ಕಂಡಿದೆ. ಆದರೆ, ಈಗ ಮೊದಲ ಬಾರಿಗೆ ಆಮ್ ಆದ್ಮಿ ಪ್ರವೇಶದೊಂದಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಅಚ್ಚರಿ ಎಂದರೆ, ಆಪ್ ಮೊದಲ ಪ್ರಯತ್ನದಲ್ಲೇ ಐದು ಸ್ಥಾನಗಳಲ್ಲಿ ಗೆದ್ದಿದೆ. ಕನಿಷ್ಠ ೩೪ ಸ್ಥಾನಗಳಲ್ಲಿ ಎರಡನೇ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಅಂದರೆ, ೩೪ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ. ಅಂದರೆ ಕನಿಷ್ಠ ೩೪ ಸ್ಥಾನಗಳಲ್ಲಿ ಕಾಂಗ್ರೆಸ್ ಸೋಲಲು ಆಮ್ ಆದ್ಮಿ ಪಾರ್ಟಿ ನೇರವಾಗಿ ಕಾರಣವಾಗಿದೆ. ಕೆಲವೊಂದು ಕಡೆಗಳಲ್ಲಿ ಬಿಜೆಪಿ ಮತ್ತು ಆಪ್‌ನ ಅಂತರವೇ ಒಂದು ಲಕ್ಷಕ್ಕಿಂತ ಹೆಚ್ಚಿದೆ. ಕಾಂಗ್ರೆಸ್ ಅದಕ್ಕಿಂತಲೂ ಕೆಳಗೆ ಕುಸಿದಂತಾಗಿದೆ.
೨. ೨೫ಕ್ಕೂ ಹೆಚ್ಚು ಸ್ಥಾನಗಳಲ್ಲಿ ಸೋಲಿಗೆ ಕಾರಣ
ಕಾಂಗ್ರೆಸ್ ಎರಡನೇ ಸ್ಥಾನ ಪಡೆದ ಕನಿಷ್ಠ ೨೫ ಸ್ಥಾನಗಳಲ್ಲಿ ಆಮ್ ಆದ್ಮಿ ಉತ್ತಮ ಸಾಧನೆ ಮಾಡಿದೆ. ಒಂದು ವೇಳೆ ಆಮ್ ಆದ್ಮಿಗೆ ಹೋಗಿರುವ ಮತಗಳೇನಾದರೂ ಕಾಂಗ್ರೆಸ್‌ಗೆ ಬಿದ್ದಿದ್ದರೆ ಕಾಂಗ್ರೆಸ್ ಗೆಲ್ಲುವ ಅವಕಾಶಗಳಿದ್ದವು. ಅಂದರೆ ಗೆಲುವಿನ ಅವಕಾಶಕ್ಕೆ ಆಪ್ ಅಡ್ಡಗಾಲು ಹಾಕಿದೆ.
೩. ಮುಸ್ಲಿಂ ಪ್ರದೇಶಗಳಲ್ಲೇ ಹೆಚ್ಚು ಹೊಡೆತ
ಸಾಮಾನ್ಯವಾಗಿ ಗುಜರಾತ್‌ನ ಯಾವುದೇ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಕಾಂಗ್ರೆಸ್ ಸೋಲುವುದು ಅಪರೂಪ. ಆದರೆ, ಈ ಬಾರಿ ಜಾಮ್ ನಗರ್, ಫತೇಪುರ, ಉಮ್ರೆತ್ ಸೇರಿದಂತೆ ಪ್ರಮುಖ ಮುಸ್ಲಿಂ ಏರಿಯಾಗಳಲ್ಲಿ ಆಪ್ ಕಾಂಗ್ರೆಸ್‌ಗಿಂತಲೂ ಹೆಚ್ಚು ಮತ ಪಡೆದಿದೆ. ಅಂದರೆ, ಮುಸ್ಲಿಂ ಆಪ್ ಮುಸ್ಲಿಂ ಮತಗಳನ್ನು ಈ ಬಾರಿ ಯಥೇಚ್ಛವಾಗಿ ಪಡೆದುಕೊಂಡಿದೆ.
೪. ಸೀಮಿತ ಪ್ರದೇಶಗಳಲ್ಲಷ್ಟೇ ಆಪ್ ಪ್ರಭಾವ
ನಿಜವೆಂದರೆ, ಆಮ್ ಆದ್ಮಿ ರಾಜ್ಯದ ಎಲ್ಲ ಭಾಗದಲ್ಲಿ ಏಕಮುಖ ಪ್ರಭಾವವನ್ನು ಹೊಂದಿಲ್ಲ. ಕೆಲವು ಕ್ಷೇತ್ರಗಳಲ್ಲಿ ಲಕ್ಷಾಂತರ ಮತಗಳನ್ನು ಪಡೆದಿದ್ದರೆ, ಕೆಲವು ಕಡೆ ಕೆಲವೇ ಸಾವಿರಕ್ಕೆ ಸೀಮಿತವಾಗಿದೆ. ಅಂದರೆ ಈ ಪ್ರದೇಶಗಳಲ್ಲಿ ಅದು ಇನ್ನೂ ಎಂಟ್ರಿ ಪಡೆದಿಲ್ಲ. ಒಂದು ವೇಳೆ ಪಡೆದುಕೊಂಡಿದ್ದರೆ ಕಾಂಗ್ರೆಸ್‌ನ ವೋಟ್ ಶೇರ್‌ಗೆ ಇನ್ನಷ್ಟು ಕನ್ನ ಹಾಕುವ ಅಪಾಯವಿತ್ತು.
೫. ಬಿಜೆಪಿ ಹತ್ತಾರು ಕಡೆ ಅನ್ ಬೀಟೆಬಲ್
ಬಿಜೆಪಿಯ ಈ ಗೆಲುವು ಕೆಲವೊಂದು ಕಡೆಗಳಲ್ಲಿ ಯಾವುದೇ ಲೆಕ್ಕಾಚಾರಗಳನ್ನು ಮೀರಿತ್ತು ಎಂದು ಸ್ಪಷ್ಟವಾಗಿ ಹೇಳಬಹುದು ಯಾಕೆಂದರೆ, ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ಸುಮಾರು ೨೦ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಶೇಕಡಾ ೫೦ಕ್ಕಿಂತಲೂ ಹೆಚ್ಚು ಮತ ಪಡೆದು ಜಯಶಾಲಿಗಳಾಗಿದ್ದಾರೆ. ಎಲ್ಲಿಸ್ ಬ್ರಿಜ್ ಎಂಬಲ್ಲಂತೂ ಬಿಜೆಪಿ ಅಭ್ಯರ್ಥಿ ಚಲಾಯಿತ ಮತಗಳ ಪೈಕಿ ಶೇ. ೮೦ರಷ್ಟನ್ನು ತಾನೇ ಬಾಚಿಕೊಂಡಿದ್ದಾರೆ. ಛೋಟಾ ಉದಯ್‌ಪುರ್‌ನಲ್ಲಿ ಶೇ. ೭೪ರಷ್ಟು ಮತಗಳು ಬಿಜೆಪಿಗೆ ಬಿದ್ದಿವೆ. ಬಾರ್ಡೋಲಿಯಲ್ಲಿ ಶೇ. ೬೬, ಭಾವನಗರ್‌ನ ಎರಡು ಕ್ಷೇತ್ರಗಳಲ್ಲಿ ಶೇ. ೬೩ ಮತ್ತು ಶೇ. ೬೦ ಮತಗಳು ಬಿಜೆಪಿಗೆ ದಕ್ಕಿವೆ. ಇಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿಯ ಜತೆಯಾಗಿದ್ದರೂ ಗೆಲುವು ಸಾಧ್ಯವಿರಲಿಲ್ಲ.
೬. ಪಾಲಿಕೆ ಚುನಾವಣೆಯಿಂದಲೇ ಕಾಂಗ್ರೆಸ್ ವೋಟಿಗೆ ಸ್ಕೆಚ್
ಆಮ್ ಆದ್ಮಿ ಪಾರ್ಟಿಗೆ ಈ ಬಾರಿಯೇ ಅಧಿಕಾರಕ್ಕೆ ಬರುವ ಉದ್ದೇಶವೇನೂ ಇರಲಿಲ್ಲ. ಬದಲಾಗಿ ಕಾಂಗ್ರೆಸ್‌ನ್ನು ಹಿಂದಕ್ಕೆ ತಳ್ಳಿ ಎರಡನೇ ಸ್ಥಾನಕ್ಕೆ ಬರುವ ಉದ್ದೇಶವಿತ್ತು. ಇದು ಈ ಹಿಂದೆ ನಡೆದ ಸೂರತ್, ಗಾಂಧಿನಗರ ಪಾಲಿಕೆ ಚುನಾವಣೆಗಳಲ್ಲಿ ವೇದ್ಯವಾಗಿತ್ತು. ಸೂರತ್ ಪಾಲಿಕೆ ಚುನಾವಣೆಗೆ ಮೊದಲ ಬಾರಿಗೆ ಎಂಟ್ರಿ ಕೊಟ್ಟ ಆಪ್ ಮೊದಲ ಹೊಡೆತದಲ್ಲೇ ಕಾಂಗ್ರೆಸ್ ಹಿಮ್ಮೆಟ್ಟಿಸಿ ಎರಡನೇ ಸ್ಥಾನಕ್ಕೆ ಬಂದಿತ್ತು. ಗಾಂಧಿನಗರದಲ್ಲೂ ಇದೇ ತಂತ್ರ ಅನುಸರಿಸಿತ್ತು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಫಲಿಸಲಿಲ್ಲವಾದರೂ ಕಾಂಗ್ರೆಸ್‌ನ ಮಟ್ಟಿಗೆ ದೊಡ್ಡ ಹೊಡೆತವನ್ನು ನೀಡಿದೆ.
ಇದನ್ನೂ ಓದಿ | Gujarat Election Results | ಗುಜರಾತ್‌ನಲ್ಲಿ ಬಿಜೆಪಿಯ ಚಾರಿತ್ರಿಕ ಜಯಭೇರಿಗೆ 10 ಕಾರಣಗಳೇನು?