| ಹರೀಶ್ ಕೇರ, ಬೆಂಗಳೂರು
ಗುಜರಾತ್‌ನಲ್ಲಿ ಸರ್ಕಾರ ರಚಿಸುವ ಕನಸಿನಲ್ಲಿದ್ದ ಆಮ್ ಆದ್ಮಿ ಪಾರ್ಟಿ ಮುಖಂಡ ಅರವಿಂದ ಕೇಜ್ರಿವಾಲ್ ಅವರಿಗೆ ಹಿನ್ನಡೆಯಾಗಿರಬಹುದು; ಆದರೆ ಅಲ್ಲಿ ಅವರು ಪಡೆದಿರುವ ಲೀಡ್ ಹಾಗೂ ಮತದ ಪ್ರಮಾಣ ಕಡಿಮೆಯೇನಲ್ಲ. ಗುಜರಾತ್‌ನಲ್ಲಿ ಪಡೆದ ಮುನ್ನಡೆಯಿಂದಾಗಿಯೇ ಅದು ಇಂದು ನಾಲ್ಕು ರಾಜ್ಯಗಳಿಗೆ ವ್ಯಾಪಿಸಿದ್ದು, ರಾಷ್ಟ್ರೀಯ ಪಕ್ಷ ಎನಿಸಿಕೊಳ್ಳುವತ್ತ ಹೆಜ್ಜೆ ಮುಂದಿಟ್ಟಿದೆ.
ʻದೆಹಲಿಗೆ ಸೀಮಿತವಾದ ಒಂದು ಎಲೈಟ್ ವರ್ಗದ ಜನಾಂದೋಲನʼ ಎಂದೇ ಒಂದು ಕಾಲದಲ್ಲಿ ಕರೆಸಿಕೊಂಡಿದ್ದ ಆಪ್, ಇಂದು ರಾಷ್ಟ್ರೀಯ ಪಕ್ಷವಾಗುವವರೆಗೆ ಬೆಳೆದು ನಿಂತ ಬಗೆ ಗಮನಾರ್ಹ.
2011ರಲ್ಲಿ ಕೇಂದ್ರದ ಯುಪಿಎ ಸರ್ಕಾರದ ಭ್ರಷ್ಟಾಚಾರದ ಹಗರಣಗಳಿಂದ ರೋಸಿ ಹೋಗಿ, ʻಜನ ಲೋಕಪಾಲ ಕಾಯಿದೆʼಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದಲ್ಲಿ, ʻಭ್ರಷ್ಟಾಚಾರದ ವಿರುದ್ಧ ಭಾರತʼ (ಐಎಸಿ) ಎಂಬ ಹೆಸರಿನ ಬ್ಯಾನರ್‌ನಡಿ ಒಂದು ಸತ್ಯಾಗ್ರಹ ದೆಹಲಿಯಲ್ಲಿ ಆರಂಭವಾಯಿತು. ಎರಡು ವರ್ಷಗಳ ನಿರಂತರ ಹೋರಾಟದ ಬಳಿಕ, ಅರವಿಂದ ಕೇಜ್ರಿವಾಲ್ ನೇತೃತ್ವದ ಒಂದು ಬಣ ಪ್ರತ್ಯೇಕಗೊಂಡು ಅಧಿಕಾರ ರಾಜಕಾರಣಕ್ಕೆ ಮುಂದಾಯಿತು.
2012ರಲ್ಲಿ ಜನಿಸಿದ ಈ ಸಂಘಟನೆ ಆಮ್ ಆದ್ಮಿ ಪಾರ್ಟಿ ಎಂಬ ಹೆಸರಿಟ್ಟುಕೊಂಡಿತು. ʻಭ್ರಷ್ಟಾಚಾರವನ್ನು ಗುಡಿಸಿಹಾಕುವʼ ಪೊರಕೆಯನ್ನು ಚುನಾವಣಾ ಚಿಹ್ನೆಯಾಗಿ ಇಟ್ಟುಕೊಂಡಿತು. ಕೇಜ್ರಿವಾಲ್ ʼಬಿಜ್ಲಿ ಪಾನಿ ಆಂದೋಲನ್ʼ ಆರಂಭಿಸಿದರು. ವಿದ್ಯಾವಂತರು, ಸುಶಿಕ್ಷಿತರು, ನಿವೃತ್ತ ಅಧಿಕಾರಿಗಳು, ಜನಪರ ಚಳವಳಿಗಳ ಮುಖಂಡರು ಸೇರಿ ಕಟ್ಟಿದ ಈ ಪಕ್ಷ ದೆಹಲಿಯ ಜನಕ್ಕೆ ಮೆಚ್ಚುಗೆಯಾಗತೊಡಗಿತು. ಶೀಲಾ ದೀಕ್ಷಿತ್ ಅವರ ಎರಡು ಅವಧಿಯ ಆಡಳಿತದ ನಿಷ್ಕ್ರಿಯತೆ, ಭ್ರಷ್ಟಾಚಾರವೂ ಜನ ಆಪ್‌ಗೆ ಒಲಿಯಲು ಕಾರಣವಾಯಿತು. ಪಕ್ಷ ದೆಹಲಿಯ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಯಿತು.
ದೆಹಲಿ ವಿಧಾನಸಭೆಯಲ್ಲಿ ತಾನು ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ (2013) ಗಣನೀಯ ಸ್ಥಾನಗಳಲ್ಲಿ (70ರಲ್ಲಿ 28) ಆಪ್ ಗೆದ್ದಿತು. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊಮ್ಮಿತಾದರೂ, ಕಾಂಗ್ರೆಸ್ ನೆರವಿನೊಂದಿಗೆ ಆಪ್ ಸರ್ಕಾರ ರಚಿಸಿತು. ಆದರೆ, 49 ದಿನಗಳಲ್ಲಿ ಈ ಸರ್ಕಾರ ಮಗುಚಿತು. ಜನ ಲೋಕಪಾಲ ಕಾಯಿದೆಗೆ ಕಾಂಗ್ರೆಸ್‌ನ ಬೆಂಬಲ ಪಡೆಯಲಾಗದೆ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಷ್ಟ್ರಪತಿ ಆಡಳಿತ ಬಂತು.
2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ 400 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪಕ್ಷ ನಿಲ್ಲಿಸಿತಾದರೂ, ಗೆಲುವು ಕಂಡದ್ದು ಪಂಜಾಬ್‌ನ 4 ಕ್ಷೇತ್ರಗಳಲ್ಲಿ ಮಾತ್ರ. 2015ರಲ್ಲಿ ನಡೆದ ದೆಹಲಿ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಆಪ್ 67 ಕ್ಷೇತ್ರಗಳಲ್ಲಿ ಗೆದ್ದು ಪೂರ್ಣ ಪ್ರಮಾಣದ ಬಹುಮತದೊಂದಿಗೆ ಸರ್ಕಾರ ರಚಿಸಿತು.
2019ರಲ್ಲಿ ನಡೆದ ಮಹಾ ಚುನಾವಣೆಯಲ್ಲಿ ಸೀಮಿತ ಕ್ಷೇತ್ರಗಳಲ್ಲಿ (35) ಸ್ಪರ್ಧಿಸಿದ ಆಪ್, ಒಂದು ಕ್ಷೇತ್ರವನ್ನು ಮಾತ್ರ ಗೆದ್ದುಕೊಂಡಿತು. 2020ರಲ್ಲಿ ಮತ್ತೆ ನಡೆದ ದೆಹಲಿ ಚುನಾವಣೆಯಲ್ಲಿ 62 ಕ್ಷೇತ್ರಗಳನ್ನು ಗೆದ್ದು (ಹಿಂದಿನ ಚುನಾವಣೆಗಿಂತ 5 ಸ್ಥಾನಗಳನ್ನು ಕಳೆದುಕೊಂಡು)ಮತ್ತೆ ಸರ್ಕಾರ ರಚಿಸಿತು.
2022ರ ವರ್ಷಾರಂಭದಲ್ಲಿ ನಡೆದ ಆರು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಆಪ್, ಪಂಜಾಬ್‌ನಲ್ಲಿ ಮಾತ್ರ ಅಭೂತಪೂರ್ವವೆನಿಸುವ ಗೆಲುವನ್ನು ದಾಖಲಿಸಿತು. 112ರಲ್ಲಿ 92 ಕ್ಷೇತ್ರಗಳನ್ನು ಗೆದ್ದು ಸರ್ಕಾರ ರಚಿಸಿತು. ಭಗವಂತ ಮಾನ್ ಮುಖ್ಯಮಂತ್ರಿಯಾದರು.
ಇದನ್ನೂ ಓದಿ | MCD Elections | ಬಿಜೆಪಿಯವರು ಅತಿ ಶ್ರೀಮಂತರಾದ್ರೆ, ಆಪ್ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹೆಚ್ಚು!
ಸ್ಥಳೀಯ ಪಾಲಿಕೆಯಲ್ಲಿ ಸಾಧನೆ
ಸ್ಥಳೀಯ ಮುನಿಸಿಪಲ್ ಚುನಾವಣೆಗಳಲ್ಲಿ ಕೂಡ ಆಪ್ ಅಭ್ಯರ್ಥಿಗಳು ದೆಹಲಿ, ಚಂಡೀಗಢ, ಸೂರತ್‌ಗಳಲ್ಲಿ ಸಾಧನೆ ಮಾಡಿದ್ದಾರೆ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆಯ 250 ವಾರ್ಡ್‌ಗಳ ಚುನಾವಣೆಯಲ್ಲಿ ೧೩೪ ವಾರ್ಡ್‌ಗಳನ್ನು ಆಪ್ ಗೆದ್ದುಕೊಂಡಿದೆ. ಆ ಮೂಲಕ ದೆಹಲಿ ಪಾಲಿಕೆಯಲ್ಲಿದ್ದ 15 ವರ್ಷಗಳ ಬಿಜೆಪಿ ಆಡಳಿತವನ್ನು ತಾನು ಕಿತ್ತುಕೊಂಡಿದೆ. ಪಂಜಾಬ್‌ನ ಚಂಡೀಗಢ ಪಾಲಿಕೆಯಲ್ಲೂ ಆಪ್ ಆಡಳಿತದಲ್ಲಿ ಇದೆ. ಗುಜರಾತ್‌ನ ಸೂರತ್‌ನಲ್ಲಿ 2021ರಲ್ಲಿ ನಡೆದ ಪೌರ ಚುನಾವಣೆಯಲ್ಲಿ 120ರಲ್ಲಿ 27 ಸೀಟು ಗೆದ್ದು ಗಮನಾರ್ಹ ಸಾಧನೆ ಮಾಡಿದೆ.
ದೆಹಲಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯ ಸೇವೆಯಲ್ಲಿ ಆಪ್ ಮಾಡಿದ ಅನೇಕ ಜನಹಿತ ಕಾರ್ಯಕ್ರಮಗಳು ಅಲ್ಲಿನ ಜನರಿಗೆ ಮೆಚ್ಚುಗೆಯಾಗಿವೆ. ಗ್ರಾಮೀಣ ಮೊಹಲ್ಲಾ ಕ್ಲಿನಿಕ್‌ಗಳು, ಮಾದರಿ ಶಾಲೆಗಳು, ಮಹಿಳೆಯರಿಗೆ ಮಾಸಾಶನ, ಉಚಿತ ವಿದ್ಯುತ್ ಮುಂತಾದ ಸ್ಕೀಮ್‌ಗಳು ದೆಹಲಿಯಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದು, ಪಂಜಾಬ್‌ಗೂ ವಿಸ್ತರಣೆಗೊಂಡಿವೆ. ಗುಜರಾತ್‌ನಲ್ಲೂ ಕೇಜ್ರಿವಾಲ್ ಭಾರಿ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದ್ದರಾದರೂ, ಅಲ್ಲಿನ ಜನತೆ ಮೋದಿಯವರಿಂದಾಚೆಗೆ ಯೋಚಿಸಲು ಹೋಗಿಲ್ಲ.
ಇದೀಗ ಆಪ್ ಪಂಜಾಬ್‌ನಲ್ಲಿ 92, ದೆಹಲಿಯಲ್ಲಿ 62, ಗೋವಾದಲ್ಲಿ 2 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ. ಗುಜರಾತ್‌ನಲ್ಲಿ ಕನಿಷ್ಠ 2 ಕ್ಷೇತ್ರಗಳನ್ನು ಗೆದ್ದರೂ ಅದು ರಾಷ್ಟ್ರೀಯ ಪಕ್ಷ ಎನಿಸಿಕೊಳ್ಳುತ್ತದೆ.
ಇದನ್ನೂ ಓದಿ | Delhi MCD Election| 134 ವಾರ್ಡ್‌ಗಳನ್ನು ಗೆದ್ದ ಆಪ್; ಪ್ರಧಾನಿ ನರೇಂದ್ರ ಮೋದಿಯವರಿಂದ ಆಶೀರ್ವಾದ ಕೋರಿದ ಕೇಜ್ರಿವಾಲ್