Site icon Vistara News

Gujarat Election Result | ಇಂದು ಗುಜರಾತ್‌ ಚುನಾವಣೆ ಫಲಿತಾಂಶ, ಯಾರಿಗೆ ಗೆಲುವಿನ ಸಂತೋಷ?

gujarat election

ಗಾಂಧಿನಗರ: ದೇಶದ ಗಮನ ಸೆಳೆದಿರುವ, ೨೦೨೪ರ ಲೋಕಸಭೆ ಚುನಾವಣೆಗೆ ಮುನ್ನುಡಿ ಎಂದೇ ವಿಶ್ಲೇಷಿಸಲಾಗುತ್ತಿರುವ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪ್ರತಿಷ್ಠೆಯಾಗಿರುವ ಗುಜರಾತ್‌ ವಿಧಾನಸಭೆ ಚುನಾವಣೆ ಫಲಿತಾಂಶ (Gujarat Election Result) ಇಂದು (ಗುರುವಾರ, ಡಿಸೆಂಬರ್‌ 8) ಪ್ರಕಟವಾಗಲಿದೆ. ಹಾಗಾಗಿ, ಎಲ್ಲರ ಗಮನವೀಗ ಗುಜರಾತ್‌ ಚುನಾವಣೆ ಫಲಿತಾಂಶದತ್ತ ನೆಟ್ಟಿದೆ. ಅತ್ತ, ಕಾಂಗ್ರೆಸ್‌ ಹಾಗೂ ಆಮ್‌ ಆದ್ಮಿ ಪಕ್ಷಗಳು ಕೂಡ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ತೀವ್ರ ಸ್ಪರ್ಧೆಯೊಡ್ಡಿವೆ.

ಹಾಗಾದರೆ, ಗುಜರಾತ್‌ನಲ್ಲಿ ಯಾವ ಪಕ್ಷ ಅಧಿಕಾರದ ಗದ್ದುಗೆ ಏರುತ್ತದೆ? ಇದುವರೆಗೆ ಪಕ್ಷಗಳು ಹಾಕಿದ ಪರಿಶ್ರಮ, ಜನರಿಗೆ ನೀಡಿದ ಭರವಸೆಗಳೇನು? ಯಾವ ಪಕ್ಷದ ಪರ ಜನರ ಒಲವಿದೆ? ಚುನಾವಣೆ ಪೂರ್ವ ಹಾಗೂ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ? ಈ ಫಲಿತಾಂಶವು ರಾಜಕೀಯ ಪಕ್ಷಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು ಯಾರು ಎಂಬುದು ಸೇರಿ ಹಲವು ವಿಷಯಗಳ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮತಎಣಿಕೆ ಸಮಯ: ಬೆಳಗ್ಗೆ ೮ ಗಂಟೆಯಿಂದ ಆರಂಭ, ಒಟ್ಟು ಕ್ಷೇತ್ರ ೧೮೨, ಮ್ಯಾಜಿಕ್‌ ನಂಬರ್‌ ೯೨

ಸಿಪಿಐ (ಎಂ) ದಾಖಲೆ ಮುರಿಯುವತ್ತ ಬಿಜೆಪಿ ಚಿತ್ತ
ಗುಜರಾತ್‌ನಲ್ಲಿ ಈ ಬಾರಿ ಬಿಜೆಪಿ ಗೆಲುವು ಸಾಧಿಸಿದರೆ ಹಲವು ರೀತಿಯ ದಾಖಲೆಯಾಗಲಿದೆ. ೧೯೯೫ರಿಂದ ಅಧಿಕಾರದಲ್ಲಿರುವ ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಸಿಪಿಐ (ಎಂ) (೧೯೭೭-೨೦೦೦ರವರೆಗೆ ಜ್ಯೋತಿ ಬಸು ಸಿಎಂ, ೨೦೦೦-೨೦೧೧ರವರೆಗೆ ಬುದ್ಧದೇವ ಭಟ್ಟಾಚಾರ್ಯ ಸಿಎಂ) ದಾಖಲೆ ಮುರಿಯುವತ್ತ ಸಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಸತತವಾಗಿ ೩೪ ವರ್ಷ ಸಿಪಿಐ (ಎಂ) ಆಡಳಿತ ನಡೆಸಿದೆ. ಗುಜರಾತ್‌ನಲ್ಲಿ ಬಿಜೆಪಿಯು ೨೭ ವರ್ಷದಿಂದ ಅಧಿಕಾರದಲ್ಲಿದ್ದು, ಈ ಚುನಾವಣೆ ಗೆದ್ದರೆ ಮತ್ತೆ ೫ ವರ್ಷ ಆಡಳಿತ ನಡೆಸಬಹುದು. ಇದಾದ ಬಳಿಕವೂ ಗೆದ್ದರೆ ಸಿಪಿಐ(ಎಂ) ದಾಖಲೆ ಅಳಿಸಬಹುದಾಗಿದೆ. ಈಗ ಗೆದ್ದರೆ ಸತತ ಏಳು ಬಾರಿ ಗೆಲುವು ಸಾಧಿಸಿದ ಸಿಪಿಐ (ಎಂ) ದಾಖಲೆ ಸಮವಾಗುತ್ತದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸು ಅವರೊಬ್ಬರೇ ೨೩ ವರ್ಷ ಸಿಎಂ ಆಗಿದ್ದರು ಎಂಬುದು ವಿಶೇಷ.

ಮತ್ತೊಂದೆಡೆ, ೨೦೨೪ರಲ್ಲಿ ಲೋಕಸಭೆ ಚುನಾವಣೆ ಇರುವುದರಿಂದ, ಗುಜರಾತ್‌, ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಕಾರಣ ಕಮಲ ಪಡೆಗೆ ವಿಧಾನಸಭೆ ಚುನಾವಣೆಯ ಗೆಲುವು ಅತ್ಯಗತ್ಯವಾಗಿದೆ. ಇದೇ ಕಾರಣಕ್ಕಾಗಿ, ನರೇಂದ್ರ ಮೋದಿ ಅವರೊಬ್ಬರೇ ೨೭ ರ‍್ಯಾಲಿ ನಡೆಸಿದ್ದಾರೆ. ಸುಮಾರು ೫೦ ಕಿ.ಮೀ ರೋಡ್‌ ಶೋ ಕೈಗೊಂಡಿದ್ದಾರೆ. ಬಿಜೆಪಿ ಚಾಣಕ್ಯ ಅಮಿತ್‌ ಶಾ ಅವರಂತೂ ಎರಡು ತಿಂಗಳು ಗುಜರಾತ್‌ನಲ್ಲಿಯೇ ವಾಸ್ತವ್ಯ ಹೂಡಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿ ಹಲವು ಪ್ರಮುಖರು ಗುಜರಾತ್‌ನಲ್ಲಿ ಸಾಲು ಸಾಲು ರ‍್ಯಾಲಿ, ಸಮಾವೇಶಗಳನ್ನು ಕೈಗೊಳ್ಳುವ ಮೂಲಕ ಮತದಾರರ ಒಲವು ಬೇರೆಡೆ ವಾಲದಂತೆ ತಡೆಯಲು ಯತ್ನಿಸಿದ್ದಾರೆ.

ಪುಟಿದೇಳುವುದೇ ಕಾಂಗ್ರೆಸ್‌?
ಸಾಲು ಸಾಲು ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌, ಗುಜರಾತ್‌ನಲ್ಲಿ ಪುಟಿದೇಳುವ ನಿರೀಕ್ಷೆಯಲ್ಲಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗುವ ಮೂಲಕ ನಾಯಕತ್ವ ಬಿಕ್ಕಟ್ಟು ತುಸು ಶಮನವಾದಂತಿದೆ. ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ವಾದ್ರಾ ಸೇರಿ ಹಲವು ನಾಯಕರು ಗುಜರಾತ್‌ನಲ್ಲಿ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ.

ಕಳೆದ ಬಾರಿ (೨೦೧೭) ಗುಜರಾತ್‌ನಲ್ಲಿ ಕಾಂಗ್ರೆಸ್‌, ಬಿಜೆಪಿಗೆ ತೀವ್ರ ಸ್ಪರ್ಧೆಯೊಡ್ಡಿತ್ತು. ಆ ಸ್ಪರ್ಧೆಯನ್ನೇ ಈಗ ಗೆಲುವನ್ನಾಗಿ ಮಾಡಲು ಯತ್ನಿಸುತ್ತಿದೆ. ಆದರೆ, ಭಾರತ್‌ ಜೋಡೋ ಯಾತ್ರೆಯಲ್ಲಿ ತೊಡಗಿರುವ ರಾಹುಲ್‌ ಗಾಂಧಿ ಅವರು ಗುಜರಾತ್‌ನಲ್ಲಿ ಕೇವಲ ಎರಡು ರ‍್ಯಾಲಿ ಕೈಗೊಂಡಿದ್ದಾರೆ. ಇದರಿಂದಾಗಿ, ರಾಜ್ಯದಲ್ಲಿ ಪಕ್ಷಕ್ಕೆ ಪ್ರಚಾರದ ಕೊರತೆಯುಂಟಾಗಿದೆ ಎಂದು ಹೇಳಲಾಗುತ್ತಿದೆ.

ಆಮ್‌ ಆದ್ಮಿ ಪಕ್ಷದ ಲೆಕ್ಕಾಚಾರ?
ದೆಹಲಿಯಲ್ಲಿ ಭದ್ರವಾಗಿ ನೆಲೆಯೂರಿರುವ, ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿರುವ, ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಚರಿತ್ರಾರ್ಹ ಗೆಲುವು ಸಾಧಿಸಿರುವ ಆಮ್‌ ಆದ್ಮಿ ಪಕ್ಷವು, ಗುಜರಾತ್‌ನಲ್ಲೂ ಛಾಪು ಮೂಡಿಸಲು ಸಜ್ಜಾಗಿದೆ. ಪದೇಪದೆ ಗುಜರಾತ್‌ಗೆ ಭೇಟಿ ನೀಡಿ, ಸಾಲು ಸಾಲು ಭರವಸೆಗಳ ಮೂಲಕ ಜನರ ವಿಶ್ವಾಸ ಗಳಿಸಲು ಕೇಜ್ರಿವಾಲ್‌ ಯತ್ನಿಸಿದ್ದಾರೆ.

ಹೊಸಬರು ಹಾಗೂ ಯುವಕರಿಗೆ, ಅದರಲ್ಲೂ ಪಾಟೀದಾರ ಸಮುದಾಯದ ನಾಯಕರಿಗೆ ಟಿಕೆಟ್‌ ನೀಡುವ ಮೂಲಕ ರಣತಂತ್ರ ರೂಪಿಸಿದ್ದಾರೆ. ಕೇಜ್ರಿವಾಲ್‌ ಅವರೂ ಸೇರಿ ಹಲವು ನಾಯಕರು ಮನೆ ಮನೆ ಪ್ರಚಾರದ ಮೂಲಕ ಜನರ ಮನಸೆಳೆಯಲು ಯತ್ನಿಸಿದ್ದಾರೆ. ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರದಿದ್ದರೂ, ಕಾಂಗ್ರೆಸ್‌ ಹಾಗೂ ಬಿಜೆಪಿಯ ಮತಗಳನ್ನು ಒಡೆದು, ಶೇ.೧೦-೧೫ರಷ್ಟು ಮತ ಪಡೆದರೆ, ಅದು ಆಪ್‌ಗೆ ಸಿಕ್ಕ ಬಹುದೊಡ್ಡ ಮುನ್ನಡೆ ಎಂದೇ ಎನಿಸಲಿದೆ.

೨೦೧೭ರ ವಿಧಾನಸಭೆ ಚುನಾವಣೆ ಫಲಿತಾಂಶ: ಬಿಜೆಪಿ ೯೯, ಕಾಂಗ್ರೆಸ್‌ ೭೭, ಇತರೆ ೬

ಕಣದಲ್ಲಿರುವ ಪ್ರಮುಖರು
ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಸೇರಿ ಹಲವು ಪ್ರಮುಖರ ಭವಿಷ್ಯವು ಗುರುವಾರ ನಿರ್ಧಾರವಾಗಲಿದೆ. ಭೂಪೇಂದ್ರ ಪಟೇಲ್‌ ಅವರು ಅಹಮದಾಬಾದ್‌ ಜಿಲ್ಲೆಯ ಘಾಟ್ಲೋಡಿಯಾ, ವೀರಂಗಮ್‌ ಕ್ಷೇತ್ರದಲ್ಲಿ ಬಿಜೆಪಿಯ ಹಾರ್ದಿಕ್‌ ಪಟೇಲ್‌, ವಡ್ಗಾಮ್‌ನಲ್ಲಿ ಕಾಂಗ್ರೆಸ್‌ನಿಂದ ದಲಿತ ನಾಯಕ ಜಿಗ್ನೇಶ್‌ ಮೇವಾನಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸುಕ್ರಮ್‌ ರತ್ವಾ ಅವರು ಜೆಟ್ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇವರೆಲ್ಲರ ಭವಿಷ್ಯ, ರಾಜಕೀಯ ಏಳಿಗೆಯು ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ.

ಚುನಾವಣೋತ್ತರ ಸಮೀಕ್ಷೆ ಏನು ಹೇಳುತ್ತವೆ?

ರಿಪಬ್ಲಿಕ್‌ ಟಿವಿ:
ಚುನಾವಣೆ ಪೂರ್ವ ಸಮೀಕ್ಷೆಗಳು ಹೇಳಿದಂತೆ ಚುನಾವಣತ್ತೋರ ಸಮೀಕ್ಷೆಯಲ್ಲೂ ಬಿಜೆಪಿಯೇ ಗುಜರಾತ್‌ನಲ್ಲಿ ಅಧಿಕಾರಕ್ಕೆ ಬರುತ್ತದೆ ಎಂಬುದು ಬಹಿರಂಗವಾಗಿದೆ. ರಿಪಬ್ಲಿಕ್‌ ಟಿವಿ, ಪಿ ಮಾರ್ಕ್‌ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿಯೇ ಮತ್ತೆ ಅಧಿಕಾರದ ಗದ್ದುಗೆಯೇರುವುದು ಖಚಿತವಾಗಿದೆ. ಸಮೀಕ್ಷೆ ಪ್ರಕಾರ ಬಿಜೆಪಿ 128-148, ಕಾಂಗ್ರೆಸ್‌ ೩೦-೪೨, ಆಪ್‌ ೦2-೧೦, ಇತರೆ ಅಭ್ಯರ್ಥಿಗಳು ೩ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ.

ಟೈಮ್ಸ್‌ ನೌ
ಟೈಮ್ಸ್‌ ನೌ ಮತಗಟ್ಟೆ ಸಮೀಕ್ಷೆಯಂತೆ ಬಿಜೆಪಿಯೇ ದಾಖಲೆಯ ಏಳನೇ ಬಾರಿಗೆ ಗೆಲುವು ಸಾಧಿಸುವುದು ನಿಶ್ಚಿತವಾಗಿದೆ. ಒಟ್ಟು ೧೮೨ ಕ್ಷೇತ್ರಗಳಲ್ಲಿ ಬಿಜೆಪಿ ೧೨೮-೧೪೮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್‌ ೩೦-೪೨, ಆಪ್‌ ೨-೧೦ ಹಾಗೂ ಇತರೆ ೦೩ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಮಾಹಿತಿ ನೀಡಿದೆ.

ಜನ್‌ ಕೀ ಬಾತ್‌
ಕಳೆದ ೨೭ ವರ್ಷದಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಮಣಿಸುವವರು ಯಾರೂ ಇಲ್ಲ ಎಂಬುದನ್ನು ಜನ್‌ ಕೀ ಬಾತ್‌ ಸಮೀಕ್ಷೆ ತಿಳಿಸಿದೆ. ರಾಜ್ಯದಲ್ಲಿ ಬಿಜೆಪಿ ೧೧೭-೧೪೦, ಕಾಂಗ್ರೆಸ್‌ ೩೪-೫೧, ಆಪ್‌ ೦೬-೧೩ ಹಾಗೂ ಇತರೆ ಅಭ್ಯರ್ಥಿಗಳು ೦೧-೦೨ ಕ್ಷೇತ್ರದಲ್ಲಿ ಜಯಿಸಲಿದ್ದಾರೆ.

ಟಿವಿ೯
ಮೋದಿ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿ ೧೨೫-೧೩೦, ಕಾಂಗ್ರೆಸ್‌ ೪೦-೫೦, ಅಪ್‌ ೦೩-೦೫ ಹಾಗೂ ಇತರೆ ಅಭ್ಯರ್ಥಿಗಳು ೦೩-೦೭ ಸ್ಥಾನ ಗೆಲ್ಲಲಿದ್ದಾರೆ ಎಂದು ಟಿವಿ೯ ಸಮೀಕ್ಷೆ ತಿಳಿಸಿದೆ.

ಇದನ್ನೂ ಓದಿ | Modi Mega Roadshow | 3 ಗಂಟೆ, 50 ಕಿ.ಮೀ, 16 ಕ್ಷೇತ್ರಗಳಲ್ಲಿ ಮೋದಿ ರೋಡ್‌ ಶೋ, ಗುಜರಾತ್‌ನಲ್ಲಿ ಪ್ರಧಾನಿ ಇತಿಹಾಸ

Exit mobile version