Site icon Vistara News

Gujarat Election results | ಬಿಜೆಪಿ 150 ಸ್ಥಾನ ಗಳಿಸಿದರೆ ಗುಜರಾತ್‌ನಲ್ಲಿ ಸೃಷ್ಟಿಯಾಗಲಿದೆ ಹೊಸ ಇತಿಹಾಸ

budget-2023-reactions from politicians

ಅಹಮಹಾಬಾದ್‌: ಭಾರತೀಯ ಜನತಾ ಪಕ್ಷ ಸತತ ಏಳನೇ ಬಾರಿಗೆ ಗುಜರಾತ್‌ ಆಡಳಿತ ಗದ್ದುಗೆಯನ್ನು ಏರುವುದು ಬಹುತೇಕ ಖಚಿತವೇ ಆಗಿದೆ. ಚುನಾವಣಾ ಮತ ಎಣಿಕೆ ಮುಂದುವರಿಯುತ್ತಿದ್ದಂತೆಯೇ (Gujarat Election results) ಅದರ ಮುನ್ನಡೆಯನ್ನು ಗಮನಿಸಿದರೆ ಅದು ಈ ಬಾರಿ ೧೮೨ ಸದಸ್ಯರ ವಿಧಾನಸಭೆಯಲ್ಲಿ ೧೫೦ರ ಆಸುಪಾಸಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಗೋಚರಿಸುತ್ತದೆ. ಒಂದೊಮ್ಮೆ ಅದು ೧೫೦ರ ಗಡಿಗೆ ಬಂದು ನಿಂತರೆ ಗುಜರಾತ್‌ ಚುನಾವಣಾ ಇತಿಹಾಸದಲ್ಲಿ ಇದೊಂದು ಹೊಸ ದಾಖಲೆಯೇ ಆಗಲಿದೆ. ಯಾಕೆಂದರೆ, ಕಾಂಗ್ರೆಸ್‌ ೧೯೮೫ರ ಚುನಾವಣೆಯಲ್ಲಿ ಗಳಿಸಿದ ೧೪೯ ಸ್ಥಾನಗಳ ದಾಖಲೆಯನ್ನು ಮುರಿಯಲಿದೆ.

1985ರ ಚುನಾವಣೆಯಲ್ಲಿ ಕಾಂಗ್ರೆಸ್‌ ೧೪೯ ಸ್ಥಾನಗಳನ್ನು ಗೆದ್ದಿದ್ದರೆ ಜನತಾ ಪಕ್ಷ ೧೪ ಮತ್ತು ಬಿಜೆಪಿ ೧೧ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇದು ಇತಿಹಾಸದಲ್ಲೇ ಅತಿ ದೊಡ್ಡ ಗೆಲುವು ಎಂದು ದಾಖಲಾಗಿದೆ. ಅದಕ್ಕಿಂತ ಮೊದಲು 1980ರ ಚುನಾವಣೆಯಲ್ಲಿ ಕಾಂಗ್ರೆಸ್‌ ೧೪೧ ಸ್ಥಾನಗಳನ್ನು ಗೆದ್ದಿರುವುದು ಇನ್ನೊಂದು ದಾಖಲೆ. ಆಗ ಜನತಾ ಪಕ್ಷ ೨೧ ಮತ್ತು ಬಿಜೆಪಿ ೯ ಸ್ಥಾನಗಳಲ್ಲಿ ಜಯ ಗಳಿಸಿತ್ತು. ೧೪೧ ಸ್ಥಾನ ಕೂಡಾ ಇದುವರೆಗೆ ಎರಡನೇ ಅತಿ ದೊಡ್ಡ ದಾಖಲೆ ಸಂಖ್ಯೆ.

ಈ ಬಾರಿ ಬಿಜೆಪಿ ಒಂದು ವೇಳೆ ೧೫೦ ಸೀಟುಗಳನ್ನು ಗೆಲ್ಲಲು ಸಾಧ್ಯವಾದರೆ ಅದು ಕಾಂಗ್ರೆಸ್‌ನ್ನು ಈ ದಾಖಲೆಯ ವಿಚಾರದಲ್ಲೂ ಮೀರಿಸಲಿದೆ. ನಿಜವೆಂದರೆ, ಗುಜರಾತ್‌ ನರೇಂದ್ರ ಮೋದಿ ಅವರ ಅತ್ಯಂತ ಪ್ರಬಲ ಶಕ್ತಿ ಕೇಂದ್ರವಾಗಿದ್ದರೂ ೧೨೭ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಅಂದರೆ ೨೦೦೨ರಲ್ಲಿ ಬಿಜೆಪಿ ೧೨೭ ಸ್ಥಾನಗಳನ್ನು ಗೆದ್ದಿತ್ತು.

ಆರು ಬಾರಿ ಎಷ್ಟೆಷ್ಟು ಸ್ಥಾನ?
೧೯೯೫ರ ಬಳಿಕ ಬಿಜೆಪಿ ಸತತವಾಗಿ ಗುಜರಾತ್‌ನಲ್ಲಿ ಗೆಲುವನ್ನು ಸಾಧಿಸುತ್ತಾ ಬರುತ್ತಿದ್ದು, ಆ ಬಳಿಕದ ಅಂಕಿ ಅಂಶವನ್ನು ಗಮನಿಸಿದರೆ ಬಿಜೆಪಿ ೧೯೯೫ರಲ್ಲಿ ೧೨೧, ೧೯೯೮ರಲ್ಲಿ ೧೧೭, ೨೦೦೨ರಲ್ಲಿ ೧೨೭, ೨೦೦೭ರಲ್ಲಿ ೧೧೭, ೨೦೧೨ರಲ್ಲಿ ೧೧೫ ಮತ್ತು ೨೦೧೭ರಲ್ಲಿ ೯೯ ಸ್ಥಾನಗಳನ್ನು ಬಿಜೆಪಿ ಗೆದ್ದಿದೆ.

ಕಾಂಗ್ರೆಸ್‌ ಸ್ಥಾನ ಸಂಖ್ಯೆ ವರ್ಧಿಸಿತ್ತು, ಈ ಬಾರಿ ಕುಸಿತ
ನಿಜವೆಂದರೆ, ಕಳೆದ ಆರು ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್‌ ತನ್ನ ಶಕ್ತಿವರ್ಧನೆ ಮಾಡಿಕೊಳ್ಳುತ್ತಲೇ ಸಾಗಿತ್ತು.
೧೯೯೫ರಲ್ಲಿ ಬಿಜೆಪಿ ೧೨೧ ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್‌ ೪೫ ಸ್ಥಾನದಲ್ಲಿ ಜಯಿಸಿತ್ತು.
೧೯೯೮ರಲ್ಲಿ ಬಿಜೆಪಿ ೧೧೭, ಕಾಂಗ್ರೆಸ್‌ ೫೩ ಸ್ಥಾನದಲ್ಲಿ ಗೆದ್ದಿತ್ತು.
೨೦೦೨ರಲ್ಲಿ ಬಿಜೆಪಿ ೧೨೭ ಸ್ಥಾನದಲ್ಲಿ ಗೆದ್ದರೂ ಕಾಂಗ್ರೆಸ್‌ ಸ್ಥಾನ ಸಂಖ್ಯೆ ೫೧ ಇತ್ತು.
೨೦೦೭ರಲ್ಲಿ ಬಿಜೆಪಿ ೧೧೭ ಸ್ಥಾನಗಳಲ್ಲಿ ಗೆದ್ದರೆ ಕಾಂಗ್ರೆಸ್‌ ೫೯ ಕ್ಷೇತ್ರಗಳಿಗೆ ವರ್ಧಿಸಿತ್ತು.
೨೦೧೨ರಲ್ಲಿ ಬಿಜೆಪಿ ಸ್ಥಾನ ಸಂಖ್ಯೆ ೧೧೫ಕ್ಕೆ ಕುಸಿದು ಕಾಂಗ್ರೆಸ್‌ ೬೧ಕ್ಕೇರಿತ್ತು.
೨೦೧೭ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಭಾರಿ ಪೈಪೋಟಿ ಇದೆ ಎಂದು ಹೇಳಲಾಗಿತ್ತು. ಅಂತಿಮವಾಗಿ ಬಿಜೆಪಿ ೯೯ ಮತ್ತು ಕಾಂಗ್ರೆಸ್‌ ೭೭ ಸ್ಥಾನಗಳನ್ನು ಗೆದ್ದುಕೊಂಡಿದ್ದವು.

ಇದನ್ನೂ ಓದಿ | Himachal pradesh Election | ಆಪರೇಷನ್‌ ಕಮಲ ಭಯ: ಶಾಸಕರನ್ನು ರಾಜಸ್ಥಾನಕ್ಕೆ ಶಿಫ್ಟ್‌ ಮಾಡಲು ಕಾಂಗ್ರೆಸ್‌ ಪ್ಲ್ಯಾನ್‌

Exit mobile version