Site icon Vistara News

Gujarat Election results | ಹೀನಾಯ ಸೋಲು: ಕಾಂಗ್ರೆಸ್‌ಗೆ ಅಧಿಕೃತ ವಿರೋಧ ಪಕ್ಷ ಸ್ಥಾನವೂ ಕೈತಪ್ಪುವ ಆತಂಕ

ರಾಹುಲ್‌ ಗಾಂಧಿ

ಅಹಮದಾಬಾದ್‌: ಗುಜರಾತ್‌ ಚುನಾವಣೆಯ ಮತ ಎಣಿಕೆ ಟ್ರೆಂಡ್‌ ನೋಡಿದರೆ ಬಿಜೆಪಿ ಕ್ಲೀನ್‌ ಸ್ವೀಪ್‌ ಮಾಡುವುದು ಹಂಡ್ರೆಡ್‌ ಪರ್ಸೆಂಟ್‌ ಪಕ್ಕಾ. ಈಗ ಉಳಿದಿರುವ ಪ್ರಶ್ನೆ ಎಂದರೆ ಕಾಂಗ್ರೆಸ್‌ ತನ್ನ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವನ್ನಾದರೂ ಉಳಿಸಿಕೊಳ್ಳುತ್ತದಾ (Gujarat Election results) ಎನ್ನುವುದು.

೧೧.೦೦ ಗಂಟೆಯ ಹೊತ್ತಿನ ಟ್ರೆಂಡ್‌ ಪ್ರಕಾರ, ಬಿಜೆಪಿ ೧೫೫ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದುಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್‌ ೧೮, ಆಮ್‌ ಆದ್ಮಿ ಪಾರ್ಟಿ ೭, ಇತರರು ೨ ಸ್ಥಾನಗಳಲ್ಲಿ ಗೆಲ್ಲುವ ಟ್ರೆಂಡ್‌ ಇದೆ. ಒಂದೊಮ್ಮೆ ಈ ಟ್ರೆಂಡ್‌ ಇದೇ ರೀತಿ ಮುಂದುವರಿದು ಕಾಂಗ್ರೆಸ್‌ ಏನಾದರೂ ೧೭ ಸೀಟಿಗೆ ಇಳಿದರೆ ಅದರ ಅದರ ಅಧಿಕೃತ ವಿರೋಧ ಪಕ್ಷದ ಸ್ಥಾನವೂ ಕೈತಪ್ಪಲಿದೆ.

ಕಾಂಗ್ರೆಸ್‌ ಕಳೆದ ೨೭ ವರ್ಷಗಳಿಂದ ಪ್ರತಿಪಕ್ಷದ ಸ್ಥಾನದಲ್ಲಿದೆ. ಆದರೆ, ಇಷ್ಟೊಂದು ಕುಸಿತವನ್ನು ಇದುವರೆಗೂ ಕಂಡಿರಲಿಲ್ಲ. ಈ ಬಾರಿ ಆಮ್‌ ಆದ್ಮಿ ಪಾರ್ಟಿಯ ಎಂಟ್ರಿ ದೊಡ್ಡ ಹೊಡೆತ ನೀಡಿದೆ ಎಂದು ಹೇಳಲಾಗುತ್ತಿದೆಯಾದರೂ ಅದರ ಸ್ವಯಂಕೃತಾಪರಾಧ ಮತ್ತು ನಿರ್ಲಕ್ಷ್ಯದ ಪಾಲೂ ಈ ಘೋರ ಕುಸಿತದಲ್ಲಿದೆ.

ವಿರೋಧ ಪಕ್ಷ ಸ್ಥಾನಮಾನ ಕೈತಪ್ಪುವುದು ಹೇಗೆ?
ಯಾವುದೇ ಒಂದು ಚುನಾಯಿತ ಪ್ರತಿನಿಧಿ ಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಸಿಗಬೇಕು ಎಂದಿದ್ದರೆ ಅದು ಒಟ್ಟು ಸ್ಥಾನ ಸಂಖ್ಯೆಯ ಶೇಕಡಾ ೧೦ರಷ್ಟು ಸ್ಥಾನಗಳನ್ನಾದರೂ ಗೆದ್ದಿರಬೇಕು. ಅಂದರೆ ಗುಜರಾತ್‌ ವಿಧಾನಸಭೆಯನ್ನು ತೆಗೆದುಕೊಂಡರೆ ೧೮೨ ಸ್ಥಾನಗಳ ಪೈಕಿ ಕನಿಷ್ಠ ೧೮ ಸ್ಥಾನಗಳನ್ನಾದರೂ ಗೆಲ್ಲಬೇಕು. ಕಾಂಗ್ರೆಸ್‌ ಈ ಬಾರಿ ೧೮ ಸ್ಥಾನ ಗೆಲ್ಲುತ್ತದೋ? ಇಲ್ಲವೋ ಎನ್ನುವುದೇ ಈಗ ಪ್ರಶ್ನೆಯಾಗಿದೆ. ಕೆಲವೊಮ್ಮೆ ಪ್ರತಿಪಕ್ಷಗಳ ಮೈತ್ರಿಕೂಟ ರಚನೆಯ ಅವಕಾಶ ಇದೆಯಾದರೂ ಕಾಂಗ್ರೆಸ್‌ ಜತೆ ಕೈಜೋಡಿಸುವವರು ಈಗ ಕಡಿಮೆ.

ನಿಜವೆಂದರೆ, ಕಾಂಗ್ರೆಸ್‌ ಹಿಂದೆ ಬಲಾಢ್ಯ ಶಕ್ತಿಯಾಗಿದ್ದಾಗ ಅದಕ್ಕೆ ಪ್ರತಿಪಕ್ಷವೇ ಇರಲಿಲ್ಲ. ೧೯೮೫ರ ಚುನಾವಣೆಯಲ್ಲಿ ಕಾಂಗ್ರೆಸ್‌ ೧೪೯ ಸ್ಥಾನ ಗೆದ್ದಾಗ ಜನತಾ ಪಕ್ಷ ೧೩ ಮತ್ತು ಬಿಜೆಪಿ ೧೧ ಸ್ಥಾನ ಪಡೆದಿತ್ತು. ಅದಕ್ಕಿಂತ ಮೊದಲು ೧೯೮೦ರಲ್ಲಿ ಕಾಂಗ್ರೆಸ್‌ಗೆ ೧೪೧ ಸ್ಥಾನ ಗಳಿಸಿತ್ತು. ಆಗ ಜನತಾ ಪಕ್ಷ ೨೩, ಬಿಜೆಪಿ ೦೯ ಸ್ಥಾನದಲ್ಲಿ ಗೆದ್ದಿತ್ತು.

ನಿಜವೆಂದರೆ, ಕಳೆದ ೨೭ ವರ್ಷಗಳಿಂದ ಕಾಂಗ್ರೆಸ್‌ ವಿರೋಧ ಪಕ್ಷದಲ್ಲಿದ್ದರೂ ಬಿಜೆಪಿಗೆ ಸಡ್ಡು ಹೊಡೆಯುತ್ತಲೇ ಇದೆ. ಅದರಲ್ಲೂ ೨೦೧೭ರ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಖಚಿತ ಎನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್‌ನ ಹವಾ ಇತ್ತು. ಅದರೆ, ಕೇವಲ ಐದು ವರ್ಷದಲ್ಲಿ ಅದರ ಶಕ್ತಿ ಈಗ ಕುಸಿದಂತಾಗಿದೆ.

೧೯೯೫ರಲ್ಲಿ ಬಿಜೆಪಿ ೧೨೧ ಸ್ಥಾನ ಗೆದ್ದಿದ್ದರೆ, ಕಾಂಗ್ರೆಸ್‌ ೪೫ ಸ್ಥಾನದಲ್ಲಿ ಜಯಿಸಿತ್ತು.
೧೯೯೮ರಲ್ಲಿ ಬಿಜೆಪಿ ೧೧೭, ಕಾಂಗ್ರೆಸ್‌ ೫೩ ಸ್ಥಾನದಲ್ಲಿ ಗೆದ್ದಿತ್ತು.
೨೦೦೨ರಲ್ಲಿ ಬಿಜೆಪಿ ೧೨೭ ಸ್ಥಾನದಲ್ಲಿ ಗೆದ್ದರೂ ಕಾಂಗ್ರೆಸ್‌ ಸ್ಥಾನ ಸಂಖ್ಯೆ ೫೧ ಇತ್ತು.
೨೦೦೭ರಲ್ಲಿ ಬಿಜೆಪಿ ೧೧೭ ಸ್ಥಾನಗಳಲ್ಲಿ ಗೆದ್ದರೆ ಕಾಂಗ್ರೆಸ್‌ ೫೯ ಕ್ಷೇತ್ರಗಳಿಗೆ ವರ್ಧಿಸಿತ್ತು.
೨೦೧೨ರಲ್ಲಿ ಬಿಜೆಪಿ ಸ್ಥಾನ ಸಂಖ್ಯೆ ೧೧೫ಕ್ಕೆ ಕುಸಿದು ಕಾಂಗ್ರೆಸ್‌ ೬೧ಕ್ಕೇರಿತ್ತು.
೨೦೧೭ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ಭಾರಿ ಪೈಪೋಟಿ ಇದೆ ಎಂದು ಹೇಳಲಾಗಿತ್ತು. ಅಂತಿಮವಾಗಿ ಬಿಜೆಪಿ ೯೯ ಮತ್ತು ಕಾಂಗ್ರೆಸ್‌ ೭೭ ಸ್ಥಾನಗಳನ್ನು ಗೆದ್ದುಕೊಂಡಿದ್ದವು.

ಲೋಕಸಭೆಯಲ್ಲೂ ಅಧಿಕೃತ ಸ್ಥಾನಮಾನ ಇಲ್ಲ
ನಿಜವೆಂದರೆ, ಕಾಂಗ್ರೆಸ್‌ಗೆ ಲೋಕಸಭೆಯಲ್ಲೂ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ತಪ್ಪಿ ಎಂಟು ವರ್ಷಗಳೇ ಕಳೆದುಹೋಗಿದೆ. ೨೦೧೪ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಆವತ್ತಿನ ಲೋಕಸಭಾ ಚುನಾವಣೆಯಲ್ಲಿ ೪೪ ಸ್ಥಾನಕ್ಕೆ ಇಳಿದಿತ್ತು. ೨೦೧೯ರಲ್ಲಿ ಈ ಸ್ಥಾನ ಸಂಖ್ಯೆ ೫೨ಕ್ಕೇರಿದೆಯಾದರೂ ಅಧಿಕೃತ ಸ್ಥಾನಮಾನ ಸಿಗಲಿಲ್ಲ. ಯಾಕೆಂದರೆ ೫೪೩ ಸ್ಥಾನಗಳ ಲೋಕಸಭೆಯಲ್ಲಿ ಶೇಕಡಾ ೧೦ ಸ್ಥಾನ ಅಂದರೆ ಕನಿಷ್ಠ ೫೫ ಸ್ಥಾನಗಳಾದರೂ ಬೇಕು. ಅದೇ ಕಾರಣಕ್ಕೆ ೨೦೧೪ರಿಂದ ೨೦೧೯ರವರೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿದ್ದರಷ್ಟೇ ಹೊರತು ಅಧಿಕೃತ ವಿರೋಧ ಪಕ್ಷದ ನಾಯಕರಾಗಿರಲಿಲ್ಲ.

ಇದನ್ನೂ ಓದಿ | Gujarat Election results | ಬಿಜೆಪಿ 150 ಸ್ಥಾನ ಗಳಿಸಿದರೆ ಗುಜರಾತ್‌ನಲ್ಲಿ ಸೃಷ್ಟಿಯಾಗಲಿದೆ ಹೊಸ ಇತಿಹಾಸ

Exit mobile version