Site icon Vistara News

ನಿತ್ಯಾನಂದನಿಂದ ಪುತ್ರಿಯರನ್ನು ಬಿಡಿಸಿ ಎಂದು ಕೋರ್ಟ್‌ ಮೊರೆ ಹೋದ ತಂದೆ; ಮುಂದೇನಾಯ್ತು?

Swami Nithyananda

Gujarat HC rejects plea of man claiming his two daughters kept in illegal confinement of godman Nithyananda

ಗಾಂಧಿನಗರ: ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ, ಈಕ್ವೆಡಾರ್‌ನಲ್ಲಿ ದ್ವೀಪವೊಂದನ್ನು ಖರೀದಿಸಿ, ಅಲ್ಲಿಯೇ “ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸ” ಎಂಬ ದೇಶ ನಿರ್ಮಿಸಿರುವ ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ (Swami Nithyananda) ಕುರಿತ ಸುದ್ದಿಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಆತನ ಆರೋಗ್ಯ, ಕೈಲಾಸದ ಚಟುವಟಿಕೆಗಳು ಸುದ್ದಿಯಾಗುತ್ತಲೇ ಇರುತ್ತವೆ. ಇದರ ಮಧ್ಯೆಯೇ, “ನನ್ನ ಇಬ್ಬರು ಪುತ್ರಿಯರನ್ನು ಸ್ವಾಮಿ ನಿತ್ಯಾನಂದನು ಅಕ್ರಮವಾಗಿ ಬಂಧಿಸಿ, ಆಶ್ರಮದಲ್ಲಿಯೇ ಇರಿಸಿಕೊಂಡಿದ್ದಾನೆ. ನನ್ನ ಪುತ್ರಿಯರನ್ನು ಬಿಡಿಸಿಕೊಡಿ” ಎಂದು ವ್ಯಕ್ತಿಯೊಬ್ಬರು ಗುಜರಾತ್‌ ಹೈಕೋರ್ಟ್‌ (Gujarat High Court) ಮೊರೆ ಹೋಗಿದ್ದಾರೆ. ಆದರೆ, ಗುಜರಾತ್‌ ಹೈಕೋರ್ಟ್‌, ವ್ಯಕ್ತಿಯ ಅರ್ಜಿಯನ್ನು ತಿರಸ್ಕರಿಸಿದೆ.

ಗುಜರಾತ್‌ನ ಜನಾರ್ದನ ಶರ್ಮಾ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2019ರ ನವೆಂಬರ್‌ನಲ್ಲಿಯೇ ಇವರು ಅರ್ಜಿ ಸಲ್ಲಿಸಿದ್ದರು. “ನನ್ನ 21 ಹಾಗೂ 18 ವರ್ಷದ ಇಬ್ಬರು ಪುತ್ರಿಯರನ್ನು ಸ್ವಾಮಿ ನಿತ್ಯಾನಂದನು ಅಕ್ರಮವಾಗಿ ಬಂಧಿಸಿಟ್ಟುಕೊಂಡಿದ್ದಾನೆ. ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಆಶ್ರಮದಲ್ಲಿ ಬಂಧಿಸಿದ್ದ ಈತನು, ಬಳಿಕ ದೇಶದಿಂದಲೇ ಪರಾರಿಯಾಗುವಾಗ ಅವರನ್ನು ಕರೆದುಕೊಂಡು ಹೋಗಿದ್ದಾನೆ” ಎಂದು ಅರ್ಜಿ ಸಲ್ಲಿಸಿದ್ದರು. ಆದರೆ, ಗುಜರಾತ್‌ ಹೈಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಎ.ವೈ.ಕೋಗ್ಜೆ ಹಾಗೂ ರಾಜೇಂದ್ರ ಎಂ. ಸರೀನ್‌ ಅವರು ಜನಾರ್ದನ ಶರ್ಮಾ ಅವರ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಅರ್ಜಿ ತಿರಸ್ಕರಿಸಲು ಕಾರಣವೇನು?

ಜನಾರ್ದನ ಶರ್ಮಾ ಅವರ ಇಬ್ಬರು ಪುತ್ರಿಯರು 2024ರ ಜನವರಿ 10ರಂದು ವಿಡಿಯೊ ಲಿಂಕ್‌ ಮೂಲಕ ಹೈಕೋರ್ಟ್‌ ಎದುರು ಹಾಜರಾಗಿದ್ದಾರೆ. “ನಮ್ಮನ್ನು ಯಾರೂ ಬಲವಂತವಾಗಿ ಬಂಧಿಸಿಲ್ಲ. ನಾವು ಸ್ವಯಂಪ್ರೇರಿತರಾಗಿಯೇ ಅಧ್ಯಾತ್ಮದ ಹಾದಿ ಹಿಡಿದಿದ್ದೇವೆ. ನಾವು ಬಂಧನದಲ್ಲಿ ಇಲ್ಲ, ಮುಕ್ತವಾಗಿದ್ದೇವೆ ಹಾಗೂ ನಮ್ಮ ಆಯ್ಕೆಯಿಂದ ನಾವು ಸಂತಸದಿಂದ ಇದ್ದೇವೆ” ಎಂದು ನ್ಯಾಯಮೂರ್ತಿಗಳಿಗೆ ಇಬ್ಬರೂ ಯುವತಿಯರು ಹೇಳಿದ್ದರು. ಇದರಿಂದಾಗಿ ನ್ಯಾಯಾಲಯವು ಜನಾರ್ದನ ಶರ್ಮಾ ಅವರ ಅರ್ಜಿಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ: ಸ್ವಾಮಿ ನಿತ್ಯಾನಂದನ ‘ಕೈಲಾಸ’ ಜತೆ ಒಪ್ಪಂದ! ಮೂರ್ಖನಾದ ಪರಗ್ವೆ ಅಧಿಕಾರಿ ವಜಾ

“ಇಬ್ಬರೂ ಹೆಣ್ಣುಮಕ್ಕಳು ಪ್ರೌಢಾವಸ್ಥೆ ತಲುಪಿದ್ದಾರೆ. ಅವರಿಬ್ಬರಿಗೂ 18 ವರ್ಷ ತುಂಬಿರುವ ಕಾರಣ, ಅವರ ಜೀವನದ ಬಗ್ಗೆ ಅವರು ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರಾಗಿದ್ದಾರೆ. ಇಬ್ಬರು ಕೂಡ ಕೋರ್ಟ್‌ ಎದುರು ವರ್ಚ್ಯುವಲ್‌ ಮೂಲಕ ಹಾಜರಾಗಿ, ತಾವು ಸಂತಸದಿಂದ ಇದ್ದೇವೆ. ಯಾರೂ ತಮ್ಮನ್ನು ಬಲವಂತವಾಗಿ, ಅಕ್ರಮವಾಗಿ ಬಂಧಿಸಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಹಾಗಾಗಿ, ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ” ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಿಲುಕಿರುವ ಬಿಡದಿ ಧ್ಯಾನಪೀಠದ ಸ್ವಾಮಿ ನಿತ್ಯಾನಂದನು, 2019ರಲ್ಲಿ ಭಾರತದಿಂದ ಪರಾರಿಯಾಗಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version