ನವದೆಹಲಿ: ಅಗತ್ಯ ವಸ್ತುಗಳ ಬೆಲೆಯೇರಿಕೆ, ಆಡಳಿತವಿರೋಧಿ ಅಲೆ, ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ, ಆಮ್ ಆದ್ಮಿ ಪಕ್ಷದ ಭರವಸೆಗಳ ಮಹಾಪೂರವನ್ನು ಮೀರಿಯೂ ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯೇ ಗೆಲುವಿನ ನಗಾರಿ ಬಾರಿಸುವುದು ಖಚಿತ ಎಂದು ಚುನಾವಣೋತ್ತರವಾಗಿ (Exit Poll 2022) ಸಂಸ್ಥೆಗಳು ನಡೆಸಿದ ಬಹುತೇಕ ಸಮೀಕ್ಷೆಗಳು ತಿಳಿಸಿವೆ. ಆಯಾ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ರಿಪಬ್ಲಿಕ್ ಟಿವಿ
ಗುಜರಾತ್: ರಿಪಬ್ಲಿಕ್ ಟಿವಿ, ಪಿ ಮಾರ್ಕ್ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆ ಪ್ರಕಾರ ಗುಜರಾತ್‌ನಲ್ಲಿ ಬಿಜೆಪಿಯೇ ಮತ್ತೆ ಅಧಿಕಾರದ ಗದ್ದುಗೆಯೇರುವುದು ಖಚಿತವಾಗಿದೆ. ಸಮೀಕ್ಷೆ ಪ್ರಕಾರ ಬಿಜೆಪಿ 128-148, ಕಾಂಗ್ರೆಸ್ ೩೦-೪೨, ಆಪ್ ೦2-೧೦, ಇತರೆ ಅಭ್ಯರ್ಥಿಗಳು ೩ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ.
ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಬಿಜೆಪಿಯ ಜೈರಾಮ್ ಠಾಕೂರ್ ಅವರೇ ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವುದು ಖಚಿತ ಎಂದು ರಿಪಬ್ಲಿಕ್ ಟಿವಿ ಸಮೀಕ್ಷೆ ತಿಳಿಸಿದೆ. ರಾಜ್ಯದಲ್ಲಿ ಬಿಜೆಪಿ ೩೪-೩೯, ಕಾಂಗ್ರೆಸ್ ೨೮-೩೩, ಆಪ್ ೦೧ ಹಾಗೂ ಇತರೆ ಅಭ್ಯರ್ಥಿಗಳು ೦೧-೦೪ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಟೈಮ್ಸ್ ನೌ
ಗುಜರಾತ್: ಟೈಮ್ಸ್ ನೌ ಮತಗಟ್ಟೆ ಸಮೀಕ್ಷೆಯಂತೆ ಬಿಜೆಪಿಯೇ ದಾಖಲೆಯ ಏಳನೇ ಬಾರಿಗೆ ಗೆಲುವು ಸಾಧಿಸುವುದು ನಿಶ್ಚಿತವಾಗಿದೆ. ಒಟ್ಟು ೧೮೨ ಕ್ಷೇತ್ರಗಳಲ್ಲಿ ಬಿಜೆಪಿ ೧೨೮-೧೪೮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ೩೦-೪೨, ಆಪ್ ೨-೧೦ ಹಾಗೂ ಇತರೆ ೦೩ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ ಎಂದು ಮಾಹಿತಿ ನೀಡಿದೆ.
ಹಿಮಾಚಲ ಪ್ರದೇಶ: ಹಿಮ ಕಣಿವೆಯಲ್ಲಿಯೂ ಬಿಜೆಪಿ ಗೆಲುವು ನಿಶ್ಚಿತ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಬಿಜೆಪಿ ೩೮, ಕಾಂಗ್ರೆಸ್ ೨೮, ಆಪ್ ಸೊನ್ನೆ ಹಾಗೂ ಇತರೆ ೨ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿವೆ. ನಿರೀಕ್ಷೆ ಹುಟ್ಟಿಸಿದ್ದ ಆಪ್ ಇಲ್ಲಿ ಮಕಾಡೆ ಮಲಗುತ್ತದೆ ಎಂಬುದಾಗಿ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
ಜನ್ ಕೀ ಬಾತ್
ಗುಜರಾತ್: ಕಳೆದ ೨೭ ವರ್ಷದಿಂದ ಗುಜರಾತ್‌ನಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಮಣಿಸುವವರು ಯಾರೂ ಇಲ್ಲ ಎಂಬುದನ್ನು ಜನ್ ಕೀ ಬಾತ್ ಸಮೀಕ್ಷೆ ತಿಳಿಸಿದೆ. ರಾಜ್ಯದಲ್ಲಿ ಬಿಜೆಪಿ ೧೧೭-೧೪೦, ಕಾಂಗ್ರೆಸ್ ೩೪-೫೧, ಆಪ್ ೦೬-೧೩ ಹಾಗೂ ಇತರೆ ಅಭ್ಯರ್ಥಿಗಳು ೦೧-೦೨ ಕ್ಷೇತ್ರದಲ್ಲಿ ಜಯಿಸಲಿದ್ದಾರೆ.
ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಬಿಜೆಪಿಯು ೩೨-೪೦ ಕ್ಷೇತ್ರದಲ್ಲಿ ಜಯಿಸುವ ಮೂಲಕ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ತಿಳಿಸಿದೆ. ಕಾಂಗ್ರೆಸ್ ೨೭-೩೪ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ, ಆಪ್ ಸೊನ್ನೆ ಸುತ್ತಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಟಿವಿ೯
ಗುಜರಾತ್: ಮೋದಿ ತವರು ರಾಜ್ಯವಾದ ಗುಜರಾತ್‌ನಲ್ಲಿ ಬಿಜೆಪಿ ೧೨೫-೧೩೦, ಕಾಂಗ್ರೆಸ್ ೪೦-೫೦, ಅಪ್ ೦೩-೦೫ ಹಾಗೂ ಇತರೆ ಅಭ್ಯರ್ಥಿಗಳು ೦೩-೦೭ ಸ್ಥಾನ ಗೆಲ್ಲಲಿದ್ದಾರೆ ಎಂದು ಟಿವಿ೯ ಸಮೀಕ್ಷೆ ತಿಳಿಸಿದೆ.
ಹಿಮಾಚಲ ಪ್ರದೇಶ: ಹಿಮ ಕಣಿವೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಇದೆ ಎಂದು ಟಿವಿ೯ ಸಮೀಕ್ಷೆ ತಿಳಿಸಿದೆ. ಬಿಜೆಪಿಯು ೩೨-೩೪ ಸ್ಥಾನದಲ್ಲಿ ಗೆದ್ದರೆ, ಕಾಂಗ್ರೆಸ್ ೩೦-೩೨ ಕ್ಷೇತ್ರ ಗೆದ್ದು ಬಿಜೆಪಿಗೆ ಟಕ್ಕರ್ ಕೊಡಲಿದೆ. ಇನ್ನು ಆಪ್ ಸೊನ್ನೆ, ಇತರೆ ೦೩-೦೫ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿವೆ ಎಂದು ಸಮೀಕ್ಷೆ ಮಾಹಿತಿ ನೀಡಿದೆ.
ಬಹುತೇಕ ಸಮೀಕ್ಷೆಗಳಲ್ಲೂ ಇದೇ ಹೈಲೈಟ್
ಇಂಡಿಯಾ ಟಿವಿ, ಜೀ ನ್ಯೂಸ್, ಪೋಲ್ ಆಫ್ ಪೋಲ್ಸ್, ಸಿಎನ್‌ಎನ್, ನ್ಯೂಸ್ ಎಕ್ಸ್, ಇಟಿಜಿ ಸೇರಿ ಎಲ್ಲ ಸಮೀಕ್ಷೆಗಳಲ್ಲೂ ಬಿಜೆಪಿಯೇ ಜಯಭೇರಿಯಾಗಲಿದೆ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ, ಗೆಲುವಿನ ಆಸೆ ಕಾಣುತ್ತಿದ್ದ ಕಾಂಗ್ರೆಸ್ ಹಾಗೂ ಆಪ್‌ಗೆ ಸಮೀಕ್ಷೆಯ ವರದಿಗಳಿಂದ ಹಿನ್ನಡೆಯಾದಂತಿದೆ. ಆದಾಗ್ಯೂ, ನಿಖರ ಚಿತ್ರಣಕ್ಕಾಗಿ ಡಿಸೆಂಬರ್ ೮ರಂದು ಪ್ರಕಟವಾಗುವ ಫಲಿತಾಂಶದವರೆಗೆ ಕಾಯಬೇಕಿದೆ.
ಇದನ್ನೂ ಓದಿ | MCD Exit Poll | ದಿಲ್ಲಿಯಲ್ಲಿ ಬಿಜೆಪಿಗೆ ಮುಖಭಂಗ, ಆಪ್‌ಗೆ ಭರ್ಜರಿ ಜಯ!