ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ (Delhi Excise Policy Case) ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಜೈಲುಪಾಲಾಗಿದ್ದಾರೆ. ಇದರ ಬೆನ್ನಲ್ಲೇ, ಅರವಿಂದ್ ಕೇಜ್ರಿವಾಲ್ ವಿರುದ್ಧ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಗಂಭೀರ ಆರೋಪ ಮಾಡಿದ್ದಾನೆ. “ಖಲಿಸ್ತಾನಿ ಸಂಘಟನೆಗಳಿಂದ ಆಮ್ ಆದ್ಮಿ ಪಕ್ಷಕ್ಕೆ ಸುಮಾರು 133 ಕೋಟಿ ರೂ. (16 ದಶಲಕ್ಷ ಡಾಲರ್) ನೀಡಲಾಗಿದೆ” ಎಂಬುದಾಗಿ ಗುರುಪತ್ವಂತ್ ಸಿಂಗ್ ಪನ್ನುನ್ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಆರೋಪಿಸಿದ್ದಾನೆ. ಇದು ಈಗ ಭಾರಿ ಸಂಚಲನ ಮೂಡಿಸಿದೆ.
“ಖಲಿಸ್ತಾನಿ ಗ್ರೂಪ್‌ಗಳಿಂದ ಆಮ್ ಆದ್ಮಿ ಪಕ್ಷಕ್ಕೆ 2014ರಿಂದ 2022ರ ಅವಧಿಯಲ್ಲಿ 16 ದಶಲಕ್ಷ ಡಾಲರ್ ಸಂದಾಯವಾಗಿದೆ. 1993ರ ದೆಹಲಿ ಬಾಂಬ್ ದಾಳಿಕೋರ ದೇವಿಂದರ್ ಪಾಲ್ ಸಿಂಗ್ ಭುಲ್ಲರ್‌ನನ್ನು ಬಿಡುಗಡೆಗೊಳಿಸುವ ಕುರಿತು ಅರವಿಂದ್ ಕೇಜ್ರಿವಾಲ್ ಅವರು ಭರವಸೆ ನೀಡಿದ್ದರು. ಅದರಂತೆ, ಅವರ ಪಕ್ಷಕ್ಕೆ ಖಲಿಸ್ತಾನಿ ಪ್ರತ್ಯೇಕವಾದಿ ಸಂಘಟನೆಗಳು 133 ಕೋಟಿ ರೂಪಾಯಿ ನೀಡಿವೆ” ಎಂದು ಗುರುಪತ್ವಂತ್ ಸಿಂಗ್ ಪನ್ನುನ್ ಹರಿಬಿಟ್ಟ ವಿಡಿಯೊದಲ್ಲಿ ಆರೋಪಿಸಿದ್ದಾನೆ.
⚡ BREAKING: US based CIA Backed Khalistani Terrorist Gurpatwant Singh Pannun claims they funded @AamAadmiParty with $16.7 million between 2014-2022.
— Arun Pudur (@arunpudur) March 25, 2024
He Claims @ArvindKejriwal offered to release the terrorist Bhullar in exchange for the funds.
Bhullar is the convict of the… pic.twitter.com/1bZX6dSRIQ
“ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಗುರುದ್ವಾರ ರಿಚಮಂಡ್ ಹಿಲ್ಸ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ಖಲಿಸ್ತಾನ ಪರವಾಗಿರುವ ಸಿಖ್ಖರು ಸಭೆ ನಡೆಸಿದ್ದರು. ಹಣಕಾಸು ನೆರವು ನೀಡಿದರೆ 1993ರ ದಾಳಿಯ ಉಗ್ರ ದೇವಿಂದರ್ ಪಾಲ್ ಸಿಂಗ್ ಭುಲ್ಲರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲು ನೆರವು ನೀಡುವುದಾಗಿ ಭರವಸೆ ನೀಡಿದ್ದರು” ಎಂಬುದಾಗಿ ಗುರುಪತ್ವಂತ್ ಸಿಂಗ್ ಪನ್ನುನ್ ಆರೋಪಿಸಿದ್ದಾನೆ.
ಇದನ್ನೂ ಓದಿ: Arvind Kejriwal: “ಸಂಪೂರ್ಣ ನಿರಾಶೆಯಾಗಿದೆ….” ಕೇಜ್ರಿವಾಲ್ ಬಗ್ಗೆ ನ್ಯಾ. ಸಂತೋಷ್ ಹೆಗ್ಡೆ ಹೇಳಿದ್ದೇನು?
ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿರುವ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 9 ಸಮನ್ಸ್ ನೀಡಿದರೂ ಅರವಿಂದ್ ಕೇಜ್ರಿವಾಲ್ ಹಾಜರಾಗಿರಲಿಲ್ಲ. ಇದಾದ ಬಳಿಕ ಇ.ಡಿ ಅಧಿಕಾರಿಗಳು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದು, ನ್ಯಾಯಾಲಯವು ಅವರನ್ನು ಮಾರ್ಚ್ 28ರವರೆಗೆ ಇ.ಡಿ ಕಸ್ಟಡಿಗೆ ವಹಿಸಿದೆ. ಇನ್ನು, ಅರವಿಂದ್ ಕೇಜ್ರಿವಾಲ್ ಅವರ ಬಂಧನ ಖಂಡಿಸಿ ಇಂಡಿಯಾ ಒಕ್ಕೂಟದ ನಾಯಕರು ಮಾರ್ಚ್ 31ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ತೀರ್ಮಾನಿಸಿವೆ.
ದೆಹಲಿ ಸರ್ಕಾರವು 2021ರ ನವೆಂಬರ್ 17ರಂದು ಅಬಕಾರಿ ನೀತಿಯನ್ನು ಜಾರಿಗೆ ತಂದಿತ್ತು. ಆದರೆ ಭ್ರಷ್ಟಾಚಾರದ ಆರೋಪದ ನಡುವೆ 2022ರ ಸೆಪ್ಟೆಂಬರ್ ಕೊನೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು. ತನಿಖಾ ಸಂಸ್ಥೆಗಳ ಪ್ರಕಾರ ಹೊಸ ನೀತಿಯ ಅಡಿಯಲ್ಲಿ ಸಗಟು ವ್ಯಾಪಾರಿಗಳ ಲಾಭಾಂಶವನ್ನು ಶೇ.5ರಿಂದ 12ಕ್ಕೆ ಹೆಚ್ಚಿಸಲಾಗಿತ್ತು. ಅಬಕಾರಿ ನೀತಿ ಜಾರಿ ವೇಳೆ ನೂರಾರು ಕೋಟಿ ರೂಪಾಯಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಕೆ. ಕವಿತಾ ಅವರ ಪಾಲೂ ಇದೆ ಎಂಬ ಆರೋಪವಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಕೆ. ಕವಿತಾ ಅವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ