ಲಖನೌ: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ (Gyanvapi Mosque, Gyanvapi Masjid) ಭಾರತೀಯ ಪುರಾತತ್ವ ಸರ್ವೇಕ್ಷಣೆಯ (Archaeological Survey of India – ASI) ಸಮೀಕ್ಷೆಯ ವರದಿಯು ವಿವಾದದ (Gyanvapi Case) ಹೊಸ ಅಲೆಯನ್ನು ಹುಟ್ಟುಹಾಕಿದೆ. ಸಮೀಕ್ಷೆ ವರದಿಯಿಂದ ಬಹಿರಂಗವಾಗಿರುವ ಕೆಲವು ಫೋಟೋಗಳು ಮಸೀದಿ ಸಂಕೀರ್ಣದೊಳಗೆ ಲಭ್ಯವಾದ ಹಿಂದೂ ದೇವತೆಗಳ (Hindu Idols) ಪ್ರತಿಮೆಗಳು ಮತ್ತು ಪ್ರತಿಮಾಶಾಸ್ತ್ರದ ಇತರ ಹಲವು ತುಣುಕುಗಳನ್ನು ಪ್ರದರ್ಶಿಸಿವೆ.
ಹನುಮಾನ್, ಗಣೇಶ ಮತ್ತು ನಂದಿಯಂತಹ ಹಿಂದೂ ದೇವತೆಗಳ ಭಗ್ನಗೊಂಡ ವಿಗ್ರಹಗಳನ್ನು ತೋರಿಸುವ ಅನೇಕ ಫೋಟೋಗಳನ್ನು ಸಮೀಕ್ಷೆಯ ವರದಿ ಒಳಗೊಂಡಿದೆ ಎಂದು ʼಇಂಡಿಯಾ ಟುಡೇʼ ಮೀಡಿಯಾ ವರದಿ ಮಾಡಿದೆ. ಈ ಫೋಟೋಗಳಲ್ಲಿ ಶಿವಲಿಂಗದ ತಳಭಾಗವಾದ ಯೋನಿಪೀಠಗಳು ಕೂಡ ಲಭ್ಯವಾಗಿವೆ. ಅಂದರೆ ಇಲ್ಲಿ ಶಿವಲಿಂಗ ಇದ್ದಿರಬೇಕು ಎಂಬ ಊಹೆಗೆ ಇದು ಪೂರಕವಾಗಿದೆ.
ನಾಣ್ಯಗಳು, ಪರ್ಷಿಯನ್ ಭಾಷೆಯಲ್ಲಿ ಸಂದೇಶವನ್ನು ಕೊರೆಯಲಾದ ಮರಳುಗಲ್ಲಿನ ಪೀಠ, ಭಗ್ನಗೊಂಡು ಗುರುತಿಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಹಲವು ಮೂರ್ತಿಗಳು ಲಭ್ಯವಾಗಿವೆ. 839 ಪುಟಗಳಷ್ಟಿರುವ ಈ ವರದಿಯಲ್ಲಿ, ಜ್ಞಾನವಾಪಿ ಮಸೀದಿಯ ಜಾಗ ಹಿಂದೂ ದೇವಾಲಯಕ್ಕೆ ಸೇರಿದುದಾಗಿತ್ತು ಎನ್ನಲು ಬೇಕಾದ ಸಾಕ್ಷ್ಯಗಳು ವಿಪುಲವಾಗಿವೆ ಎಂದು ಹಿಂದೂ ಕಕ್ಷಿದಾರರು ಹೇಳಿದ್ದಾರೆ.
ಈ ವರದಿಯು ಭಗ್ನ ವಿಗ್ರಹಗಳ ಸ್ಥಾನಮಾನಗಳನ್ನು ಮತ್ತು ಅವರ ಹಕ್ಕನ್ನು ಬಲಪಡಿಸುತ್ತದೆ ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದ್ದಾರೆ. ಹಿಂದೂ ದೇವತಾ ಮೂರ್ತಿಗಳ ಅವಶೇಷಗಳು ಮತ್ತು ಹಳೆಯ ದೇವಾಲಯದ ಕಂಬಗಳ ಅವಶೇಷಗಳನ್ನು ಮಸೀದಿಯ ನಿರ್ಮಾಣದಲ್ಲಿ ಅಳವಡಿಸಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯಲ್ಲಿ ದೇವಾಲಯದ ಧ್ವಂಸಗೊಳಿಸುವಿಕೆ ನಡೆದಿತ್ತು. ಕಲ್ಲಿನ ಚಪ್ಪಡಿಗಳ ಮೇಲಿನ ಪರ್ಷಿಯನ್ ಶಾಸನಗಳು ಇದನ್ನು ಸಾಬೀತುಪಡಿಸುತ್ತವೆ ಎನ್ನಲಾಗಿದೆ.
ಈ ಸಂಶೋಧನೆಗಳು, ಜೈನ್ ಪ್ರಕಾರ, ಜ್ಞಾನವಾಪಿ ಮಸೀದಿಯ ಸ್ಥಳದಲ್ಲಿ ಇದ್ದ ಭವ್ಯವಾದ ಹಿಂದೂ ದೇವಾಲಯದ ಅಸ್ತಿತ್ವವನ್ನು ಬಲವಾಗಿ ಸೂಚಿಸುತ್ತವೆ. “ಈ ಪುರಾವೆಗಳು 17ನೇ ಶತಮಾನದಲ್ಲಿ ಔರಂಗಜೇಬ ಕೆಡವಿಸಿದ ಆದೀಶ್ವರ ದೇವಾಲಯದ ಅಸ್ತಿತ್ವವನ್ನು ಸೂಚಿಸುತ್ತವೆ” ಎಂದು ಅವರು ಪ್ರತಿಪಾದಿಸಿದರು.
ಆದರೆ, ಅಂಜುಮನ್ ಅಂಜಮಿಯಾ ಮಸೀದಿ ಸಮಿತಿಯನ್ನು ಪ್ರತಿನಿಧಿಸುವ ಅಖ್ಲಾಕ್ ಅಹ್ಮದ್ ಅವರು ಈ ತರ್ಕವನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇವು ಹೊಸ ಶೋಧಗಳಲ್ಲ. ಹಿಂದಿನ ವಕೀಲರ ಆಯೋಗ ಕಂಡುಕೊಂಡ ಮಾಹಿತಿಗಳ ಪುನರಾವರ್ತನೆಯಾಗಿದೆ. ಈ ಬಾರಿ ಸರ್ವೇಕ್ಷಣ ಇಲಾಖೆ ಅವುಗಳ ಅಳತೆ ತೆಗೆದುಕೊಂಡಿದೆ ಅಷ್ಟೇ. ಹಿಂದೂ ವಕೀಲರ ವಾದಗಳಿಗೆ ಸಮರ್ಥನೆ ಇಲ್ಲ ಎಂದಿದ್ದಾರೆ. ಕಂಡುಬಂದಿರುವ ಮೂರ್ತಿಗಳು ಅಧಿಕೃತವಲ್ಲ. ಅವು ಅಷ್ಟೇ ಹಳೆಯದು ಎನ್ನಲು ರುಜುವಾತುಗಳಿಲ್ಲ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಜುಲೈ 21ರಂದು ಜಿಲ್ಲಾ ಕೋರ್ಟ್ ನೀಡಿದ ಆದೇಶದಂತೆ ಜ್ಞಾನವಾಪಿ ಮಸೀದಿ ಆವರಣದಲ್ಲಿ ಎಎಸ್‌ಐ ಒಂದು ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿತ್ತು. ಈ ಮೊದಲೇ ಅಸ್ತಿತ್ವದಲ್ಲಿದ್ದ ಕಟ್ಟಡದ ಅವಶೇಷದ ಮೇಲೆ ಜ್ಞಾನವಾಪಿ ಮಸೀದಿಯನ್ನು ಕಟ್ಟಲಾಗಿದೆಯೇ ಎಂದು ಪರೀಕ್ಷಿಸುವುದು ಸಮೀಕ್ಷೆಯ ಉದ್ದೇಶವಾಗಿತ್ತು. ಎಎಸ್‌ಐ ಅದರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಡಿ.18ರಂದು ಕೋರ್ಟಿಗೆ ಸಲ್ಲಿಸಿದೆ.
ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿಯಲ್ಲಿ ಕನ್ನಡ ಶಾಸನಗಳು! ಅಲ್ಲಿ ಹಿಂದೂ ದೇವಾಲಯವಿತ್ತು!