ಲಖನೌ: ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದದ ಕುರಿತು ಮೊದಲ ಬಾರಿಗೆ ಮಾತನಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಐತಿಹಾಸಿಕ ತಪ್ಪನ್ನು ಮುಸ್ಲಿಮರು ಒಪ್ಪಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆಗೆ ನೀಡಲಾದ ಕಿರು ಪಾಡ್‌ಕಾಸ್ಟ್‌ನಲ್ಲಿ ಅವರು ಇದನ್ನು ಹೇಳಿದ್ದಾರೆ. “ನಾವು ಜ್ಯೋತಿರ್ಲಿಂಗವನ್ನು ಅಲ್ಲಿ ಇರಿಸಿಲ್ಲ. ಅದು ಅಲ್ಲಿಯೇ ಇತ್ತು. ಅಲ್ಲಿ ವಿಗ್ರಹಗಳಿವೆ. ಇಲ್ಲಿ ಒಂದು ಐತಿಹಾಸಿಕ ಪ್ರಮಾದ ಆಗಿತ್ತು ಎಂಬ ಮಾತು ಮುಸ್ಲಿಮರ ಕಡೆಯಿಂದಲೇ ಬರಬೇಕಿದೆ; ನಾವು ಈ ತಪ್ಪಿಗೆ ಪರಿಹಾರವನ್ನು ಬಯಸುತ್ತೇವೆʼʼ ಎಂದು ಯೋಗಿ ಹೇಳಿದ್ದಾರೆ.
“ನಾವು ಅದನ್ನು ಮಸೀದಿ ಎಂದು ಕರೆದರೆ ವಿವಾದ ಸೃಷ್ಟಿಯಾಗುತ್ತದೆ. ಮಸೀದಿಯಲ್ಲಿ ತ್ರಿಶೂಲಕ್ಕೆ ಏನು ಕೆಲಸ ಎಂದು ಜನರು ಯೋಚಿಸಬೇಕು” ಎಂದು ಯೋಗಿ ಹೇಳಿದ್ದಾರೆ.
ಯುಪಿ ಮುಖ್ಯಮಂತ್ರಿಯ ಹೇಳಿಕೆಗೆ ಎಐಎಂಐಎಂ ನಾಯಕ ವಾರಿಸ್ ಪಥಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಾವು 90ರ ದಶಕಕ್ಕೆ ಹಿಂತಿರುಗಲು ಸಾಧ್ಯವಿಲ್ಲ. ನಾವು ಪೂಜಾ ಸ್ಥಳಗಳ ಕಾಯಿದೆಯನ್ನು ಅನುಸರಿಸಬೇಕು. ಪ್ರಕರಣ ನ್ಯಾಯಾಲಯದಲ್ಲಿರುವಾಗ ಇಂತಹ ಹೇಳಿಕೆಗಳನ್ನು ನೀಡಬಾರದು” ಎಂದಿದ್ದಾರೆ.
ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿಯನ್ನು ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಆಗಸ್ಟ್ 3ಕ್ಕೆ ಕಾಯ್ದಿರಿಸಿದೆ.
ಎಎಸ್‌ಐ ಸಮೀಕ್ಷೆಯ ಮೇಲಿನ ತಡೆಯಾಜ್ಞೆಯನ್ನು ಆಗಸ್ಟ್ 3ರವರೆಗೆ ಮುಂದುವರಿಸಲಾಗಿದೆ. ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸರ್ವೆಗೆ ತಡೆ ಅರ್ಜಿಯನ್ನು ಸಲ್ಲಿಸಿದೆ.
ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ಬ್ರೇಕ್