ವಾರಾಣಸಿ: ಜ್ಞಾನವಾಪಿ ಮಸೀದಿಯಲ್ಲಿರುವ (Gyanvapi Mosque Case) ಶಿವಲಿಂಗದ ಕಾರ್ಬನ್ ಪರೀಕ್ಷೆಗೆ ಒಪ್ಪಿಗೆ ನೀಡಲು ವಾರಾಣಸಿ ಜಿಲ್ಲಾ ನ್ಯಾಯಾಲಯವು ನಿರಾಕರಿಸಿದೆ. ಈ ಮೂಲಕ ಜ್ಞಾನವಾಪಿ ಮಸೀದಿ ಪ್ರಕರಣಕ್ಕೆ ಮತ್ತೊಂದು ಆಯಾಮ ದೊರೆತಿದೆ. ಒಂದೊಮ್ಮೆ ಕಾರ್ಬನ್ ಡೇಟಿಂಗ್‌ಗೆ ಅನುಮತಿ ನೀಡಿದ್ದರೆ, ಶಿವಲಿಂಗ ಎಷ್ಟು ಹಳೆಯದ್ದು ಎಂಬ ಮಾಹಿತಿ ಗೊತ್ತಾಗುತ್ತಿತ್ತು. ವಾರಾಣಸಿ ಜಿಲ್ಲಾ ಕೋರ್ಟ್ ನ್ಯಾಯಾಧೀಶ ಎ ಕೆ ವಿಶ್ವೇಶ ಅವರು ಈ ಆದೇಶವನ್ನು ನೀಡಿದ್ದಾರೆ. ಕೋರ್ಟ್ ಸುತ್ತಮುತ್ತ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಕೋರ್ಟ್‌ರೂಮ್‌ನಲ್ಲಿ ಕೇವಲ 58 ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು.
ಮಸೀದಿಯಲ್ಲಿನ ವಸ್ತುಗಳನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ವಿಚಾರಣಾ ನ್ಯಾಯಾಲಯವು ಈ ಅಂಶಗಮನದಲ್ಲಿಟ್ಟಕೊಳ್ಳಬೇಕು. ಹಾಗಾಗಿ ಇಂಥ ಪರಿಸ್ಥಿತಿಯಲ್ಲಿ ಪರೀಕ್ಷೆ ಕೈಗೊಳ್ಳುವುದು ನ್ಯಾಯಯುತ ಎನಿಸಿಕೊಳ್ಳುವುದಿಲ್ಲ ಎಂದು ಮುಸ್ಲಿಮ್ ಪರ ವಕೀಲರು ವಾದ ಮಂಡಿಸಿದ್ದಾರೆ. ಕಾರ್ಬನ್ ಪರೀಕ್ಷೆಯ ನೆಪದಲ್ಲಿ ವಸ್ತುಗಳಿಗೆ ಹಾನಿಯಾದರೆ ಅದು ಸುಪ್ರೀಂ ಕೋರ್ಟ್‌ನ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ವಕೀಲ ಮುಮ್ತಾಜ್ ಅಹ್ಮದ್ ಅವರು ತಿಳಿಸಿದ್ದಾರೆ.
ಏನಿದು ಕಾರ್ಬನ್ ಡೇಟಿಂಗ್?
ಯಾವುದೇ ವಸ್ತುವಿನ ಪ್ರಾಚೀನತೆಯನ್ನು ಕಂಡು ಹಿಡಿಯುವ ವೈಜ್ಞಾನಿಕ ಪರೀಕ್ಷೆಯಾಗಿದೆ. ಪುರಾತತ್ವ ಶಾಸ್ತ್ರ ಸಂಶೋಧನೆಗಳ ವೇಳೆ ಈ ಕಾರ್ಬನ್ ಡೇಟಿಂಗ್ ಪರೀಕ್ಷೆ ಮಹತ್ವದ್ದಾಗಿರುತ್ತದೆ. ಯಾವುದೇ ಪಳಯುಳಿಕೆಗಳು, ಇನ್ನಿತರ ವಸ್ತುಗಳು ದೊರೆತಾಗ ಅವು ಎಷ್ಟು ವರ್ಷ ಹಿಂದಿನದು ಎಂಬುದನ್ನು ಪತ್ತೆ ಹಚ್ಚಲು ಕಾರ್ಬನ್ ಡೇಟಿಂಗ್ ಕ್ರಮ ಅನುಸರಿಸಲಾಗುತ್ತದೆ.
ಏನಿದು ಪ್ರಕರಣ?
ವಾರಾಣಸಿಯ ವಿಶ್ವನಾಥ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇರುವ ಜ್ಞಾನವಾಪಿ ಮಸೀದಿಯ ಪಶ್ಚಿಮ ಗೋಡೆಯಲ್ಲಿ ದೇವರ ಚಿತ್ರಗಳಿವೆ. ಅವುಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಐವರು ಮಹಿಳೆಯರು ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಮುಸ್ಲಿಂ ಬಣ ಇದನ್ನು ಪ್ರಶ್ನಿಸಿದೆ. ಐವರು ಹಿಂದೂ ಮಹಿಳೆಯರು ವೈಯಕ್ತಿಕವಾಗಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಗೆ ಕೋರ್ಟ್ ಸಮ್ಮತಿ ಸೂಚಿಸಿತ್ತು. ಇದೀಗ ವಿಚಾರಣೆ ನಡೆಯುತ್ತಿದೆ.
ಐವರು ಮಹಿಳೆಯರು ಕೇಸ್ ದಾಖಲಿಸಿದ ಬಳಿಕ ಜ್ಞಾನವಾಪಿ ಸಂಕೀರ್ಣದ ವಿಡಿಯೊಗ್ರಾಫಿಕ್ ಸರ್ವೇಕ್ಷಣೆಗೆ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಈ ಸರ್ವೇಕ್ಷಣೆಯ ವೇಳೆ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಬಣ ಹೇಳಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕಾನೂನು ಹೋರಾಟ ನಡೆಯುತ್ತಿದೆ.
ಇದನ್ನೂ ಓದಿ | ಜ್ಞಾನವಾಪಿ ಮಸೀದಿ ಕೇಸ್; ಶಿವಲಿಂಗ ಪೂಜೆಗೆ ಅವಕಾಶ ಕೋರಿದ್ದ ಅರ್ಜಿ ವಿಚಾರಣೆ ಒಪ್ಪದ ಸುಪ್ರೀಂಕೋರ್ಟ್