Site icon Vistara News

Gyanvapi Mosque Survey: ಜ್ಞಾನವಾಪಿ ಮಸೀದಿ ಸರ್ವೆ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ

Gyanvapi mosque survey

ಹೊಸದಿಲ್ಲಿ: ವಾರಾಣಸಿಯ ವಿವಾದಿತ ಜ್ಞಾನವಾಪಿ ಮಸೀದಿ ಸಮೀಕ್ಷೆ (Gyanvapi Mosque Survey) ವರದಿಯನ್ನು ಉತ್ತರ ಪ್ರದೇಶದ ವಾರಾಣಸಿಯ ಜಿಲ್ಲಾ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಲಾಗಿದೆ.

ಸಂಪೂರ್ಣವಾಗಿ ಮೊಹರು ಮಾಡಿದ ದಾಖಲೆಯನ್ನು ಭಾರತೀಯ ಪುರಾತತ್ವ ಇಲಾಖೆಯು (Archaeological Survey of India) ನ್ಯಾಯಾಲಯಕ್ಕೆ ಸಲ್ಲಿಸಿದೆ. ಇದನ್ನು ಸಾರ್ವಜನಿಕಗೊಳಿಸಲಾಗುತ್ತದೆಯೇ, ಅಥವಾ ಹಿಂದೂ ಮತ್ತು ಮುಸ್ಲಿಂ ಅರ್ಜಿದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆಯೋ ಎಂಬುದು ಸ್ಪಷ್ಟವಾಗಿಲ್ಲ. ಈ ಕುರಿತ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಲಾಗಿದೆ.

ASI ತನ್ನ ಸಂಶೋಧನೆಗಳನ್ನು ಸಲ್ಲಿಸಲು ನಿಗದಿಪಡಿಸಿದ ಸಮಯಕ್ಕಿಂತ ಆರು ಅವಧಿ ವಿಸ್ತರಣೆಗಳನ್ನು ತೆಗೆದುಕೊಂಡಿದೆ. ಅಧ್ಯಯನ ಮತ್ತು ವಿಶ್ಲೇಷಣೆ ಮಾಡಬೇಕಾದ ಅಪಾರ ಪ್ರಮಾಣದ ಡೇಟಾವನ್ನು ಉಲ್ಲೇಖಿಸಿದೆ. ನವೆಂಬರ್ 2ರಂದು ಸಮೀಕ್ಷೆಯನ್ನು ಮುಗಿಸಿದ್ದೇನೆ ಎಂದು ತಿಳಿಸಿದೆ. ಆದರೆ ಸಮೀಕ್ಷೆಯ ಸಮಯದಲ್ಲಿ ಬಳಸಿದ ಉಪಕರಣಗಳ ವಿವರಗಳನ್ನು ಸಲ್ಲಿಸುವುದು ಸೇರಿದಂತೆ ವರದಿಯನ್ನು ಸಮಗ್ರವಾಗಿ ಮಂಡಿಸಲು ಹೆಚ್ಚಿನ ಸಮಯವನ್ನು ಕೇಳಿದೆ.

ಕೆಲವು ಮೊಹರು ಮಾಡಿದ ವಿಭಾಗಗಳನ್ನು ಹೊರತುಪಡಿಸಿ ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆಯು ಆಗಸ್ಟ್‌ನಲ್ಲಿ ಪ್ರಾರಂಭವಾಯಿತು. 17ನೇ ಶತಮಾನದ ಮಸೀದಿಯನ್ನು ಮೊದಲೇ ಅಸ್ತಿತ್ವದಲ್ಲಿದ್ದ ಹಿಂದೂ ದೇವಾಲಯದ ಅವಶೇಗಳ ಮೇಲೆ ನಿರ್ಮಿಸಲಾಗಿದೆಯೇ ಎಂದು ಪರಿಶೀಲಿಸಲು ಸಮೀಕ್ಷೆಯನ್ನು ಉದ್ದೇಶಿಸಲಾಗಿತ್ತು. ವಾರಣಾಸಿ ನ್ಯಾಯಾಲಯ ಮಸೀದಿ ಒಳಭಾಗದಲ್ಲಿ ಉತ್ಖನನಕ್ಕೆ ಅವಕಾಶ ನೀಡಿತ್ತು.

ವಾರಣಾಸಿ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿ ಹಿಡಿದ ನಂತರ ಸಮೀಕ್ಷೆ ಆರಂಭವಾಗಿದೆ. ನ್ಯಾಯದ ಹಿತದೃಷ್ಟಿಯಿಂದ ಸಮೀಕ್ಷೆ ಅಗತ್ಯವಾಗಿದೆ ಮತ್ತು ವಿವಾದದಲ್ಲಿ ಎರಡೂ ಕಡೆಯವರಿಗೆ ಲಾಭವಾಗಲಿದೆ ಎಂದು ಹೈಕೋರ್ಟ್ ಹೇಳಿತ್ತು.

ನಂತರ ಜ್ಞಾನವಾಪಿ ಮಸೀದಿ ಸಮಿತಿಯು ಹೈಕೋರ್ಟ್‌ನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ (Supreme court) ಅರ್ಜಿ ಸಲ್ಲಿಸಿತ್ತು. 354 ವರ್ಷಗಳಷ್ಟು ಹಳೆಯದಾದ ಮಸೀದಿ ಸಂಕೀರ್ಣದ ನೆಲಮಾಳಿಗೆ ಮತ್ತು ಇತರ ಸ್ಥಳಗಳಲ್ಲಿ ಅನುಮತಿಯಿಲ್ಲದೆ ಎಎಸ್‌ಐ ಅಗೆಯುತ್ತಿದೆ, ಅದು ಕುಸಿಯುವ ಅಪಾಯದಲ್ಲಿದೆ ಎಂದು ಮಸೀದಿ ಆಡಳಿತ ಸಮಿತಿಯು ಆಕ್ಷೇಪಿಸಿ ಸುಪ್ರೀಂ ಕೋರ್ಟಿಗೆ ಹೋಗಿತ್ತು. ಆಗಸ್ಟ್ 4ರಂದು ಸುಪ್ರೀಂ ಕೋರ್ಟ್‌ ಸಮೀಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಆದರೆ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠವು, ಹೆಚ್ಚಿನ ಹಾನಿಕಾರಕ ಉತ್ಖನನಗಳನ್ನು ನಡೆಸದಂತೆ ಎಎಸ್‌ಐಗೆ ನಿರ್ದೇಶನ ನೀಡಿತು.

ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿ ಸಮೀಕ್ಷಾ ವರದಿ ಸಲ್ಲಿಕೆಗೆ ಹೆಚ್ಚಿನ ಅವಧಿ ಕೇಳಿದ ಎಎಸ್‌ಐ!

Exit mobile version