Site icon Vistara News

Halal Products: ಹಲಾಲ್‌ ಮಾಂಸ ಸೇವಿಸಿ ಧರ್ಮ ಭ್ರಷ್ಟರಾಗಬೇಡಿ: ಹಿಂದೂಗಳಿಗೆ ಕೇಂದ್ರ ಸಚಿವರ ಸಲಹೆ

giriraj singh

giriraj singh

ಪಾಟ್ನಾ: ಕೆಲವು ದಿನಗಳ ಹಿಂದೆ ದೇಶಾದ್ಯಂತ ಭಾರೀ ಚರ್ಚೆಯಾಗಿದ್ದ ಹಲಾಲ್‌ ಮಾಂಸದ (Halal Products) ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬಿಹಾರದ ಬೇಗುಸರಾಯ್‌ಯಲ್ಲಿ ಭಾನುವಾರ ಮಾತನಾಡಿದ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ (Union Rural Development Minister) ಗಿರಿರಾಜ್ ಸಿಂಗ್ (Giriraj Singh) ʼʼಹಿಂದೂಗಳು ಹಲಾಲ್ ಮಾಂಸವನ್ನು ತಿನ್ನುವುದನ್ನು ತ್ಯಜಿಸಬೇಕು ಮತ್ತು ಒಂದೇ ಹೊಡೆತದಿಂದ ಕೊಲ್ಲಲ್ಪಟ್ಟ ಪ್ರಾಣಿಗಳ ಮಾಂಸವಾದ ‘ಜಟ್ಕಾ’ (Jhatka) ಅನ್ನು ಮಾತ್ರ ಸೇವಿಸಬೇಕುʼʼ ಎಂದು ಕರೆ ನೀಡಿದ್ದಾರೆ.

ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮ ‘ಧರ್ಮ’ವನ್ನು ಹಾಳು ಮಾಡುವುದಿಲ್ಲ ಎಂದು ಅವರ ಬೆಂಬಲಿಗರು ಈ ಸಂದರ್ಭದಲ್ಲಿ ಪ್ರತಿಜ್ಞೆ ಕೈಗೊಂಡರು. ʼʼಹಲಾಲ್ ಮಾಂಸವನ್ನು ಮಾತ್ರ ಸೇವಿಸುವ ಮುಸ್ಲಿಮರನ್ನು ನಾನು ಮೆಚ್ಚುತ್ತೇನೆ. ಈಗ ಹಿಂದೂಗಳು ತಮ್ಮದೇ ಆದ ಧಾರ್ಮಿಕ ಸಂಪ್ರದಾಯಗಳಿಗೆ ಇದೇ ರೀತಿಯ ಬದ್ಧತೆಯನ್ನು ಪ್ರದರ್ಶಿಸಬೇಕುʼʼ ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.

ʼʼಹಿಂದೂ ವಧೆಯ ವಿಧಾನವೆಂದರೆ ಅದು ಜಟ್ಕಾ. ಹಿಂದೂಗಳು ಪ್ರಾಣಿ ಬಲಿ ಮಾಡಿದಾಗಲೆಲ್ಲ ಒಂದೇ ಹೊಡೆತಕ್ಕೆ ಕೊಲ್ಲುತ್ತಾರೆ. ಆದ್ದರಿಂದ ಹಿಂದೂಗಳು ಹಲಾಲ್ ಮಾಂಸವನ್ನು ತಿನ್ನುವ ಮೂಲಕ ತಮ್ಮನ್ನು ಭ್ರಷ್ಟಗೊಳಿಸಬಾರದು. ಯಾವಾಗಲೂ ಜಟ್ಕಾ ವಿಧಾನವನ್ನೇ ಆಯ್ದುಕೊಳ್ಳಬೇಕು” ಎಂದು ಗಿರಿರಾಜ್ ಸಿಂಗ್ ಕಿವಿಮಾತು ಹೇಳಿದ್ದಾರೆ. ಕಸಾಯಿಖಾನೆಗಳು ಮತ್ತು ಜಟ್ಕಾ ಮಾಂಸವನ್ನು ಮಾತ್ರ ಮಾರಾಟ ಮಾಡುವ ಅಂಗಡಿಗಳು ಇರುವ ಹೊಸ ಮಾದರಿಯ ವ್ಯವಹಾರದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಪತ್ರ ಬರೆದಿದ್ದ ಗಿರಿರಾಜ್ ಸಿಂಗ್

ವಿಶೇಷ ಎಂದರೆ, ಕೆಲವು ವಾರಗಳ ಹಿಂದೆ ಗಿರಿರಾಜ್ ಸಿಂಗ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದು ನೆರೆಯ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಸ್ಫೂರ್ತಿ ಪಡೆದು ʼಹಲಾಲ್ʼ ಎಂದು ಲೇಬಲ್ ಮಾಡಲಾದ ಆಹಾರ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವಂತೆ ಕೋರಿದ್ದರು.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ಸಂಸತ್ತಿನಲ್ಲಿ ಇತ್ತೀಚೆಗೆ ನಡೆದ ಭದ್ರತಾ ಉಲ್ಲಂಘನೆಯ ಬಗ್ಗೆ ತಡವಾಗಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ. ಈ ಘಟನೆ ನಿರುದ್ಯೋಗ ಮತ್ತು ಬೆಲೆ ಏರಿಕೆಯಿಂದ ನಡೆದಿದೆ ಎಂದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ʼ’ತುಕ್ಡೆ ತುಕ್ಡೆ’ ಗ್ಯಾಂಗ್ ಬಗ್ಗೆ ರಾಹುಲ್ ಗಾಂಧಿ ಸಹಾನುಭೂತಿ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಜೆಎನ್‌ಯು ಕ್ಯಾಂಪಸ್‌ನಲ್ಲಿ ದೇಶದ್ರೋಹದ ಘೋಷಣೆಗಳನ್ನು ಕೂಗಿದವರೊಂದಿಗೆ ಅವರು ಬೆಂಬಲ ವ್ಯಕ್ತಪಡಿಸಿದ್ದರು” ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.

ʼಹಲಾಲ್‌’ ಉತ್ಪನ್ನಗಳ ಮಾರಾಟ ನಿಷೇಧಿಸಿದ್ದ ಉತ್ತರ ಪ್ರದೇಶ

ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಿತ್ತು. ಜನರ ಆರೋಗ್ಯದ ದೃಷ್ಟಿಯಿಂದ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರವು ಆದೇಶದಲ್ಲಿ ಉಲ್ಲೇಖಿಸಿತ್ತು. “ಸಾರ್ವಜನಿಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳು, ಔಷಧಗಳು ಸೇರಿ ಯಾವುದೇ ವಸ್ತುಗಳ ಉತ್ಪಾದನೆ, ಸಂಗ್ರಹ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ” ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು.

ಇದನ್ನೂ ಓದಿ: Halal Products: ಸಿಎಂ ಯೋಗಿ ದಿಟ್ಟ ನಿರ್ಧಾರ ‌’ಹಲಾಲ್‌’ ಉತ್ಪನ್ನಗಳ ಮಾರಾಟ ನಿಷೇಧ!

Exit mobile version