ಡೆಹ್ರಾಡೂನ್: ಉತ್ತರಾಖಂಡದ ಹಲ್ದ್ವಾನಿಯಲ್ಲಿ (Haldwani Violence) ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಮದರಸಾ ನೆಲಸಮ (Illegal Madrasa) ಮಾಡುವ ವೇಳೆ ಸಂಭವಿಸಿದ ಹಿಂಸಾಚಾರದ ಪ್ರಮುಖ ಆರೋಪಿ ಅಬ್ದುಲ್ ಮಲಿಕ್ (Abdul Malik) ವಿರುದ್ಧ ಮುನ್ಸಿಪಲ್ ಕಾರ್ಪೊರೇಷನ್ (Municipal Corporation) ಸೋಮವಾರ (ಫೆಬ್ರವರಿ 12) 2.44 ಕೋಟಿ ರೂ.ಗಳ ವಸೂಲಿ ನೋಟಿಸ್ ನೀಡಿದ್ದು, ಘರ್ಷಣೆಯ ಸಮಯದಲ್ಲಿ ಸರ್ಕಾರಿ ಆಸ್ತಿಗೆ ಉಂಟಾದ ಹಾನಿಯನ್ನು ಸರಿದೂಗಿಸಲು ಹಣವನ್ನು ಠೇವಣಿ ಇಡುವಂತೆ ಸೂಚಿಸಿದೆ.
ಮಲಿಕ್‌ನಿಂದ ಉಂಟಾದ ನಷ್ಟದ ಆರಂಭಿಕ ಮೌಲ್ಯಮಾಪನವನ್ನು 2.44 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಈ ಮೊತ್ತವನ್ನು ಫೆಬ್ರವರಿ 15ರಂದು ಹಲ್ದ್ವಾನಿ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಠೇವಣಿ ಇಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ. ಮದರಸಾ ನೆಲಸಮಗೊಳಿಸುವ ಕಾರ್ಯಾಚರಣೆ ನಡೆಸಲು ತೆರಳಿದ್ದ ತಂಡದ ಮೇಲೆ ಮಲಿಕ್ ಬೆಂಬಲಿಗರು ದಾಳಿ ನಡೆಸಿದ್ದಾರೆ ಮತ್ತು ಈ ಮೂಲಕ ಪುರಸಭೆಯ ಆಸ್ತಿಗಳನ್ನು ಹಾನಿಗೊಳಿಸಿದ್ದಾರೆ ಎಂದು ಅಧಿಕಾರಿಗಳು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.
ಫೆಬ್ರವರಿ 8ರಂದು ನಡೆದ ಘಟನೆಯ ದಿನದಂದು ದಾಖಲಾದ ಎಫ್ಐಆರ್‌ನಲ್ಲಿಯೂ ಮಲಿಕ್ ಹೆಸರನ್ನು ನಮೂದಿಸಲಾಗಿತ್ತು. ʼಅಕ್ರಮ ನಿರ್ಮಾಣಗಳʼ ಹಿಂದೆ ಮಲಿಕ್ ಕೈವಾಡ ಇದೆ ಮತ್ತು ಕಟ್ಟಡ ನೆಲಸಮ ಕಾರ್ಯಾಚರಣೆಯ ವಿರುದ್ಧದ ಪ್ರತಿಭಟನೆಗಳ ನೇತೃತ್ವವನ್ನು ಮಲಿಕ್ ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನೋಟಿಸ್‌ನಲ್ಲಿ ಏನಿದೆ?
ಹಲ್ದ್ವಾನಿ ಮುನ್ಸಿಪಲ್ ಕಾರ್ಪೊರೇಷನ್ ಮಲಿಕ್‌ಗೆ ನೀಡಿದ ನೋಟಿಸ್‌ನಲ್ಲಿ “ಪೊಲೀಸರು ಮತ್ತು ಅಧಿಕಾರಿಗಳ ತಂಡದ ಮೇಲೆ ದಾಳಿ ಮಾಡುವ ಮೂಲಕ ನಿಮ್ಮ ಬೆಂಬಲಿಗರು ಸಾರ್ವಜಿಕ ಆಸ್ತಿಗೆ ಹಾನಿ ಮಾಡಿದ್ದಾರೆ ಮತ್ತು ಲೂಟಿ ಮಾಡಿದ್ದಾರೆ. ಇದನ್ನು ಎಫ್ಐಆರ್ ಮೂಲಕ ದೃಢಪಡಿಸಲಾಗಿದೆ. ಎಫ್ಐಆರ್ ನಿಮ್ಮನ್ನು ಆರೋಪಿ ಎಂದು ಹೆಸರಿಸಲಾಗಿದೆ. ಪ್ರಾಥಮಿಕ ಅಂದಾಜಿನ ನಿಮ್ಮಿಂದ ಸುಮಾರು 2.44 ಕೋಟಿ ರೂ.ಗಳ ನಷ್ಟ ಉಂಟಾಗಿದೆ. ಹೀಗಾಗಿ ಈ ಮೊತ್ತವನ್ನು ಠೇವಣಿ ಇಡಬೇಕುʼʼ ಎಂದು ವಿವರಿಸಲಾಗಿದೆ.
ಏನೆಲ್ಲ ಹಾನಿ?
2.44 ಕೋಟಿ ರೂ.ಗಳ ಪೈಕಿ ಹಾನಿಯಾದ 15 ವಾಹನಗಳಿಗೆ 2.41 ಕೋಟಿ ರೂ. ಹಾಗೂ ಉಪಕರಣಗಳ ಹಾನಿಗೆ 3.52 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ನೈನಿತಾಲ್‌ನ ಹಲ್ದ್ವಾನಿ ನಗರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 30 ಜನರನ್ನು ಬಂಧಿಸಲಾಗಿದೆ. ಘರ್ಷಣೆ ಮತ್ತು ಹಿಂಸಾಚಾರದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಮಂದಿಗೆ ಗಾಯಗಳಾಗಿವೆ. ಬಂಧಿತರಿಂದ ಹಲವು ದೇಶೀಯ ನಿರ್ಮಿತ ಶಸ್ತ್ರಾಸ್ತ್ರಗಳು ಮತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Uttarakhand Violence: ಅಕ್ರಮ ಮದರಸಾ ನೆಲಸಮ ಬಳಿಕ ಹಿಂಸಾಚಾರಕ್ಕೆ 4 ಬಲಿ; ಪರಿಸ್ಥಿತಿ ಉದ್ವಿಗ್ನ
ಏನಿದು ಘಟನೆ?
ಹಲ್ದ್ವಾನಿಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಲಾದ ಮದರಸವನ್ನು ತೆರವುಗೊಳಿಸಲು ಅಧಿಕಾರಿಗಳು ಪೊಲೀಸರ ಬೆಂಬಲದೊಂದಿಗೆ ಮುಂದಾಗಿದ್ದರು. ಈ ವೇಳೆ, ಉದ್ರಿಕ್ತರ ಗುಂಪು ಅಧಿಕಾರಿಗಳು ಮತ್ತು ಪೊಲೀಸರು ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪೊಲೀಸರಲ್ಲದೆ, ಆಡಳಿತ ಮತ್ತು ನಾಗರಿಕ ಅಧಿಕಾರಿಗಳ ತಂಡವು ಪಕ್ಕದ ಮಸೀದಿಯನ್ನು ಹೊಂದಿರುವ ಮದರಸಾಕ್ಕೆ ಹೋಗಿತ್ತು. ಮೂಲಗಳ ಪ್ರಕಾರ ಜೆಸಿಬಿ ಯಂತ್ರ ಆರಂಭವಾಗುತ್ತಿದ್ದಂತೆ ಉದ್ರಿಕ್ತರ ಗುಂಪು ಅಧಿಕಾರಿಗಳ ಮೇಲೆ ದಾಳಿ ನಡೆಸಿ ದೂರದಿಂದಲೇ ಕಲ್ಲು ತೂರಾಟ ನಡೆಸಿತು. ಈ ವೇಳೆ, ಪೊಲೀಸರು ಅಲ್ಲದೆ ಹಲವಾರು ಆಡಳಿತ ಅಧಿಕಾರಿಗಳು ಹಾಗೂ ಪತ್ರಕರ್ತರು ಗಾಯಗೊಂಡರು. ಪೊಲೀಸರು ಅಶ್ರುವಾಯು ಸಿಡಿಸಿದ್ದರಿಂದ ಹಿಂಸಾಚಾರ ಮತ್ತಷ್ಟು ಭುಗಿಲೆದ್ದಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ