ಕ್ಯಾನ್‌ಬೆರಾ: ಪ್ರಧಾನಿ ನರೇಂದ್ರ ಮೋದಿ (Narendra Modi) ಕೆಲವು ದಿನಗಳಿಂದ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದು, ಜಪಾನ್, ಪಪುವಾ ನ್ಯೂಗಿನಿಯಾ ಪ್ರವಾಸ ಮುಗಿಸಿ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಜಪಾನ್, ಪಪುವಾ ನ್ಯೂಗಿನಿಯಾದಂತೆಯೇ ಆಸ್ಟ್ರೇಲಿಯಾದಲ್ಲೂ ಮೋದಿ ಅವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಅದರಲ್ಲೂ, ಆಸ್ಟ್ರೇಲಿಯಾ ಪ್ರಧಾನಿ ಆಂಥೊನಿ ಆಲ್ಬನಿಸ್ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿ ಅವರನ್ನು ಸ್ವಾಗತಿಸಿದ್ದಾರೆ.
ಆಸ್ಟ್ರೇಲಿಯಾ ಮಾತ್ರವಲ್ಲ, ಕಾಂಗರೂಗಳ ನಾಡಿನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಕೂಡ ಮೋದಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಹಿರಿಯರು, ಮಕ್ಕಳು, ಯುವಕರು, ಯುವತಿಯರು ಸೇರಿ ನೂರಾರು ಅನಿವಾಸಿ ಭಾರತೀಯರು ಮೋದಿ ಅವರು ಬರುವತನಕ ಕಾದು, ಬಳಿಕ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು.
ಮೋದಿಗೆ ಸಿಕ್ಕ ಸ್ವಾಗತ ಹೀಗಿದೆ
ಇದೇ ವೇಳೆ, ಭಾರತ್ ಮಾತಾ ಕಿ ಜೈ, ಜೈ ಹಿಂದ್, ವಣಕ್ಕಮ್ ಮೋದಿ, ಹರ ಹರ ಮೋದಿ ಎಂಬುದು ಸೇರಿ ಹಲವು ಘೋಷಣೆ ಕೂಗಿದರು. “ನಮಗೆ ನರೇಂದ್ರ ಮೋದಿ ಅವರ ಮೇಲೆ ಅತೀವ ಭರವಸೆ ಇದೆ. ಇದೇ ಕಾರಣಕ್ಕಾಗಿ ಎಲ್ಲರೂ ಸಿಡ್ನಿಯಲ್ಲಿ ಸೇರಿದ್ದೇವೆ” ಎಂದು ಅನಿವಾಸಿ ಭಾರತೀಯರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಹುತೇಕ ಜನ ಕೈಯಲ್ಲಿ ತಿರಂಗಾ ಹಿಡಿದು ಮೋದಿ ಅವರನ್ನು ಸ್ವಾಗತಿಸಿದರು. ಹೆಚ್ಚಿನ ಜನ ಮೋದಿ ಅವರ ಜತೆ ಸೆಲ್ಫಿ ತೆಗೆದುಕೊಂಡರು.
ನರೇಂದ್ರ ಮೋದಿ ಕ್ರೇಜ್
ಇದನ್ನೂ ಓದಿ: Narendra Modi: ಪಪುವಾ ನ್ಯೂಗಿನಿಯಾದಲ್ಲಿ ತಮಿಳಿನ ತಿರುಕ್ಕುರಳ್ ಕೃತಿ ಬಿಡುಗಡೆ ಮಾಡಿದ ಮೋದಿ
ನರೇಂದ್ರ ಮೋದಿ ಅವರು ಕೈಗೊಂಡ ಮೂರು ರಾಷ್ಟ್ರಗಳ ಪ್ರವಾಸ ಕೊನೆಯ ಹಂತಕ್ಕೆ ಬಂದಿದ್ದು, ಆಸ್ಟ್ರೇಲಿಯಾದಲ್ಲಿ ಮೇ 22ರಿಂದ ಮೇ 24ರವರೆಗೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ದ್ವಿಪಕ್ಷೀಯ ಮಾತುಕತೆ, ವ್ಯಾಪಾರ ವೃದ್ಧಿಗೂ ಮೋದಿ ಆದ್ಯತೆ ನೀಡಲಿದ್ದಾರೆ. ಇನ್ನು ಮೋದಿ ಆಗಮಿಸುವುದಕ್ಕೂ ಮೊದಲೇ ಆಂಥೋನಿ ಆಲ್ಬನಿಸ್ ಅವರು ಮೋದಿ ನಮ್ಮ ದೇಶಕ್ಕೆ ಆಗಮಿಸುತ್ತಿರುವುದು ಸಂತಸದ ವಿಷಯ ಎಂದಿದ್ದರು.