ಪೋರ್ಟ್ ಮೊರೆಸ್ಬಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜಗತ್ತಿನ ಯಾವುದೇ ದೇಶಕ್ಕೆ ಹೋಗಲಿ, ಅನಿವಾಸಿ ಭಾರತೀಯರು ಅವರಿಗೆ ಅದ್ಧೂರಿ ಸ್ವಾಗತ ನೀಡುತ್ತಾರೆ. ಅದರಂತೆ, ಇದೇ ಮೊದಲ ಬಾರಿಗೆ ಪಪುವಾ ನ್ಯೂಗಿನಿಯಾ ದೇಶಕ್ಕೆ ತೆರಳಿದ ಮೋದಿ ಅವರಿಗೆ ಅನಿವಾಸಿ ಭಾರತೀಯರಿಂದ ಅದ್ಧೂರಿ ಸ್ವಾಗತ ದೊರೆತಿದೆ. ಅದರಲ್ಲೂ, ಮೋದಿ ಅವರು ಪಪುವಾ ನ್ಯೂಗಿನಿಯಾಗೆ ತೆರಳುತ್ತಲೇ ಅಲ್ಲಿ ನೆಲೆಸಿರುವ ಭಾರತೀಯರು, ಭಾರತ್ ಮಾತಾ ಕೀ ಜೈ, ಹರ ಹರ ಮೋದಿ, ಹರ್ ಘರ್ ಮೋದಿ ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ನರೇಂದ್ರ ಮೋದಿ ಅವರು ಪಪುವಾ ನ್ಯೂಗಿನಿಯಾಗೆ ಆಗಮಿಸುತ್ತಲೇ ಜನ ಜೈಕಾರ ಕೂಗಿದರು. ಇದೇ ವೇಳೆ ಜನ ಮೋದಿ ಜತೆ ಸೆಲ್ಫಿ ತೆಗೆಸಿಕೊಂಡರು. ಪ್ರಧಾನಿಯನ್ನು ಕಣ್ತುಂಬಿಕೊಳ್ಳಲು ಅನಿವಾಸಿ ಭಾರತೀಯರು ಮಕ್ಕಳನ್ನು ಕೂಡ ಕರೆದುಕೊಂಡು ಬಂದಿದ್ದರು. ಇನ್ನು ಇದೇ ವೇಳೆ ಮೋದಿ ಅವರಿಗೆ ವಿಶೇಷ ಉಡುಗೊರೆಗಳನ್ನೂ ನೀಡಿದರು.
ಮೋದಿ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಜೇಮ್ಸ್ ಮರಾಪೆ
ಪಪುವಾ ನ್ಯೂಗಿನಿಯಾ ದೇಶದ ಪ್ರಧಾನಿ ಜೇಮ್ಸ್ ಮರಾಪೆ ಅವರು ನರೇಂದ್ರ ಮೋದಿ ಅವರ ಕಾಲಿಗೆ ನಮಸ್ಕರಿಸಿ, ತಮ್ಮ ದೇಶಕ್ಕೆ ಸ್ವಾಗತಿಸಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ. ಪಪುವಾ ನ್ಯೂಗಿನಿಯಾದಲ್ಲಿ ಮೇ 22ರಂದು ಇಂಡಿಯಾ-ಪೆಸಿಫಿಕ್ ಐಲ್ಯಾಂಡ್ಸ್ ಕೋಪರೇಷನ್ (FIPIC) ಸಭೆ ನಡೆಯಲಿದೆ. ಇದಕ್ಕಾಗಿ ಮೋದಿ ಅವರು ಪಪುವಾ ನ್ಯೂಗಿನಿಯಾಗೆ ತೆರಳಿದ್ದಾರೆ.
ಮೋದಿ ಅವರು ತಮ್ಮ ದೇಶಕ್ಕೆ ಆಗಮಿಸುತ್ತಲೇ ಅವರನ್ನು ತಬ್ಬಿಕೊಂಡು ಜೇಮ್ಸ್ ಮರಾಪೆ ಸ್ವಾಗತಿಸಿದರು. ಇದೇ ವೇಳೆ, ಮೋದಿ ಕಾಲು ಮುಟ್ಟಿ ಅವರು ನಮಸ್ಕರಿಸಿದರು. ಭಾರತದಲ್ಲಿ ಹಿರಿಯರಿಗೆ ನಮಸ್ಕರಿಸಿ ಗೌರವ ಸಲ್ಲಿಸುವ ಪದ್ಧತಿ ಇದೆ. ಇದನ್ನೇ ಜೇಮ್ಸ್ ಅವರು ಕೂಡ ಅನುಸರಿಸಿದರು. ಪಪುವಾ ನ್ಯೂಗಿನಿಯಾಗೆ ತೆರಳುವ ಮೂಲಕ ನರೇಂದ್ರ ಮೋದಿ ಹೊಸ ದಾಖಲೆ ಸೃಷ್ಟಿಸಿದರು. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಪಪುವಾ ನ್ಯೂಗಿನಿಯಾಗೆ ತೆರಳಿದ್ದಾರೆ. ಇದು ಕೂಡ ಮೋದಿ ಅವರಿಗೆ ವಿಶೇಷ ಗೌರವ ನೀಡಲು ಕಾರಣವಾಗಿದೆ. ಪಪುವಾ ನ್ಯೂಗಿನಿಯಾದಿಂದ ಮೋದಿ ಅವರಿಗೆ ಗೌರವ ವಂದನೆಯನ್ನೂ ಸಲ್ಲಿಸಲಾಯಿತು.
ಇದನ್ನೂ ಓದಿ: Narendra Modi: ಮೋದಿ ಕಾಲಿಗೆ ನಮಸ್ಕರಿಸಿ ತಮ್ಮ ದೇಶಕ್ಕೆ ಸ್ವಾಗತಿಸಿದ ಪಪುವಾ ನ್ಯೂಗಿನಿಯಾ ಪ್ರಧಾನಿ; ಇಲ್ಲಿದೆ ವಿಡಿಯೊ