Site icon Vistara News

ಕಮಲ ಪಾಳಯ ಪ್ರವೇಶಿಸಿದ ಹಾರ್ದಿಕ್‌ ಪಟೇಲ್‌, ಪ್ರಮುಖ ಬಿಜೆಪಿ ನಾಯಕರು ಮಿಸ್‌

ಹಾರ್ದಿಕ್‌ ಪಟೇಲ್‌

ಅಹಮದಾಬಾದ್‌: ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ ಪ್ರಬಲ ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಗುರುವಾರ ಕಮಲ ಪಾಳಯವನ್ನು ಪ್ರವೇಶಿಸಿದ್ದಾರೆ. ಅಹಮದಾಬಾದ್‌ ನಲ್ಲಿ ನಡೆದ ಅಧಿಕೃತ ಕಾರ್ಯಕ್ರಮದಲ್ಲಿ ಬಿಜೆಪಿ ಸೇರಿದ ಅವರು ಬಳಿಕ ಮಾತನಾಡಿ, ಇತರ ಪಕ್ಷಗಳ ನಾಯಕರನ್ನೂ ಪಕ್ಷ ಸೇರುವಂತೆ ಆಹ್ವಾನಿಸಿದರು.

ಬಿಜೆಪಿ ರಾಜ್ಯಾದ್ಯಕ್ಷ ಸಿ.ಆರ್‌. ಪಾಟೀಲ್‌ ಮತ್ತು ಹಿರಿಯ ನಾಯಕ ನಿತಿನ್‌ ಪಟೇಲ್‌ ಅವರ ಉಪಸ್ಥಿತಿಯಲ್ಲಿ ಪಕ್ಷದ ಕಚೇರಿಯಲ್ಲಿ ಹಾರ್ದಿಕ್‌ ಪಟೇಲ್‌ ಅವರನ್ನು ಕೇಸರಿ ಶಾಲು ಹಾಕಿ ಸ್ವಾಗತಿಸಲಾಯಿತು. ಆದರೆ, ಈ ಹಿಂದೆ ನಿರೀಕ್ಷಿಸಿದ್ದಂತೆ ಕೇಂದ್ರದ ಯಾವುದೇ ನಾಯಕರು ಭಾಗವಹಿಸಿರಲಿಲ್ಲ. ಮಾತ್ರವಲ್ಲ ಮುಖ್ಯಮಂತ್ರಿ ಭೂಪೇಂದರ್‌ ಪಟೇಲ್‌ ಅವರಾಗಲೀ, ಗುಜರಾತ್‌ ಸರಕಾರದ ಯಾವುದೇ ಮಂತ್ರಿಗಳು ಹಾರ್ದಿಕ್‌ ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಉಪಸ್ಥಿತರಿರದೆ ಇದ್ದಿದ್ದು ಹಲವು ಸಂಶಯ ಮತ್ತು ಕುತೂಹಲಗಳಿಗೆ ಕಾರಣವಾಗಿದೆ.

ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿರುವ ಗುಜರಾತ್‌ ವಿಧಾನಸಭಾ ಚುನಾವಣೆಗಾಗಿ ಭರದ ಸಿದ್ಧತೆಯಲ್ಲಿರುವ ಬಿಜೆಪಿ, ಪಾಟೀದಾರ್‌ ಸಮುದಾಯವನ್ನು ಸೆಳೆಯುವ ಉದ್ದೇಶದಿಂದ ಹಾರ್ದಿಕ್‌ ಪಟೇಲ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ ಎಂದು ಹೇಳಲಾಗಿದೆ.

ಬಿಜೆಪಿ ಸೇರ್ಪಡೆಗೆ ಮುನ್ನ ಪೂಜೆ

ಪೂಜೆಯೊಂದಿಗೆ ಆರಂಭ
ಹಾರ್ದಿಕ್‌ ಪಟೇಲ್‌ ಅವರು ಗುರುವಾರ ಬಿಜೆಪಿ ಸೇರುವುದು ಹಿಂದೆಯೇ ನಿರ್ಧಾರವಾಗಿತ್ತು. ಬೆಳಗ್ಗೆ ಈ ಬಗ್ಗೆ ಟ್ವೀಟ್‌ ಕೂಡಾ ಮಾಡಿದ ಹಾರ್ದಿಕ್‌, ” ರಾಷ್ಟ್ರೀಯ ಹಿತಾಸಕ್ತಿ, ರಾಜ್ಯದ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಇಂದಿನಿಂದ ಹೊಸ ಅಧ್ಯಾಯವನ್ನು ಆರಂಭಿಸಲಿದ್ದೇನೆ. ಭಾರತದ ಯಶಸ್ವಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಕೆಲಸದಲ್ಲಿ ಸಣ್ಣ ಸೈನಿಕನಾಗಿ ನಾನು ಕೆಲಸ ಮಾಡುವೆʼʼ ಎಂದು ಹೇಳಿದ್ದರು. ಬಳಿಕ ಮನೆಯಲ್ಲಿ ಹಾಗೂ ಸ್ವಾಮಿ ನಾರಾಯಣ ದೇವಾಲಯದಲ್ಲಿ ಪೂಜೆ ನಡೆಸಿ ಬಿಜೆಪಿ ಕಚೇರಿಯತ್ತ ನಡೆದರು. ಹಾರ್ದಿಕ್‌ ಪಟೇಲ್‌ ಅವರನ್ನು ಬಿಜೆಪಿ ಆಹ್ವಾನಿಸುವ, ಶುಭ ಹಾರೈಸುವ ದೊಡ್ಡ ದೊಡ್ಡ ಪೋಸ್ಟರ್‌ಗಳು ಅಲ್ಲಲ್ಲಿ ಕಂಡುಬಂದವು.

ಯಾವುದೇ ಬೇಡಿಕೆ ಇಟ್ಟಿಲ್ಲ
ಭಾರತೀಯ ಜನತಾ ಪಕ್ಷವನ್ನು ಸೇರಿದ ಬಳಿಕ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಹಾರ್ದಿಕ್‌ ಪಟೇಲ್‌, ʻʻನಾನು ಯಾವುದೇ ಹುದ್ದೆಗಾಗಿ ಯಾರ ಮುಂದೆಯೂ ಬೇಡಿಕೆ ಇಟ್ಟಿಲ್ಲ. ನಾನು ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲು ಬಿಜೆಪಿ ಸೇರಿದ್ದೇನೆ. ಕಾಂಗ್ರೆಸ್‌ ಪಕ್ಷದಲ್ಲಿ ಯಾರೂ ಏನೂ ಕೆಲಸ ಮಾಡಬಾರದು ಎಂಬ ವಾತಾವರಣ ಇದೆ. ಹಾಗಾಗಿ ನಾನು ಬಿಜೆಪಿ ಸೇರಿದ್ದೇನೆ. ಇತರ ಪಕ್ಷಗಳ ನಾಯಕರು ಕೂಡಾ ಬಿಜೆಪಿಯನ್ನು ಸೇರುವಂತೆ ನಾನು ಮನವಿ ಮಾಡುತ್ತಿದ್ದೇನೆʼʼ ಎಂದು ಹೇಳಿದರು. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಜಗತ್ತಿನ ಹೆಮ್ಮೆ ಎಂದು ನುಡಿದರು. ಕೆಲಸ ಮಾಡಲು ಉತ್ಸುಕರಾಗಿರುವ ಕಾಂಗ್ರೆಸ್‌ ನಾಯಕರು ಬಿಜೆಪಿ ಸೇರಬೇಕು ಎಂದೂ ಅವರು ಮನವಿ ಮಾಡಿದರು.

ಕಾಂಗ್ರೆಸ್‌ನಿಂದ ಬಿಜೆಪಿಗೆ
ಹಾರ್ದಿಕ್‌ ಪಟೇಲ್‌ ಅವರು 2016ರಲ್ಲಿ ಗುಜರಾತ್‌ನಲ್ಲಿ ನಡೆದ ಪಾಟಿದಾರ್‌ ಹೋರಾಟದ ಮುಂಚೂಣಿ ನಾಯಕರಾಗಿ ಎಲ್ಲರ ಗಮನ ಸೆಳೆದಿದ್ದರು. ಗುಜರಾತ್‌ನಲ್ಲಿ ಪ್ರಬಲವಾಗಿರುವ ಸಮುದಾಯಕ್ಕೆ ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ನೀಡಬೇಕು ಎಂದು ಅವರು ಆರಂಭಿಸಿದ ಜನಾಂದೋಲನ ಭಾರಿ ಪ್ರಭಾವ ಬೀರಿತ್ತು. ಬಿಜೆಪಿಯನ್ನು ಕಟು ಶಬ್ದಗಳಿಂದ ಟೀಕಿಸುತ್ತಿದ್ದ ಅವರು 2019ರ ಲೋಕಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ ಸೇರಿದ್ದರು.

ಪಟೇಲ್‌ ಅವರನ್ನು ಅತ್ಯಂತ ಉತ್ಸುಕತೆಯಿಂದ ಆಹ್ವಾನಿಸಿದ ಕಾಂಗ್ರೆಸ್‌ ಅವರಿಗೆ ಕಾರ್ಯಾಧ್ಯಕ್ಷ ಪಟ್ಟವನ್ನೇ ನೀಡಿತ್ತು. ಆದರೆ, ಹೆಚ್ಚಿನ ಯಾವುದೇ ಹೊಣೆಗಾರಿಕೆಯನ್ನು ವಹಿಸಲಿಲ್ಲ. ಇದರಿಂದ ಬೇಸತ್ತ ಅವರು ಇತ್ತೀಚೆಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು ರಾಜೀನಾಮೆ ಘೋಷಿಸಿದರು.

ಕಾಂಗ್ರೆಸ್‌ ತೊರೆದ ಅವರು ಆರಂಭದಲ್ಲಿ ಬಿಜೆಪಿ ಸೇರುತ್ತಾರಾ ಅಥವಾ ಗುಜರಾತ್‌ನಲ್ಲಿ ನೆಲೆ ಊರುತ್ತಿರುವ ಆಮ್‌ ಆದ್ಮಿ ಪಾರ್ಟಿ ಸೇರುತ್ತಾರಾ ಎನ್ನುವ ಬಗ್ಗೆ ಕುತೂಹಲವಿತ್ತು. ಈ ನಡುವೆ, ಗುಜರಾತ್‌ ಬಿಜೆಪಿಯೇ ಅವರು ಜೂನ್‌ 2ರಂದು ಬಿಜೆಪಿ ಸೇರುತ್ತಾರೆ ಎಂದು ಖಚಿತಪಡಿಸಿತ್ತು.

ಪಟೇಲ್‌ ಮತ ಸೆಳೆಯಲು ಅನುಕೂಲ
ಗುಜರಾತ್‌ನಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್‌ ಮತ್ತು ಆಪ್‌ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆಯ ಸಾಧ್ಯತೆ ಇದೆ. ಹೀಗಾಗಿ ಪಾಟಿದಾರ್‌ ಸಮುದಾಯದ ಮತವನ್ನು ಸೆಳೆಯಬೇಕು ಎನ್ನುವುದು ಬಿಜೆಪಿಯ ಗುರಿಯಾಗಿದೆ. ಇದಕ್ಕೆ ಹಾರ್ದಿಕ್‌ ಪಟೇಲ್‌ ಸೇರ್ಪಡೆಯಿಂದ ಅನುಕೂಲವಾಗಲಿದೆ ಎಂದು ಭಾವಿಸಲಾಗಿದೆ.

Exit mobile version