ಅಹಮದಾಬಾದ್: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಗುಜರಾತ್‌ನ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್ ಅವರು ಜೂನ್ 2ರಂದು ಬಿಜೆಪಿ ಸೇರಲಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ನಾಯಕತ್ವವನ್ನು ಟೀಕಿಸಿ ಪಕ್ಷ ತೊರೆದ ಯುವ ನಾಯಕನ ಮುಂದಿನ ನಿಲ್ದಾಣ ಯಾವುದು ಎನ್ನುವುದು ಸ್ಪಷ್ಟವಾಗಿದೆ. ಅವರು ಬಿಜೆಪಿ ಸೇರುವರೋ ಅಥವಾ ಗುಜರಾತ್‌ನಲ್ಲಿ ಜೋರಾಗಿ ಅಸ್ತಿತ್ವ ಪಡೆದುಕೊಳ್ಳುತ್ತಿರುವ ಆಮ್ ಆದ್ಮಿ ಪಾರ್ಟಿ ಸೇರುವರೋ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದಂತಾಗಿದೆ. ಬುಧವಾರ ಅಹಮದಾಬಾದ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಿ.ಆರ್. ಪಾಟೀಲ್ ಅವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಟೇಲ್ ಪಕ್ಷ ಸೇರುವರು ಎಂದು ರಾಜ್ಯ ಬಿಜೆಪಿ ವಕ್ತಾರ ಯಜ್ಞೇಷ್ ದವೆ ಹೇಳಿದ್ದಾರೆ. ಬಿಜೆಪಿ ಕೇಂದ್ರ ನಾಯಕರು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
2019ರಲ್ಲಿ ಕಾಂಗ್ರೆಸ್ ಸೇರಿದ್ದ ಹಾರ್ದಿಕ್ ಪಟೇಲ್ ಮೇ 19ರಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಟ್ವಟರ್‌ನಲ್ಲಿ ಪ್ರಕಟಿಸಿದ ರಾಜೀನಾಮೆ ಪತ್ರದಲ್ಲಿ ಕಾಂಗ್ರೆಸ್ ಮತ್ತು ಅದರ ನಾಯಕತ್ವದನ್ನು ಕಟುವಾಗಿ ಟೀಕಿಸಿದ್ದ ಹಾರ್ದಿಕ್, ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿಯ ನಕಾಶೆಗಳೇ ಇಲ್ಲ. ಯಾರೂ ಗಂಭೀರವಾಗಿಯೇ ಇಲ್ಲ. ಅವರೆಲ್ಲ ತಾವು ಗುಜರಾತನ್ನು, ಗುಜರಾತಿಗಳನ್ನು ವಿರೋಧಿಸುತ್ತಿದ್ದೇವೆ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈಗ 28ರ ಹರೆಯದಲ್ಲಿರುವ ಹಾರ್ದಿಕ್ ಪಟೇಲ್ 2015ರಲ್ಲಿ ತಮ್ಮ 21ನೇ ವಯಸ್ಸಿನಲ್ಲಿ ಗುಜರಾತ್‌ನಲ್ಲಿ ದೊಡ್ಡ ಆಂದೋಲನವನ್ನು ಆರಂಭಿಸಿದ್ದರು. ಪಟೇಲ್ ಅನಾಮತ್ ಆಂದೋಲನ ಸಮಿತಿಯ ನೇತೃತ್ವವನ್ನು ವಹಿಸಿದ್ದ ಅವರು, ಪಟೇಲ್ ಸಮುದಾಯವನ್ನು ಇತರ ಹಿಂದುಳಿದ ವರ್ಗಗಳಿಗೆ ಸೇರಿಸಿ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದರು. ಈ ಬೃಹತ್ ಆಂದೋಲನ ದೇಶಾದ್ಯಂತ ಸುದ್ದಿಯಾಗಿತ್ತು. ರಾಜ್ಯ ಸರಕಾರ ಹಾರ್ದಿಕ್ ವಿರುದ್ಧ ದೊಂಬಿ ಮತ್ತು ಗಲಭೆಯ ಆರೋಪಗಳನ್ನು ಹೊರಿಸಿ ಕೇಸು ದಾಖಲಾಗಿತ್ತು. ಕೋರ್ಟ್‌ಗಳು ಶಿಕ್ಷೆಯನ್ನೂ ವಿಧಿಸಿದ್ದವು. ಸುಪ್ರೀಂಕೋರ್ಟ್ ಸದ್ಯಕ್ಕೆ ಶಿಕ್ಷೆಗೆ ತಡೆಯಾಜ್ಞೆ ನೀಡಿದೆ.
ಪಟೇಲ್ ಮೀಸಲಾತಿ ಹೋರಾಟ ಭಾರಿ ದೊಡ್ಡ ಮಟ್ಟದಲ್ಲಿ ನಡೆದಿದ್ದು ಲಕ್ಷಾಂತರ ಜನ ಸೇರುತ್ತಿದ್ದರು. ಇದರೊಂದಿಗೆ ನಾಯಕರಾಗಿ ಹೊರಹೊಮ್ಮಿದ ಹಾರ್ದಿಕ್ ಪಟೇಲ್ ಅವರನ್ನು ಕಾಂಗ್ರೆಸ್ ಪಕ್ಷ ಸೆಳೆದುಕೊಂಡು ಕಾರ್ಯಾಧ್ಯಕ್ಷ ಪಟ್ಟವನ್ನು ನೀಡಿತ್ತು. ಆದರೆ, ರಾಜ್ಯ ಕಾಂಗ್ರೆಸ್ ನಾಯಕರು ಹಾರ್ದಿಕ್ ಅವರಿಗೆ ಅವಕಾಶವನ್ನೇ ನೀಡಿದಂತಿಲ್ಲ.
ಇದೀಗ ಒಂದು ಕಾಲದಲ್ಲಿ ತೀವ್ರವಾಗಿ ವಿರೋಧಿಸುತ್ತಿದ್ದ ಬಿಜೆಪಿಯನ್ನೇ ಹಾರ್ದಿಕ್ ಪಟೇಲ್ ಸೇರುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಒಂದಿಷ್ಟು ದೂರ ಸರಿದಿದ್ದ ಪಟೇಲ್ ಸಮುದಾಯ ಹಾರ್ದಿಕ್ ಮೂಲಕ ಮತ್ತೆ ಬಿಜೆಪಿಯನ್ನು ಬೆಂಬಲಿಸಲಿದೆ ಎನ್ನುವ ನಿರೀಕ್ಷೆ ಬಿಜೆಪಿಗಿದೆ.
ಗುಜರಾತ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಪ್ರವೇಶವೂ ಬಿಜೆಪಿಗೆ ಸಣ್ಣ ಮಟ್ಟದ ಕಳವಳವನ್ನು ಮೂಡಿಸಿತ್ತು. ಈ ಹಂತದಲ್ಲಿ ಹಾರ್ದಿಕ್ ಅವರ ಆಗಮನ ಅದಕ್ಕೆ ಸ್ವಲ್ಪ ಮಟ್ಟಿಗಿನ ನೆಮ್ಮದಿಯನ್ನು ನೀಡುವ ಸಾಧ್ಯತೆ ಇದೆ.
ಚುನಾವಣೆಗೆ ಸ್ಪರ್ಧೆ ಸಾಧ್ಯತೆ
ಹಾರ್ದಿಕ್ ಪಟೇಲ್ ಅವರು ಕಳೆದ ಬಾರಿಯೇ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದರು. ಆದರೆ ಹಲವಾರು ಪ್ರಕರಣಗಳು ಅವರ ಬೆನ್ನು ಹತ್ತಿದ್ದರಿಂದ ಕೋರ್ಟ್‌ನಲ್ಲಿ ಸ್ಪರ್ಧೆಗೆ ಅನುಮತಿ ಸಿಕ್ಕಿರಲಿಲ್ಲ. ಈ ನಡುವೆ ಬಿಜೆಪಿ ಸರಕಾರ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವುದರಿಂದ ಈ ಬಾರಿ ಸ್ಪರ್ಧೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಒಟ್ಟಾರೆಯಾಗಿ ಹಾರ್ದಿಕ್ ಆಗಮನದಿಂದ ಬಿಜೆಪಿ ಮೇಲೆ ಯಾವ ಪರಿಣಾಮ ಬೀರಲಿದೆ ಎನ್ನುವ ಕುತೂಹಲವಿದೆ. ಇದನ್ನೂ ಓದಿ| ಒಂದೇ ಪಕ್ಷ 30 ವರ್ಷದಿಂದ ಗೆಲ್ತಿದೆ ಅಂದ್ರೆ…. ಬಿಜೆಪಿ ಪರ ಹಾರ್ದಿಕ್ ಪಟೇಲ್ ಬ್ಯಾಟಿಂಗ್