Site icon Vistara News

Harnaaz Sandhu | ಮಿಸ್‌ ಯುನಿವರ್ಸ್‌ ವೇದಿಕೆ ಮೇಲೆ ಎಡವಿದ ಮಾಜಿ ಭುವನ ಸುಂದರಿ ಹರ್ನಾಜ್‌ ಸಂಧು, ವಿಡಿಯೊ ವೈರಲ್

Harnaaz Sandhu

ಲಂಡನ್‌: ಅಮೆರಿಕದ ಆರ್. ಬೋನಿ ಗೇಬ್ರಿಯಲ್ ಅವರು 2022ನೇ ಸಾಲಿನ ಭುವನ ಸುಂದರಿಯಾಗಿ (Miss Universe) ಹೊರಹೊಮ್ಮಿದ್ದು, 2021ನೇ ಸಾಲಿನ ಭುವನ ಸುಂದರಿ ಆಗಿದ್ದ, ಭಾರತದ ಹರ್ನಾಜ್‌ ಸಂಧು (Harnaaz Sandhu) ಅವರು ಭುವನ ಸುಂದರಿ ಕಿರೀಟವನ್ನು ಗೇಬ್ರಿಯಲ್‌ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆ ಮೇಲೆ ಕೊನೆಯ ವಾಕ್‌ ಮಾಡುವ ವೇಳೆ ಸಂಧು ಎಡವಿದರು. ಆದರೂ, ಸುಧಾರಿಸಿಕೊಂಡ ಅವರು ಎಲ್ಲರಿಗೂ ವಿದಾಯ ಹೇಳಿದರು. ಹರ್ನಾಜ್‌ ಸಂಧು ಅವರು ಎಡವಿದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬ್ರಿಟನ್‌ನ ಲೂಸಿಯಾನದಲ್ಲಿರುವ ನ್ಯೂ ಓರ್ಲಿಯನ್ಸ್​ ಮೋರಿಯಲ್ ಕನ್ವೆನ್ಷನ್ ಸೆಂಟರ್​​ನಲ್ಲಿ ಈ ಬಾರಿಯ ಭುವನ ಸುಂದರಿ ಸ್ಪರ್ಧೆ ನಡೆದಿದ್ದು, ಸ್ಪರ್ಧೆಯ ಬಳಿಕ ಹರ್ನಾಜ್‌ ಸಂಧು ಅವರನ್ನು ಕೊನೆಯ ನಡಿಗೆಗೆ (Last Walk) ಆಹ್ವಾನಿಸಲಾಯಿತು. ಇದೇ ವೇಳೆ ತುಂಬ ಭಾವುಕರಾಗಿದ್ದ ಅವರು ಎಲ್ಲರತ್ತ ಕೈಬೀಸುತ್ತ ವೇದಿಕೆಯ ಮುಂಭಾಗಕ್ಕೆ ತೆರಳಿದರು. ಆದರೆ, ಎಡವಿದ್ದರ ಲವಲೇಶವೂ ಪರಿಣಾಮ ಆಗದಂತೆ ನೋಡಿಕೊಂಡ ಅವರು, ಬಳಿಕ ಸುಧಾರಿಸಿಕೊಂಡು ಎಲ್ಲರಿಗೂ ವಿದಾಯ ಹೇಳಿದರು. ವಿದಾಯ ಹೇಳುವ ಸಂದರ್ಭದಲ್ಲಿ ಅವರ ಕಣ್ಣಾಲಿಗಳು ಒದ್ದೆಯಾಗಿದ್ದವು.

ಭುವನ ಸುಂದರಿ ಸ್ಪರ್ಧೆಯಲ್ಲಿ 84 ಸುಂದರಿಯರು ಭಾಗವಹಿಸಿದ್ದರು. ಮೊದಲ ರನ್ನರ್​ ಅಪ್​ ಆಗಿ ವೆನೆಜುವೆಲಾದ ಅಮಂಡಾ ಡುಡಾಮೆಲ್ ಮತ್ತು ಎರಡನೇ ರನ್ನರ್​ ಅಪ್​ ಆಗಿ ಡೊಮಿನಿಕನ್ ಗಣರಾಜ್ಯದ ಆಂಡ್ರೇನಾ ಮಾರ್ಟಿನೆಜ್ ಆಯ್ಕೆಯಾದರು. ಭಾರತದಿಂದ ಸ್ಪರ್ಧಿಸಿದ್ದ ಮಂಗಳೂರು ಮೂಲದ ದೀವಿತಾ ರೈ ಅವರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. 1994ರಲ್ಲಿ ಭಾರತದ ಸುಶ್ಮಿತಾ ಸೇನ್‌ ಹಾಗೂ 2000ನೇ ಇಸವಿಯಲ್ಲಿ ಲಾರಾ ದತ್ತಾ ಭುವನ ಸುಂದರಿ ಕಿರೀಟ ಧರಿಸಿದ್ದರು. ಇವರ ನಂತರ ಕಿರೀಟವು ಹರ್ನಾಜ್‌ ಸಂಧು ಮುಡಿಗೇರಿತ್ತು.

ಇದನ್ನೂ ಓದಿ | Miss Universe 2022 | ಈ ಸಲ ಭುವನ ಸುಂದರಿ ಪಟ್ಟ ಯುಎಸ್​ ಚೆಲುವೆ ಬೋನಿ ಗೇಬ್ರಿಯಲ್ ಪಾಲಿಗೆ; ಮಂಗಳೂರು ಮೂಲದ ದಿವಿತಾ ರೈಗೆ ಎಷ್ಟನೇ ಸ್ಥಾನ?

Exit mobile version