Site icon Vistara News

HD Deve Gowda: ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

HD Deve Gowda

ನವದೆಹಲಿ: ಮಾಜಿ ಪ್ರಧಾನಿ, ಜೆಡಿಎಸ್‌ ನಾಯಕ ಎಚ್‌.ಡಿ.ದೇವೇಗೌಡ (HD Deve Gowda) ಅವರು ಭಾನುವಾರ (ಆಗಸ್ಟ್‌ 4) ದೆಹಲಿ ಮೆಟ್ರೋ (Delhi Metro)ದಲ್ಲಿ ಸಂಚರಿಸಿದರು. ಈ ವೇಳೆ ಮೆಟ್ರೋದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಮಾಹಿತಿ ನೀಡಿದರು. ದೆಹಲಿಯ ಲೋಕ ಕಲ್ಯಾಣ ಮಾರ್ಗದಿಂದ ಎಚ್.ಡಿ.ದೇವೇಗೌಡ ಅವರು ತಮ್ಮ ಪ್ರಯಾಣ ಆರಂಭಿಸಿದರು. ಈ ವೇಳೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ದೆಹಲಿ ಮೆಟ್ರೋ ಸೇವೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಸಂಸತ್‌ ಅಧಿವೇಶನದ ಹಿನ್ನಲೆಯಲ್ಲಿ ದೆಹಲಿಯಲ್ಲಿರುವ ದೇವೇಗೌಡ ಅವರು ಶನಿವಾರ ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಕ್ಕೆ ಭೇಟಿ ನೀಡಿ ಮೆಚ್ಚುಗೆ ಸೂಚಿಸಿದ್ದರು. ಪಿಎಂ ಸಂಗ್ರಹಾಲಯವನ್ನು ಇಷ್ಟು ಸುಸಜ್ಜಿತವಾಗಿ ಮಾಡಿದ್ದಕ್ಕಾಗಿ ಅವರು ನರೇಂದ್ರ ಮೋದಿ ಅವರಿಗೆ ಅಭಿನಂದನೆ ತಿಳಿಸಿದ್ದರು.

ʼʼನಾನು ದೆಹಲಿಯಲ್ಲಿರುವ ಪ್ರಧಾನಿಮಂತ್ರಿಗಳ ಮ್ಯೂಸಿಯಂ ʼಪಿಎಂ ಸಂಗ್ರಹಾಲಯʼಕ್ಕೆ ಭೇಟಿ ನೀಡಿದೆ. ಇದೊಂದು ಅದ್ಭುತ ಅನುಭವ ನೀಡಿತು. ಇಂತಹದ್ದೊಂದು ಐತಿಹಾಸಿಕ ವಸ್ತು ಸಂಗ್ರಹಾಲಯ ನಿರ್ಮಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅಭಿನಂದನಾರ್ಹರು. ಇದುವರೆಗಿನ ಎಲ್ಲ ಪ್ರಧಾನಿಗಳ ವಿವರ, ಅವರು ಸಲ್ಲಿಸಿರು ಸೇವೆ, ದೇಶಕ್ಕಾಗಿ ಅವರ ಕೊಡುಗೆ ಮುಂತಾದ ವಿವರಗಳು ಇಲ್ಲಿ ಸಿಗುತ್ತದೆʼʼ ಎಂದು ದೇವೇಗೌಡ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಜತೆಗೆ ತಮ್ಮನ್ನು ಮ್ಯೂಸಿಯಂಗೆ ಸ್ವಾಗತಿಸಿದ ಶ್ರೀ ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಅವರಿಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ʼʼಮ್ಯೂಸಿಯಂಗೆ ನನ್ನನ್ನು ಸ್ವಾಗತಿಸಿದ ನೃಪೇಂದ್ರ ಮಿಶ್ರಾ ಅವರಿಗೆ ಧನ್ಯವಾದಗಳು. PMOIndia ಯೋಜನೆಯ ಸಾಕಾರಕ್ಕೆ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಅದೇ ರೀತಿ ಮ್ಯೂಸಿಮಂನಲ್ಲಿ ಪ್ರತಿಯೊಂದೂ ವಿವರಗಳನ್ನು, ಮಾಹಿತಿಗಳನ್ನು ನೀಡಿದ ಡಾ. ಎ.ಸೂರ್ಯ ಪ್ರಕಾಶ್‌ ಅವರಿಗೂ ನಾನು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತಿದ್ದೇನೆʼʼ ಎಂದು ಹೇಳಿದ್ದಾರೆ.

ʼʼಮ್ಯೂಸಿಯಂಗೆ ಭೇಟಿ ನೀಡಿದ್ದು ನನಗೆ ನಿಜಕ್ಕೂ ತುಂಬ ಖುಷಿಯ ಅನುಭವ ನೀಡಿತು. ಕರ್ನಾಟಕದ ಕುಗ್ರಾಮವೊಂದರ ಬಡ ಕುಟುಂಬದಲ್ಲಿ ಜನಿಸಿದ ನಾನು ಇಂತಹ ಅದ್ಭುತ ದೇಶವೊಂದಕ್ಕೆ ಪ್ರಧಾನಿಯಾಗಿದ್ದು ಬಹಳ ಹೆಮ್ಮೆಯ ವಿಷಯ. ಇಂತಹ ಅದ್ಭುತ ಮ್ಯೂಸಿಯಂನ ಭಾಗವಾಗುತ್ತೇನೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಪ್ರಜಾಪ್ರಭುತ್ವದ ಶಕ್ತಿಯೇ ಅಂತಹದ್ದು. ಜನರ ಆಶೀರ್ವಾದದಿಂದ ಈ ಕನಸು ನನಸಾಗಿದೆ. ನಾನು ಪ್ರಧಾನಿಯಾಗಿದ್ದಾಗ ದೇಶಕ್ಕಾಗಿ ಶಕ್ತಿಮೀರಿ ಕೆಲಸ ಮಾಡಿದ್ದೇನೆ ಎನ್ನುವ ಬಗ್ಗೆ ತೃಪ್ತಿ ಇದೆ. ಎಲ್ಲರಿಗೂ ಧನ್ಯವಾದಗಳು ಮತ್ತು ಅಭಿನಂದನೆಗಳುʼʼ ಎಂದು ಅವರು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಪಿಎಂ ಸಂಗ್ರಹಾಲಯಕ್ಕೆ ಆಗಮಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ʼʼಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಮ್ಯೂಸಿಯಂಗೆ ಭೇಟಿ ನೀಡಿದ್ದಾರೆ ಎನ್ನುವ ವಿಚಾರ ತಿಳಿದು ಬಹಳಷ್ಟು ಸಂತಸವಾಯ್ತುʼʼ ಎಂದು ಮೋದಿ ತಿಳಿಸಿದ್ದಾರೆ.

ಇದನ್ನೂ ಓದಿ: HD Devegowda: ಮೋದಿ ಬಜೆಟ್‌ಗೆ ಎಚ್‌.ಡಿ.ದೇವೇಗೌಡರ ಮೆಚ್ಚುಗೆ; ಬೆಂಗಳೂರು ನೀರಿನ ಸಮಸ್ಯೆ ಬಗೆಹರಿಸಲು ಮನವಿ

ಕೆಲವು ದಿನಗಳ ಹಿಂದೆ ವ್ಹೀಲ್‌ ಚೇರ್‌ನಲ್ಲಿಯೇ ತೆರಳಿದ ದೇವೇಗೌಡ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ದೇವೇಗೌಡರು ತೆರಳಿ ಮೋದಿ ಜತೆ ಮಾತುಕತೆ ನಡೆಸಿದ್ದರು. ದೇವೇಗೌಡ ಅವರನ್ನು ಭೇಟಿಯಾಗಿರುವ ಫೋಟೊಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Exit mobile version