Site icon Vistara News

HD Deve Gowda: ವ್ಹೀಲ್‌ಚೇರ್‌ನಲ್ಲೇ ತೆರಳಿ ಮೋದಿಯನ್ನು ಭೇಟಿಯಾದ ದೇವೇಗೌಡ; ಇಲ್ಲಿವೆ ಫೋಟೊಗಳು

HD Deve Gowda

HD Deve Gowda Meets PM Narendra Modi In Delhi

ನವದೆಹಲಿ: ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಮೊದಲೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Deve Gowda) ಅವರ ಮೇಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗೌರವ ಹೊಂದಿದ್ದರು. ಹಲವು ಸಂದರ್ಭಗಳಲ್ಲಿ ಮೋದಿ ಅವರು ಗೌರವವನ್ನು ತೋರಿಸಿದ್ದರು. ಇನ್ನು, ಮೈತ್ರಿ ಮಾಡಿಕೊಂಡ ಬಳಿಕವಂತೂ ದೇವೇಗೌಡರು ಮೋದಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಇನ್ನು, ಇದರ ಮಧ್ಯೆಯೇ, ದೆಹಲಿಯಲ್ಲಿ ದೇವೇಗೌಡ ಹಾಗೂ ನರೇಂದ್ರ ಮೋದಿ ಅವರು ಭೇಟಿಯಾಗಿದ್ದಾರೆ.

ವ್ಹೀಲ್‌ ಚೇರ್‌ನಲ್ಲಿಯೇ ತೆರಳಿದ ದೇವೇಗೌಡ ಅವರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ದೇವೇಗೌಡರು ತೆರಳಿ ಮೋದಿ ಜತೆ ಮಾತುಕತೆ ನಡೆಸಿದ್ದಾರೆ. ದೇವೇಗೌಡ ಅವರನ್ನು ಭೇಟಿಯಾಗಿರುವ ಫೋಟೊಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಭೇಟಿ ವೇಳೆ ಕರ್ನಾಟಕ ಸೇರಿ ಹಲವು ವಿಷಯಗಳ ಕುರಿತು ಇಬ್ಬರೂ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ದೇವೇಗೌಡ ಅವರನ್ನು ಭೇಟಿಯಾಗಿರುವ ಕುರಿತು ಮೋದಿ ಅವರು ಪೋಸ್ಟ್‌ ಕೂಡ ಹಂಚಿಕೊಂಡಿದ್ದಾರೆ. “7 ಲೋಕ ಕಲ್ಯಾಣ ಮಾರ್ಗದಲ್ಲಿರುವ ನಿವಾಸದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿಯಾದೆ. ಅವರನ್ನು ಭೇಟಿಯಾಗುವುದೇ ಗೌರವದ ಸಂಗತಿಯಾಗಿದೆ. ಅವರು ಪ್ರಮುಖ ವಿಷಯಗಳ ಕುರಿತು ಹೊಂದಿರುವ ಜ್ಞಾನ, ದೃಷ್ಟಿಕೋನವು ಮೆಚ್ಚುವಂಥದ್ದು. ಅವರು ನೀಡಿದ ಸಲಹೆಗಳು ನನಗೆ ಹಲವು ಸಂದರ್ಭಗಳಲ್ಲಿ ಉಪಯುಕ್ತವಾಗಿವೆ” ಎಂಬುದಾಗಿ ಮೋದಿ ಪೋಸ್ಟ್‌ ಮಾಡಿದ್ದಾರೆ.

ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲು ಎಚ್‌.ಡಿ.ದೇವೇಗೌಡ ಅವರು ಪತ್ರ ಬರೆದಿದ್ದರು. ʼʼನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾನ ವಚನ ಸ್ವೀಕರಿಸುತ್ತಿದ್ದಾರೆ. ಈ ಐತಿಹಾಸಿಕ ಸಂದರ್ಭದಲ್ಲಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತಿದ್ದೇನೆ. ಅನಾರೋಗ್ಯದ ಕಾರಣದಿಂದ ನನಗೆ ಈ ಕಾರ್ಯಕ್ರಮದಲ್ಲಿ ಭಾವಹಿಸಲು ಸಾಧ್ಯವಾಗುತ್ತಿಲ್ಲ. ಆದರೆ ಖಂಡಿತವಾಗಿಯೂ ನಾನು ಟಿವಿಯಲ್ಲಿ ಲೈವ್‌ನಲ್ಲೇ ಕಾರ್ಯಕ್ರಮವನ್ನು ವೀಕ್ಷಿಸುತ್ತೇನೆ. ಕಾಂಗ್ರೆಸ್ ಏನೇ ಹೇಳಲಿ, ಭಾರತೀಯ ಪ್ರಜಾಪ್ರಭುತ್ವವು ದೃಢವಾಗಿದೆʼʼ ಎಂದು ದೇವೇಗೌಡ ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ: HD Kumaraswamy: ನನ್ನ ಮತ್ತು ದೇವೇಗೌಡರ ಸರ್ಕಾರ ಕೆಡವಿದ್ದು ಯಾರು ಅಂತ ಹೇಳಿ; ಡಿಕೆಶಿ ವಿರುದ್ಧ ಎಚ್‌ಡಿಕೆ ಕಿಡಿ

Exit mobile version