ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ತೆಲಂಗಾಣ ಸಿಎಂ ಕೆ. ಚಂದ್ರಶೇಖರ ರಾವ್ ಅವರ ನಡುವೆ ಸುಮಾರು ಮೂರು ಗಂಟೆ ಹೈದರಾಬಾದ್‌ನಲ್ಲಿ ಭೇಟಿ ನೆಡದಿದ್ದು, ದಸರಾ-ವಿಜಯದಶಮಿ ವೇಳೆಗೆ ರಾಷ್ಟ್ರಮಟ್ಟದಲ್ಲಿ ರಾವ್ ಘೋಷಿಸುವ ಪರ್ಯಾಯ ಶಕ್ತಿಗೆ ಕೈಜೋಡಿಸುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಮಧ್ಯಾಹ್ನ ಒಂದು ಗಂಟೆಗೆ ತೆಲಂಗಾಣ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ʼಪ್ರಗತಿ ಭವನʼಕ್ಕೆ ಆಗಮಿಸಿದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೆ. ಚಂದ್ರಶೇಖರ ರಾವ್ ಅವರು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಬೆಳ್ಳಿಯ ಸರಸ್ವತಿ ವೀಣೆಯನ್ನು ನೀಡಿ ಗೌರವಿಸಿದರು.
ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ವಹಿಸಬೇಕಾದ ಗುರುತರ ಪಾತ್ರದ ಬಗ್ಗೆ ಇಬ್ಬರೂ ನಾಯಕರು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಅಲ್ಲದೆ, ರಾಷ್ಟ್ರಮಟ್ಟದಲ್ಲಿ ಹೊರಹೊಮ್ಮಲಿರುವ ಪರ್ಯಾಯ ರಾಜಕೀಯ ಕೂಟದ ಬಗ್ಗೆಯೂ ಕುಮಾರಸ್ವಾಮಿ ಅವರಿಗೆ ಮಾಹಿತಿಯನ್ನು ಕೆಸಿಆರ್ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಒಟ್ಟಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಕೈಜೋಡಿಸುವಂತೆ ಕೋರಿದ ಕೆಸಿಆರ್, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಪರ್ಯಾಯವಾಗಿ ರೂಪುಗೊಳ್ಳಲಿರುವ ರಾಜಕೀಯ ವ್ಯವಸ್ಥೆ ಹೇಗಿರುತ್ತದೆ? ಅದರ ಧ್ಯೇಯೋದ್ದೇಶಗಳೇನು? ಯಾವ ದಿಕ್ಕಿನಲ್ಲಿ ಕೆಲಸ ಮಾಡಬೇಕು? ಎಂಬ ಮಾಹಿತಿಯನ್ನು ಕೆಸಿಆರ್ ಅವರು ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ದೇಶದಲ್ಲಿರುವ ಆರು ಪ್ರಮುಖ ನಗರಗಳಲ್ಲಿ ಮೂಲಸೌಕರ್ಯ ಕೊರತೆಯಿಂದ ಇಡೀ ದೇಶಕ್ಕೆ ಹಿನ್ನಡೆ ಉಂಟಾಗಿದೆ. ದಿನೇದಿನೆ ನಿರುದ್ಯೋಗ ಹೆಚ್ಚಾಗುತ್ತಿದೆ. ಕೃಷಿ, ಕೈಗಾರಿಕೆಗೆ ಮಾರಕವಾದ ವಾತಾವರಣ ಸೃಷ್ಟಿಯಾಗುತ್ತಿದೆ. ಇದೆಲ್ಲವನ್ನೂ ಸರಿ ಮಾಡುವುದರ ಜತೆಗೆ, ದೇಶದ ಉದ್ದಗಲಕ್ಕೂ ಕೋಮು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿಯೂ ಹೊಸ ರಾಜಕೀಯ ನಿರ್ಣಾಯಕ ಪಾತ್ರ ವಹಿಸುವ ಬಗ್ಗೆಯೂ ಇಬ್ಬರೂ ನಾಯಕರು ಚರ್ಚೆ ಮಾಡಿದರು ಎನ್ನಲಾಗಿದೆ.
ಬಿಜೆಪಿ ಆಡಳಿತ ಬಗ್ಗೆ ಚರ್ಚೆ
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಉಂಟಾಗಿರುವ ಪರಿಸ್ಥಿತಿಗಳು ಹಾಗೂ ಸಾಮಾನ್ಯ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಉಭಯ ನಾಯಕರು ಚರ್ಚಿಸಿದ್ದು, ಬಿಜೆಪಿ ಪಕ್ಷಕ್ಕೆ ಪರ್ಯಾಯವಾಗಿ ರಾಜಕೀಯ ಶಕ್ತಿ ರೂಪಿಸಬೇಕು ಎಂದು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ರಾಜ್ಯ ಸರ್ಕಾರದ ಅಧಿಕೃತ ಅತಿಥಿಯ ಸತ್ಕಾರ ಸ್ವೀಕರಿಸಿದ ಎಚ್‌ಡಿಕೆ, ತೆಲಂಗಾಣದ ಸಚಿವರಾದ ಪ್ರಶಾಂತ ರೆಡ್ಡಿ, ಪಲ್ಲಾ ರಾಜೇಶ್ವರ ರೆಡ್ಡಿ, ಮಧುಸೂಧನಾಚಾರಿ ಸೇರಿದಂತೆ ಟಿಆರ್ ಎಸ್ ಪಕ್ಷದ ಅತ್ಯಂತ ಪ್ರಮುಖ ನಾಯಕರನ್ನು ಭೇಟಿ ಮಾಡಿದರು.
ಕೆಟಿಆರ್ ಅವರೊಂದಿಗೂ ಚರ್ಚೆ
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ಮಾತುಕತೆಗೆ ಮುನ್ನ ತೆಲಂಗಾಣದ ಪೌರಾಡಳಿತ ಹಾಗೂ ನಗರಾಭಿವೃದ್ಧಿ ಖಾತೆ ಸಚಿವ, ಚಂದ್ರಶೇಖರ ರಾವ್ ಪುತ್ರ ಕೆ.ಟಿ.ರಾಮಾರಾವ್ (ಕೆಟಿಆರ್) ಅವರೊಂದಿಗೆ ಮಾತುಕತೆ ನಡೆಸಿದರು.
ಇದನ್ನೂ ಓದಿ | KCR Strategy | ಪ್ರಧಾನಿ ಹುದ್ದೆ ಮೇಲೆ ಕೆಸಿಆರ್ ಕಣ್ಣು, ಕರ್ನಾಟಕಕ್ಕೂ ಕಾಲಿಡಲಿದೆ ತೆಲಂಗಾಣದ ಟಿಆರ್‌ಎಸ್!