Site icon Vistara News

Health Care: ಉ.ಪ್ರ. ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೆ ಬಿಜೆಪಿ ಮಾಜಿ ಎಂಪಿ ಮಗ ಸಾವು, ತಂದೆಯ ಧರಣಿ

bjp mp protest in UP after sons death

ಲಖನೌ: ಉನ್ನತ ಸರ್ಕಾರಿ ಆಸ್ಪತ್ರೆಯಲ್ಲಿ ʼಬೆಡ್‌ಗಳ ಕೊರತೆ’ಯಿಂದಾಗಿ ಮಾಜಿ ಸಂಸದರ ಪುತ್ರನೇ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದೆ. ಇದು ರಾಜ್ಯದ ಜನತೆಗೆ ಶಾಕ್‌ ನೀಡಿದ್ದು, ರಾಜ್ಯದ ವೈದ್ಯಕೀಯ ಸೌಲಭ್ಯಗಳ (uttara pradesh Health Care) ದುಃಸ್ಥಿತಿಯ ಮೇಲೆ ಬೆಳಕು ಚೆಲ್ಲುವಂತಿದೆ ಎಂದು ಟೀಕಿಸಲಾಗಿದೆ.

ಲಖನೌದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (SGPGIMS) ನಲ್ಲಿ ಬಿಜೆಪಿಯ ಮಾಜಿ ಸಂಸದರ ಪುತ್ರನ ಸಾವಿನ ನಂತರ ಉತ್ತರ ಪ್ರದೇಶದ ವೈದ್ಯಕೀಯ ಸೌಲಭ್ಯಗಳ ದುಃಸ್ಥಿತಿ ಮತ್ತೆ ದೇಶದ ಗಮನ ಸೆಳೆದಿವೆ. “ತುರ್ತು ವಾರ್ಡ್‌ನಲ್ಲಿ ಹಾಸಿಗೆಯ ಅಲಭ್ಯತೆಯ ಕಾರಣ ನೀಡಿ ಸಿಬ್ಬಂದಿ ಸಮಯೋಚಿತ ಚಿಕಿತ್ಸೆ ಒದಗಿಸಲಿಲ್ಲ. ಹೀಗಾಗಿ ಸಾವು ಸಂಭವಿಸಿದೆʼʼ ಎಂದು ಕುಟುಂಬ ಆರೋಪಿಸಿದೆ.

ಬಂಡಾ ಭೈರೋನ್‌ನ ಮಾಜಿ ಸಂಸದ ಪ್ರಸಾದ್ ಮಿಶ್ರಾ ಅವರು ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ತಮ್ಮ ಮಗ ಪ್ರಕಾಶ್ ಮಿಶ್ರಾ (40) ಅವರೊಂದಿಗೆ SGPGI ನ ತುರ್ತು ವಿಭಾಗಕ್ಕೆ ಬಂದರು. ಪ್ರಕಾಶ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಸ್ಥಿತಿ ಹದಗೆಟ್ಟಿತ್ತು. ವರದಿಗಳ ಪ್ರಕಾರ, ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿ ಹಾಸಿಗೆಯ ಅಲಭ್ಯತೆ ಇರುವುದರಿಂದಾಗಿ ಸಂಸದರ ಮಗನಿಗೆ ಪ್ರವೇಶ ನಿರಾಕರಿಸಿದರು.

ಬಂದ ಒಂದು ಗಂಟೆಯ ನಂತರ ಪ್ರಕಾಶ್ ಸಾವನ್ನಪ್ಪಿದರು. ಆಕ್ರೋಶಗೊಂಡ ಮಾಜಿ ಸಂಸದ ಆಸ್ಪತ್ರೆಯಲ್ಲಿ ಧರಣಿ ನಡೆಸಿ ಅಧಿಕಾರಿಗಳ ಗಮನ ಸೆಳೆದರು. SGPGIMS ನಿರ್ದೇಶಕ ಪ್ರೊ.ಆರ್.ಕೆ.ಧಿಮಾನ್ ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಉತ್ತರ ಪ್ರದೇಶ ಸರ್ಕಾರ ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದ ವೈದ್ಯರನ್ನು ಸಂಸ್ಥೆಯಲ್ಲಿನ ಸೇವೆಯಿಂದ ಮುಕ್ತಗೊಳಿಸಿದ್ದು, ಸಂಸ್ಥೆಯ ನಿರ್ದೇಶಕರಿಗೆ ಎಚ್ಚರಿಕೆಯನ್ನೂ ನೀಡಿದೆ. ಈ ವಿಷಯವನ್ನು ಪರಿಶೀಲಿಸಲು PGI ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ. ಯುಪಿ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಚಿತ್ರಕೂಟದಲ್ಲಿರುವ ಮಾಜಿ ಸಂಸದರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಮತ್ತು ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ವಿಐಪಿಗಳನ್ನೇ ಉಳಿಸಲು ಸಾಧ್ಯವಾಗದ ಪರಿಸ್ಥಿತಿ ಇರುವಲ್ಲಿ, ಶ್ರೀಸಾಮಾನ್ಯರ ಪಾಡೇನು ಎಂದು ಜನ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಲಖನೌದ PGIನಲ್ಲಿ ಎಲ್ಲರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಹಲವು X ಬಳಕೆದಾರರು ಆರೋಪಿಸಿದ್ದಾರೆ. PGIಯ ಗ್ಯಾಸ್ಟ್ರೋ ವಾರ್ಡ್‌ನಲ್ಲಿ “ತೀವ್ರವಾದ ಪಿತ್ತಜನಕಾಂಗದ ವೈಫಲ್ಯ ಅನುಭವಿಸಿದವರಿಗೆ ಸತುವನ್ನು ಹೊಂದಿರುವ ಮಲ್ಟಿವಿಟಮಿನ್ ಅನ್ನು ವೈದ್ಯರು ಶಿಫಾರಸು ಮಾಡುವುದನ್ನು ನೋಡಿದ್ದೇನೆʼʼ ಎಂದು ಇನ್ನೊಬ್ಬ ಬಳಕೆದಾರರು ಟೀಕಿಸಿದ್ದಾರೆ.

ಇದನ್ನೂ ಓದಿ: Vladimir Putin: ಪುಟಿನ್ ಆರೋಗ್ಯವಾಗಿದ್ದಾರೆ, ಹಾರ್ಟ್ ಅಟ್ಯಾಕ್ ಸುದ್ದಿ ಅಲ್ಲಗಳೆದ ರಷ್ಯಾ ಸರ್ಕಾರ

Exit mobile version