Site icon Vistara News

Health Drink: ಬೋರ್ನ್‌ವೀಟಾವನ್ನು ‘ಆರೋಗ್ಯ ಪಾನೀಯ’ ವಿಭಾಗದಿಂದ ತೆಗೆದು ಹಾಕಿ; ಕೇಂದ್ರದ ಆದೇಶ

Health Drink

Health Drink

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪೆನಿಗಳಿಗೆ ಸಲಹೆ ನೀಡಿದ್ದು, ಬೋರ್ನ್‌ವೀಟಾ(Bournvita) ಸೇರಿದಂತೆ ವಿವಿಧ ಪಾನೀಯಗಳನ್ನು ತಮ್ಮ ಪೋರ್ಟಲ್ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ‘ಆರೋಗ್ಯ ಪಾನೀಯಗಳು’ (Health Drink) ವಿಭಾಗದಿಂದ ತೆಗೆದು ಹಾಕುವಂತೆ ಆದೇಶ ನೀಡಿದೆ.

ಬೋರ್ನ್‌ವೀಟಾದಲ್ಲಿ ಸ್ವೀಕಾರಾರ್ಹ ಮಿತಿಗಿಂತ ಹೆಚ್ಚಿನ ಸಕ್ಕರೆ ಮಟ್ಟವಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (NCPCR) ನಡೆಸಿದ ತನಿಖೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಈ ಸಲಹೆ ಕೇಳಿ ಬಂದಿದೆ. ಸುರಕ್ಷತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಪೂರೈಸಲು ವಿಫಲವಾಗಿ ‘ಆರೋಗ್ಯ ಪಾನೀಯಗಳು’ ಎಂದು ಬಿಂಬಿಸುತ್ತಿರುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎನ್‌ಸಿಪಿಸಿಆರ್‌ ಈ ಹಿಂದೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (FSSAI) ಸಲಹೆ ನೀಡಿತ್ತು.

ದೇಶದ ಆಹಾರ ಕಾನೂನುಗಳಲ್ಲಿ ‘ಆರೋಗ್ಯ ಪಾನೀಯ’ ಎನ್ನುವುದನ್ನು ವ್ಯಾಖ್ಯಾನಿಸಲಾಗಿಲ್ಲ ಮತ್ತು ಅದರ ಅಡಿಯಲ್ಲಿ ಆರೋಗ್ಯ ಪಾನೀಯ ಎಂಬಂತೆ ಬಿಂಬಿಸುವುದು ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ. ಹಾಲಿನ ಉತ್ಪನ್ನ ಅಥವಾ ಮಾಲ್ಟ್ ಆಧಾರಿತ ಪಾನೀಯಗಳನ್ನು ‘ಆರೋಗ್ಯ ಪಾನೀಯಗಳು’ ಎಂದು ಲೇಬಲ್ ಮಾಡದಂತೆ ಎಫ್ಎಸ್ಎಸ್ಎಐ ಈ ತಿಂಗಳ ಆರಂಭದಲ್ಲಿ ಇ-ಕಾಮರ್ಸ್ ಪೋರ್ಟಲ್‌ಗೆ ಸೂಚನೆ ನೀಡಿತ್ತು.

ʼʼತಪ್ಪು ಪದಗಳನ್ನು ಬಳಸುವುದು ಗ್ರಾಹಕರನ್ನು ದಾರಿ ತಪ್ಪಿಸಬಹುದು. ಆ ಮೂಲಕ ಆ ಜಾಹೀರಾತುಗಳನ್ನು ತೆಗೆದುಹಾಕಲು ಅಥವಾ ಸರಿಪಡಿಸಲು ವೆಬ್‌ಸೈಟ್‌ಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಯೂಟ್ಯೂಬರ್ ಒಬ್ಬರು ತಮ್ಮ ವಿಡಿಯೊದಲ್ಲಿ ಬೋರ್ನ್‌ವೀಟಾ ಪೌಡರ್ ಅನ್ನು ಉದಾಹರಣೆಯಾಗಿ ತೆಗೆದುಕೊಂಡು ಇದರಲ್ಲಿ ಅತಿಯಾದ ಸಕ್ಕರೆ, ಕೋಕೋ ಅಂಶಗಳು ಮತ್ತು ಹಾನಿಕಾರಕ ಬಣ್ಣಗಳಿವೆ. ಇದು ಕ್ಯಾನ್ಸರ್ ಸೇರಿದಂತೆ ಮಕ್ಕಳಲ್ಲಿ ಗಂಭೀರ ಆರೋಗ್ಯ ಅಪಾಯಗಳಿಗೆ ಕಾರಣವಾಗಬಹುದು ಎಂದು ತಿಳಿಸಿದ್ದರು.

ದೇಶಾದ್ಯಂತ ಕೋಟ್ಯಂತರ ಮಂದಿ ಸೇವಿಸುವ ಪೌಷ್ಟಿಕ ಹುಡಿ ಬೋರ್ನ್‌ವೀಟಾವು ಹಾನಿಕಾರಕ ಪದಾರ್ಥಗಳನ್ನು ಒಳಗೊಂಡಿದೆ ಎಂಬ ಆರೋಪಕ್ಕೆ ಉತ್ತರಿಸುವಂತೆ ಕಳೆದ ವರ್ಷ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮೊಂಡೆಲೆಝ್ ಇಂಡಿಯಾ ಇಂಟರ್‌ನ್ಯಾಷನಲ್‌ಗೆ ಪತ್ರ ಬರೆದಿತ್ತು.

ʼʼಮಕ್ಕಳು ಕುಡಿಯುವ ಬೋರ್ನ್‌ವೀಟಾದಲ್ಲಿ ಅಧಿಕ ಸಕ್ಕರೆ ಪ್ರಮಾಣವಿದ್ದು, ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆʼʼ ಎಂಬ ದೂರಿನ ಹಿನ್ನೆಲೆಯಲ್ಲಿ ತನ್ನ ಎಲ್ಲ ದಾರಿ ತಪ್ಪಿಸುವ ಜಾಹೀರಾತು, ಪ್ಯಾಕೇಜಿಂಗ್‌ ಹಾಗೂ ಲೇಬಲ್‌ಗಳನ್ನು ಹಿಂತೆಗೆದುಕೊಳ್ಳುವಂತೆ ಎನ್‌ಸಿಪಿಸಿಆರ್‌’ ಈ ಹಿಂದೆಯೇ ಬೋರ್ನ್‌ವೀಟಾಗೆ ಸೂಚಿಸಿತ್ತು.

ಇದನ್ನೂ ಓದಿ: Borewell Tragedy: ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕ; ರಕ್ಷಣಾ ಕಾರ್ಯ ಚುರುಕು

ಮೊಂಡೆಲೆಝ್‌ನ ಅಂಗಸಂಸ್ಥೆಯಾದ ಕ್ಯಾಡ್‌ಬರಿಯ ಉತ್ಪನ್ನವಾದ ಬೋರ್ನ್‌ವೀಟಾವು ಸಕ್ಕರೆ ಹಾಗೂ ಕೊಕ್ಕಾದ ಘನದ್ರವ್ಯಗಳು ಹಾಗೂ ಕ್ಯಾನ್ಸರ್‌ಕಾರಕ ಕೃತಕ ಬಣ್ಣವನ್ನು ಒಳಗೊಂಡಿವೆ ಎಂದು ದೂರು ನೀಡಲಾಗಿತ್ತು. ಜತೆಗೆ ಭಾರತೀಯ ಆಹಾರ ಸುರಕ್ಷತಾ ಮಾನದಂಡ ಪ್ರಾಧಿಕಾರ ಹಾಗೂ ಗ್ರಾಹಕ ರಕ್ಷಣಾ ಕಾಯ್ದೆಯ ಮಾರ್ಗದರ್ಶಿ ಸೂತ್ರಗಳು ಹಾಗೂ ನಿಯಮಾವಳಿಗಳ ಪ್ರಕಾರ ಕಡ್ಡಾಯವಾಗಿರುವ ಉತ್ಪನ್ನದಲ್ಲಿರುವ ಅಂಶಗಳ ವಿವರಗಳನ್ನು ಪ್ರದರ್ಶಿಸುವಲ್ಲಿ ವಿಫಲವಾಗಿದೆ ಎಂದು ಮಕ್ಕಳ ಹಕ್ಕುಗಳ ಆಯೋಗವು ಪತ್ರದಲ್ಲಿ ತಿಳಿಸಿತ್ತು.

Exit mobile version