ಬೆಂಗಳೂರು: ಚಳಿಗಾಲ ಆರಂಭವಾಗಿದೆ. ಜತೆಗೆ ಆರೋಗ್ಯ ಸಮಸ್ಯೆಯೂ ಕಾಡಲಾರಂಭಿಸಿದೆ. ನೆಗಡಿ, ಕೆಮ್ಮು, ಜ್ವರ ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಸೂಕ್ಷ್ಮ ದೇಹ ಸ್ಥಿತಿ ಹೊಂದಿರುವ ಮಕ್ಕಳಲ್ಲಿ ಬೇಗ ಆರೋಗ್ಯ ಸಮಸ್ಯೆ ಕಂಡು ಬರುತ್ತದೆ. ಈ ಮಧ್ಯೆ ಚೀನಾದಲ್ಲಿ ನಿಗೂಢ ನ್ಯುಮೋನಿಯಾ ಕಾಣಿಸಿಕೊಂಡ ಹಿನ್ನಲೆಯಲ್ಲಿ ಇಲ್ಲೂ ಭಯ ಆರಂಭವಾಗಿದೆ (China pneumonia scare). ಅಲ್ಲಿನ ಮಕ್ಕಳಲ್ಲಿ ಉಸಿರಾಟ ತೊಂದರೆಯ ಅನಾರೋಗ್ಯ ಹೆಚ್ಚುತ್ತಿದೆ. ಇನ್ಫ್ಲುಯೆಂಜಾ (ILT) ಮತ್ತು ಚಳಿಗಾಲದ ಋತುವಿನಿಂದಾಗಿ ಉಸಿರಾಟದ ಕಾಯಿಲೆಯ ಪ್ರಮಾಣ ಹೆಚ್ಚಾಗುತ್ತಿದ್ದು, ಆತಂಕ ಪಡಬೇಕಾಗಿಲ್ಲ. ಆದರೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಆರೋಗ್ಯ ಇಲಾಖೆ ಹೇಳಿದೆ. ಹಾಗಾದರೆ ಚೀನಾದಲ್ಲಿ ಕಾಣಿಸಿಕೊಂಡ ಆರೋಗ್ಯ ಸಮಸ್ಯೆ ಇಲ್ಲಿಗೂ ಹರಡುತ್ತಾ? ಅದರಲ್ಲೂ ಮಕ್ಕಳ ವಿಚಾರದಲ್ಲಿ ಏನೆಲ್ಲ ಮುನ್ನೆಚ್ಚರಿಕೆ ಕೈಗೊಳ್ಳಬೇಕು? ಮುಂತಾದ ಅನುಮಾನಗಳಿಗೆ ಶಿಶು ವೈದ್ಯರಾದ ಡಾ. ಸುಪ್ರಜಾ ಮಾಹಿತಿ ನೀಡಿದ್ದಾರೆ (Health Update). ಈ ಬಗ್ಗೆ ಹೆಚ್ಚಿನ ವಿವರಕ್ಕಾಗಿ ವಿಸ್ತಾರ ನ್ಯೂಸ್ ಈ ಕೆಳಗಿನ ವಿಡಿಯೊ ನೋಡಿ.
ಚೀನಾದ ವೈರಸ್ಗೂ ಇಲ್ಲಿನ ಆರೋಗ್ಯ ಸಮಸ್ಯೆಗೂ ಸಂಬಂಧ ಇಲ್ಲ ಎಂದಾದರೆ ಏನೆಲ್ಲ ಕ್ರಮ ಕೈಗೊಳ್ಳಬೇಕು? ಎನ್ನುವ ಪ್ರಶ್ನೆಗೆ ಡಾ. ಸುಪ್ರಜಾ, ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಇಂಥ ಆರೋಗ್ಯ ಸಮಸ್ಯೆಗಳನ್ನು ವಿಂಟರ್ ವೈರಸಿಸ್ ಎಂದು ಕರೆಯಲಾಗುತ್ತದೆ. ಅಂದರೆ ಇವೆಲ್ಲದರ ಲಕ್ಷಣ ಒಂದೇ ಆಗಿರುತ್ತದೆ. ಈ ಸಮಯದಲ್ಲಿ ಮಕ್ಕಳಿಗೆ ನೆಗಡಿ, ಕೆಮ್ಮು ಬಾಧಿಸುವುದು ಸಹಜ. ಆದರೆ ಅದು ಎದೆಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ.
ಲಕ್ಷಣಗಳೇನು?
ನೆಗಡಿ, ಕೆಮ್ಮು ಇರುವ ಮಕ್ಕಳು ಸಾಮಾನ್ಯವಾಗಿ ಓಡಾಡಿಕೊಂಡಿದ್ದರೆ ಸಮಸ್ಯೆ ಇಲ್ಲ. ಆದರೆ ಅವರು ನಿಶ್ಯಕ್ತಿಯಿಂದ ಡಲ್ ಆಗಲು ಆರಂಭಿಸಿದರೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಲ್ಲದೆ ಮಕ್ಕಳು ಫಾಸ್ಟ್ ಬ್ರೀಥಿಂಗ್ ಆರಂಭಿಸಿದ್ದರೆ ಆಗ ಅದರತ್ತ ಗಮನ ಹರಿಸಬೇಕು. ಮಕ್ಕಳ ಹೊಟ್ಟೆ ಮೇಲೆ-ಕೆಳಗೆ ಹೋಗುತ್ತಿದ್ದರೆ ಅದನ್ನು ಫಾಸ್ಟ್ ಬ್ರೀಥಿಂಗ್ ಎಂದು ಕರೆಯಲಾಗುತ್ತದೆ. 1-2 ವರ್ಷದ ಮಗುವಿನಲ್ಲಿ 1 ಸೆಕೆಂಡ್ನಲ್ಲಿ 1 ಬ್ರೆಥ್ ಆಗಿದ್ದರೆ ಅದು ಫಾಸ್ಟ್ ಬ್ರೀಥಿಂಗ್. ಸಾಮಾನ್ಯವಾಗಿ ಚಿಕ್ಕ ಮಕ್ಕಳಿಗೆ ಅಷ್ಟು ವೇಗವಾಗಿ ಉಸಿರು ತೆಗೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಇದನ್ನು ಫಾಸ್ಟ್ ಬ್ರೀಥಿಂಗ್ ಎಂದು ಪರಿಗಣಿಸಲಾಗುತ್ತದೆ. ಇನ್ನು ರಾತ್ರಿ ಸಮಯದಲ್ಲಿ ಕೆಮ್ಮು ಜಾಸ್ತಿಯಾಗಿ ಕಾಣಿಸಿಕೊಳ್ಳುವುದು ಕೂಡ ಎಚ್ಚರಿಕೆ ಕೈಗೊಳ್ಳಬೇಕಾದ ಲಕ್ಷಣ. ಮಕ್ಕಳಿಗೆ ನಿದ್ದೆ ಮಾಡಲೂ ಸಾಧ್ಯವಾಗದಷ್ಟು ಕೆಮ್ಮು ಬರುತ್ತಿದ್ದರೆ ಇದನ್ನು ನಿರ್ಲಕ್ಷಿಸುವುದು ಸರಿಯಲ್ಲ. ಕೆಮ್ಮಿ ಕೆಮ್ಮಿ ಮಗು ವಾಂತಿ ಮಾಡುತ್ತಿದ್ದರೆ ಕಫ ಜಾಸ್ತಿ ಇದೆ ಎಂದರ್ಥ. ಅಂತಹ ಸಂದರ್ಭದಲ್ಲಿ ಕೂಡಲೇ ವ್ಯದ್ಯರನ್ನು ಸಂಪರ್ಕಿಸಬೇಕು ಎಂದು ಡಾ.ಸುಪ್ರಜಾ ಹೇಳಿದ್ದಾರೆ.
ಮೂರು ದಿನಗಳವರೆಗೆ ಇರುವ ಜ್ವರವನ್ನು ಸಾಮಾನ್ಯ ಜ್ವರ ಎಂದು ಪರಿಗಣಿಸಲಾಗುತ್ತದೆ. ಅದಾದ ಬಳಿಕವೂ ಜ್ವರ ಮುಂದುವರಿದರೆ ಮತ್ತೆ ತಡ ಮಾಡುವುದು ಸರಿಯಲ್ಲ. ಮಗುವಿಗೆ ದ್ರವಾಹಾರ ಸೇವಿಸಲು ಆಗುತ್ತಿಲ್ಲ ಎನ್ನುವ ಸ್ಥಿಯೂ ಅಪಾಯದ ಲಕ್ಷಣ. ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಡಾ.ಸುಪ್ರಜಾ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಚೀನಾದಲ್ಲಿ ನಿಗೂಢ ನ್ಯುಮೋನಿಯಾ; ಆಸ್ಪತ್ರೆಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲು ರಾಜ್ಯಗಳಿಗೆ ಸೂಚನೆ
ಅಪಾಯದ ಸಾಧ್ಯತೆ ಕಡಿಮೆ
ಕೆಲವು ವಾರಗಳಲ್ಲಿ ಚೀನಾದಲ್ಲಿ ಉಸಿರಾಟದ ಕಾಯಿಲೆಗಳ ಹೆಚ್ಚಳ ವರದಿಯಾಗಿದೆ. ಮಕ್ಕಳಲ್ಲಿ ಉಸಿರಾಟದ ಕಾಯಿಲೆಗೆ ಕಾರಣಗಳು ಸಾಮಾನ್ಯವಾಗಿದ್ದು, ಯಾವುದೇ ಅಸಾಮಾನ್ಯ ರೋಗಕಾರಕ ಅಥವಾ ಯಾವುದೇ ಅನಿರೀಕ್ಷಿತ ವೈದ್ಯಕೀಯ ಸೂಚಕಗಳು ಕಂಡುಬಂದಿಲ್ಲ ಎಂದು ವರದಿಗಳು ತಿಳಿಸಿವೆ. ಉತ್ತರ ಚೀನಾದ ಮಕ್ಕಳಲ್ಲಿ ವರದಿಯಾಗಿರುವ ʻಎಚ್9ಎನ್2’(H9N2) ಪ್ರಕರಣಗಳು ಮತ್ತು ಉಸಿರಾಟದ ಕಾಯಿಲೆ ಹರಡುವಿಕೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೂಕ್ಷ್ಮವಾಗಿ ಗಮನಿಸುತ್ತಿದೆ. ಚೀನಾದಿಂದ ವರದಿಯಾದ ಹಕ್ಕಿಜ್ವರ ಪ್ರಕರಣ ಮತ್ತು ಉಸಿರಾಟದ ಕಾಯಿಲೆ ಪ್ರಕರಣಗಳಿಂದ ಭಾರತಕ್ಕೆ ಅಪಾಯದ ಸಾಧ್ಯತೆ ಕಡಿಮೆ. ಹೀಗಾಗಿ ಯಾರು ಆತಂಕ ಪಡಬೇಕಾಗಿಲ್ಲ ಎಂದು ಭಾರತ ಸರ್ಕಾರವು ಈಗಾಗಲೇ ತಿಳಿಸಿದೆ.