ಲಕ್ನೋ: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳ (Heart Attack) ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಕಡಿಮೆ ವಯಸ್ಸಿನವರೇ ಇದಕ್ಕೆ ಬಲಿಯಾಗುತ್ತಿದ್ದಾರೆ. ಇದೇ ರೀತಿಯ ಮತ್ತೊಂದು ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ಹಸನ್‌ಪುರ ಕತ್ವಾಲಿಯ ಹತೈಖೇಡಾದಲ್ಲಿ ಭಾನುವಾರ ಮೊಬೈಲ್ ನೋಡುತ್ತಿದ್ದ 5 ವರ್ಷದ ಬಾಲಕಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ.
ಕಾರ್ಟೂನ್ ನೋಡುತ್ತಿದ್ದ ವೇಳೆ ಘಟನೆ
ಬಾಲಕಿ ಮಲಗಿಕೊಂಡು ಮೊಬೈಲ್ ಫೋನ್‌ಲ್ಲಿ ಕಾರ್ಟೂನ್ ವೀಕ್ಷಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮೃತ ಬಾಲಕಿಯನ್ನು ಕಾಮಿನಿ ಎಂದು ಗುರುತಿಸಲಾಗಿದೆ. ಕಾಮಿನಿ ತನ್ನ ತಾಯಿಯ ಪಕ್ಕದಲ್ಲಿ ಮಲಗಿ ಮೊಬೈಲ್ ಫೋನ್‌ನಲ್ಲಿ ಕಾರ್ಟೂನ್ ವೀಕ್ಷಿಸುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಅವಳ ಕೈಯಿಂದ ಮೊಬೈಲ್ ಜಾರಿ ಬಿದ್ದಿತ್ತು. ಜತೆಗೆ ಆಕೆ ಪ್ರಜ್ಞೆ ಕಳೆದುಕೊಂಡಿದ್ದಳು ಎಂದು ಮನೆಯವರು ತಿಳಿಸಿದ್ದಾರೆ. ತಕ್ಷಣವೇ ಮಗುವನ್ನು ಪಕ್ಕದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ.
ʼʼಶವವನ್ನು ಮರಣೋತ್ತರ ಪರೀಕ್ಷೆಗೆ ಹಸ್ತಾಂತರಿಸಲು ಕುಟುಂಬ ಒಪ್ಪಿಗೆ ನೀಡಲಿಲ್ಲ. ಮಗು ಹೃದಯಾಘಾತದಿಂದ ಮೃತಪಟ್ಟಿದೆಯೇ ಅಥವಾ ಬೇರೆ ಯಾವುದಾದರೂ ಕಾಯಿಲೆಯಿಂದ ಅಸುನೀಗಿದೆಯೇ ಎನ್ನುವುದು ಪರೀಕ್ಷೆಯಿಂದಷ್ಟೇ ಸ್ಪಷ್ಟವಾಗುತ್ತದೆ. ಆದರೆ ಕುಟುಂಬ ಸದಸ್ಯರು ಇದಕ್ಕೆ ಅನುಮತಿ ನೀಡಲಿಲ್ಲʼʼ ಎಂದು ಮುಖ್ಯ ವೈದ್ಯಾಧಿಕಾರಿ ಸತ್ಯಪಾಲ್ ಸಿಂಗ್ ತಿಳಿಸಿದ್ದಾರೆ.
ಹಿಂದೆಯೂ ನಡೆದಿತ್ತು
ಈ ಪ್ರದೇಶದಲ್ಲಿ ಹಿಂದೆಯೂ ಸಣ್ಣ ವಯಸ್ಸಿನವರ ಹೃದಯಾಘಾತ ಪ್ರಕರಣ ವರದಿಯಾಗಿದೆ. ಬಿಜ್ನೋರ್ ಮತ್ತು ಅಮ್ರೋಹಾ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಸುಮಾರು 12ರಷ್ಟು ಮಕ್ಕಳು ಮತ್ತು ಯುವ ಜನತೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕಳೆದ ವರ್ಷ ಡಿಸೆಂಬರ್ 31ರಂದು ಅಮ್ರೋಹಾ ಜಿಲ್ಲೆಯ ಹಸನ್‌ಪುರದಲ್ಲಿ ಕ್ರಿಕೆಟ್ ಆಡುತ್ತಿದ್ದ 16ರ ಹರೆಯದ ಪ್ರಿನ್ಸ್ ಕುಮಾರ್ ಎನ್ನುವವರು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಅಲ್ಲದೆ ಡಿಸೆಂಬರ್ 9ರಂದು ಬಿಜ್ನೋರ್‌ನಲ್ಲಿ 12ರ ಹರೆಯದ ಬಾಲಕಿ ಕ್ಲಾಸ್ ರೂಮ್ ಒಳಗೆ ಅಸುನೀಗಿದ್ದಳು.
ಜನವರಿ 7ರಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಕ್ರಿಕೆಟ್ ಆಡುತ್ತಿರುವಂತೆಯೇ ಕುಸಿದು ಬಿದ್ದು ಎಂಜಿನಿಯರ್ ಮೃತಪಟ್ಟಿದ್ದು, ಆ ಘಟನೆಯ ವಿಡಿಯೊ ವೈರಲ್ ಆಗಿತ್ತು. ವಿಕಾಸ್ ನೇಗಿ ಎನ್ನುವ ಎಂಜಿನಿಯರ್ ಕ್ರಿಕೆಟ್ ಪಿಚ್‌ನಲ್ಲಿಯೇ ಮೃತಪಟ್ಟವರು. ಅವರಿಗೆ 36 ವರ್ಷ ವಯಸ್ಸಾಗಿತ್ತು. ಇನ್ನಿಂಗ್ಸ್‌ನ 14ನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ನೇಗಿ ತಮ್ಮ ಬ್ಯಾಟಿಂಗ್ ಪಾಲುದಾರ ಉಮೇಶ್ ಕುಮಾರ್ ಅವರನ್ನು ಭೇಟಿಯಾಗಲು ಪಿಚ್ ಮಧ್ಯ ಭಾಗಕ್ಕೆ ಬಂದಿದ್ದರು. ಆಗ ಇದ್ದಕ್ಕಿದ್ದಂತೆ ಅಲ್ಲಿಯೇ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆಯನ್ನೂ ಮಾಡಲಾಯಿತು. ಆದರೆ ಅವರು ಅಷ್ಟರಲ್ಲಿ ಅಸುನೀಗಿದ್ದರು.
ಇದನ್ನೂ ಓದಿ: Heart Attack : ಜೀವ ಕ್ಷಣಿಕ ಕಣೋ! ಮೊಬೈಲ್‌ನಲ್ಲಿ ಮಾತನಾಡುತ್ತಲೇ ಹಾರಿ ಹೋಯ್ತು ಯುವಕನ ಪ್ರಾಣ ಪಕ್ಷಿ
ಈ ಕುರಿತು ಹಿರಿಯ ವೈದ್ಯ ರಾಹುಲ್ ಬಿಷ್ಣೋಯ್ ಮಾತನಾಡಿ “ಶೀತ ಹವಾಮಾನದ ಸಂದರ್ಭದಲ್ಲಿ ಹೃದಯಾಘಾತ ಎನ್ನುವುದು ಸಾಮಾನ್ಯ. ಈ ಸಂದರ್ಭದಲ್ಲಿ ಆಮ್ಲಜನಕದ ಮಟ್ಟ ಮತ್ತು ರಕ್ತದೊತ್ತಡವು ಕಡಿಮೆಯಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ಚಳಿಗಾಲದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರಬೇಕುʼʼ ಎಂದು ಸೂಚಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ