Site icon Vistara News

Medicine Price: ಗುಡ್‌ ನ್ಯೂಸ್;‌ ಶುಗರ್‌, ಹೃದ್ರೋಗ ಸೇರಿ 41 ಔಷಧಗಳ ಬೆಲೆ ಇಳಿಸಿದ ಮೋದಿ ಸರ್ಕಾರ

Medicine Price

Heart disease, diabetes drugs to cost less as govt cuts essential medicine prices

ನವದೆಹಲಿ: ದೇಶದಲ್ಲಿ ಅಗತ್ಯ ಔಷಧಗಳ ಬೆಲೆ ಏರಿಕೆ ಕುರಿತು ವದಂತಿಗಳು ಹರಡಿದ ಬೆನ್ನಲ್ಲೇ ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್‌ಗಳ ಬೆಲೆಯನ್ನು ಕೇಂದ್ರ ಸರ್ಕಾರ (Central Government) ಇಳಿಸಿದೆ. ಔಷಧಗಳ ಬೆಲೆ ಇಳಿಕೆ (Medicine Price) ಮಾಡಿ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (NPPA) ಆದೇಶ ಹೊರಡಿಸಿದೆ. ಇದರಿಂದ ದೇಶಾದ್ಯಂತ ಕೋಟ್ಯಂತರ ಜನರು ಕಡಿಮೆ ಬೆಲೆಗೆ ಔಷಧಗಳನ್ನು ಖರೀದಿಸಬಹುದಾಗಿದೆ.

ಯಾವ ಕಾಯಿಲೆಗಳ ಔಷಧ ಬೆಲೆ ಇಳಿಕೆ?

ಮಧುಮೇಹ, ಹೃದ್ರೋಗ, ಯಕೃತ್ತಿನ ಸಮಸ್ಯೆ, ಆ್ಯಂಟಿಬಯೋಟಿಕ್ಸ್‌, ಮಲ್ಟಿ ವಿಟಮಿನ್‌ ಸೇರಿ ಹಲವು ಔಷಧಗಳ ಬೆಲೆಯನ್ನು ಎನ್‌ಪಿಪಿಎ ಇಳಿಕೆ ಮಾಡಿದೆ. ಭಾರತದಲ್ಲಿ 10 ಕೋಟಿಗೂ ಅಧಿಕ ಮಂದಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜಗತ್ತಿನಲ್ಲೇ ಅತಿ ಹೆಚ್ಚು ಮಧುಮೇಹಿಗಳು ಇರುವ ದೇಶಗಳಲ್ಲಿ ಭಾರತವೂ ಸೇರಿದೆ. ಹಾಗಾಗಿ, ಸಕ್ಕರೆ ಕಾಯಿಲೆಗೆ ಬಳಸುವ ಮಾತ್ರೆಗಳು ಹಾಗೂ ಇನ್ಸುಲಿನ್‌ಗಳ ಬೆಲೆಯನ್ನು ಇಳಿಕೆ ಮಾಡಿರುವುದು ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ.

“ಸಾರ್ವಜನಿಕರಿಗೆ ಅನುಕೂಲವಾಗುವ ಔಷಧಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಬೆಲೆ ಇಳಿಕೆಯು ಒಂದು ನಿಯಮಿತ ಪ್ರಕ್ರಿಯೆಯಾಗಿದ್ದು, ಪ್ರಾಧಿಕಾರವು ಅದನ್ನು ಅನುಸರಿಸಿದೆ” ಎಂದು ಎನ್‌ಪಿಪಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ರಕ್ತದ ಗ್ಲುಕೋಸ್‌ ಕಡಿಮೆಯಾದಾಗ ಬಳಿಸುವ Dapagliflozin Metformin Hydrochlorideಗೆ ಮೊದಲು 30 ರೂ. ಇತ್ತು. ಈಗ ಅದಕ್ಕೆ 16 ರೂ. ನಿಗದಿಪಡಿಸಲಾಗಿದೆ. ಅಸ್ತಮಾ ಹಾಗೂ ಶ್ವಾಸಕೋಶದ ಸಮಸ್ಯೆ ಇದ್ದವರು ತೆಗೆದುಕೊಳ್ಳವ ಬ್ಯೂಡ್‌ಸೊನೈಡ್‌ ಹಾಗೂ ಫಾರ್ಮೊಟೆರೋಲ್‌ನ ಒಂದು ಡೋಸ್‌ ಬೆಲೆಯನ್ನು 6.62 ರೂ.ಗೆ ಇಳಿಕೆ ಮಾಡಲಾಗಿದೆ.

ಕೆಲ ತಿಂಗಳ ಹಿಂದಷ್ಟೇ, ಔಷಧಗಳ ಬೆಲೆಯೇರಿಕೆ ಕುರಿತು ವದಂತಿಗಳು ಹರಡಿದ್ದವು. ಆದರೆ, ಕೇಂದ್ರ ಸರ್ಕಾರವು ಇದನ್ನು ಅಲ್ಲಗಳೆದಿತ್ತು. “ಏಪ್ರಿಲ್‌ 1ರಿಂದ 500ಕ್ಕೂ ಅಧಿಕ ಔಷಧಗಳ ಬೆಲೆಯಲ್ಲಿ ಶೇ.12ರಷ್ಟು ಬೆಲೆ ಏರಿಕೆಯಾಗಿದೆ ಎಂಬ ವದಂತಿಗಳು, ವರದಿಗಳು ಸತ್ಯಕ್ಕೆ ದೂರವಾಗಿವೆ. ಜನರ ಹಾದಿ ತಪ್ಪಿಸಲು ಇಂತಹ ವರದಿಗಳನ್ನು ಪಸರಿಸಲಾಗಿದೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು ಸಗಟು ಬೆಲೆ ಸೂಚ್ಯಂಕದ ಆಧಾರದ ಬೆಲೆ ಏರಿಕೆ ಮಾಡುತ್ತದೆ. ಆದರೆ, 782 ಔಷಧಗಳ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಇನ್ನು ಸುಮಾರು 54 ಔಷಧಗಳ ಬೆಲೆಯು ಒಂದು ಪೈಸೆ ಮಾತ್ರ ಏರಿಕೆಯಾಗಿದೆ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿತ್ತು. ಇದರ ಬೆನ್ನಲ್ಲೇ, ಅಗತ್ಯ ಔಷಧಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.

ಇದನ್ನೂ ಓದಿ: Jan Aushadhi: ಪ್ರಯಾಣಿಕರಿಗೆ ಗುಡ್‌ ನ್ಯೂಸ್; ರೈಲು ನಿಲ್ದಾಣಗಳಲ್ಲೂ ಸಿಗಲಿವೆ ಕಡಿಮೆ ಬೆಲೆಗೆ ಔಷಧ!

Exit mobile version