ಹೊಸದಿಲ್ಲಿ: ಕಾನ್ಪುರ ಐಐಟಿ (IIT Kanpur) ಪ್ರೊಫೆಸರ್ ಒಬ್ಬರು ವೇದಿಕೆ ಮೇಲೆ ಭಾಷಣ ಮಾಡುತ್ತಿರುವಾಗಲೇ ಕುಸಿದು ಬಿದ್ದು (Heart Failure) ಮೃತಪಟ್ಟಿದ್ದಾರೆ. ಐಐಟಿಯ ವಿದ್ಯಾರ್ಥಿ ವ್ಯವಹಾರಗಳ ಡೀನ್ ಆಗಿರುವ ಸಮೀರ್ ಖಾಂಡೇಕರ್ ಅವರು ಸಾಯುವ ಹೊತ್ತಿನಲ್ಲಿ ʼಉತ್ತಮ ಆರೋಗ್ಯʼದ ಕುರಿತು ಉಪನ್ಯಾಸ ನೀಡುತ್ತಿದ್ದರು.
ಹಳೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಆರೋಗ್ಯ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಮಾತನಾಡುತ್ತಿದ್ದರು. “…ವಿಪರೀತವಾಗಿ ಬೆವರಲು ಪ್ರಾರಂಭಿಸುವ ಮುನ್ನ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು..” ಎಂದು ಹೇಳುತ್ತಿದ್ದಂತೆ ಪ್ರೊಫೆಸರ್ ವೇದಿಕೆಯ ಮೇಲೆಯೇ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ತಿಳಿಸಿದರು.
ಸುಮಾರು ಐದು ವರ್ಷಗಳ ಹಿಂದೆ ಖಾಂಡೇಕರ್‌ಗೆ ಅಧಿಕ ಕೊಲೆಸ್ಟ್ರಾಲ್ ಮಟ್ಟ ಇರುವುದು ಪತ್ತೆಯಾಗಿತ್ತು. ಅವರು ವಿದ್ಯಾರ್ಥಿ ವ್ಯವಹಾರಗಳ ಡೀನ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದರು.
ಮಾಜಿ ಐಐಟಿ ಕಾನ್ಪುರ ನಿರ್ದೇಶಕ ಅಭಯ್ ಕರಂಡಿಕರ್ ಅವರು ಮಿತ್ರನ ಹಠಾತ್ ಸಾವಿನ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಖಾಂಡೇಕರ್ ಅವರನ್ನು “ಅತ್ಯುತ್ತಮ ಶಿಕ್ಷಕ ಮತ್ತು ಸಂಶೋಧಕ” ಎಂದು ಬಣ್ಣಿಸಿದ್ದಾರೆ. “ಇದು ನಂಬಲಸಾಧ್ಯ! ನನ್ನ ಸ್ನೇಹಿತ ಪ್ರೊ. ಸಮೀರ್ ಖಾಂಡೇಕರ್ ಅವರ ಹಠಾತ್ ಮತ್ತು ಅತ್ಯಂತ ಅಕಾಲಿಕ ಮರಣದ ಸುದ್ದಿಯು ನಮಗೆ ಆಳವಾದ ಆಘಾತ ಮತ್ತು ದುಃಖವನ್ನುಂಟುಮಾಡಿದೆ. ಪ್ರೀತಿಯ ಸಹೋದ್ಯೋಗಿ ಯಾವಾಗಲೂ ಶಕ್ತಿ ಮತ್ತು ಉತ್ಸಾಹದಿಂದ ತುಂಬಿದ್ದವರು. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬದೊಂದಿಗೆ ನಮ್ಮ ಕಾಳಜಿ ಇದೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.
ಮೃತದೇಹವನ್ನು ಐಐಟಿ-ಕಾನ್ಪುರದ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದ್ದು, ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಅವರ ಏಕೈಕ ಪುತ್ರ ಪ್ರವಾಹ್ ಖಾಂಡೇಕರ್ ಆಗಮಿಸಿದ ನಂತರವೇ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕರಂಡಿಕರ್ ತಿಳಿಸಿದ್ದಾರೆ.
ಇದನ್ನೂ ಓದಿ: Air India : ಏರ್ ಇಂಡಿಯಾ ತೆಕ್ಕೆ ಸೇರಿತು ಭಾರತದ ಮೊದಲ ವೈಡ್ ಬಾಡಿ ವಿಮಾನ