ಬೆಂಗಳೂರು: ಇ- ಕಾಮರ್ಸ್ ಮಳಿಗೆ ಪೆಪ್ಪರ್‌ಫ್ರೈನ (pepperfry) ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ (Ambareesh Murty) ಅವರು ಹೃದಯಾಘಾತದಿಂದ (heart failure) ಲೇಹ್‌ನಲ್ಲಿ ನಿಧನರಾಗಿದ್ದಾರೆ.
ಈ ವಿಚಾರವನ್ನು ಸಹ-ಸಂಸ್ಥಾಪಕ ಆಶಿಶ್ ಶಾ ಮಂಗಳವಾರ ತಿಳಿಸಿದ್ದಾರೆ. “ನನ್ನ ಸ್ನೇಹಿತ, ಮಾರ್ಗದರ್ಶಕ, ಸಹೋದರ, ಆತ್ಮೀಯ ಗೆಳೆಯ ಅಂಬರೀಶ್ ಮೂರ್ತಿ ಇನ್ನಿಲ್ಲ ಎಂದು ತಿಳಿಸಲು ತುಂಬಾ ದುಃಖವಾಗುತ್ತಿದೆ. ನಿನ್ನೆ ರಾತ್ರಿ ಲೇಹ್‌ನಲ್ಲಿ ಹೃದಯಾಘಾತದಿಂದ ಅವರನ್ನು ಕಳೆದುಕೊಂಡೆ. ಅವರ ಕುಟುಂಬ ಮತ್ತು ನಿಕಟವರ್ತಿಗಳಿಗೆ ಇದನ್ನು ಸಹಿಸಲು ಶಕ್ತಿ ದೊರೆಯುವಂತೆ ಪ್ರಾರ್ಥಿಸಿ” ಎಂದು ಆಶಿಶ್ ಶಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪೆಪ್ಪರ್‌ಫ್ರೈ, ಪೀಠೋಪಕರಣಗಳು ಮತ್ತು ಗೃಹಾಲಂಕಾರ ಸಾಧನಗಳ ಇ- ಕಾಮರ್ಸ್ (E-commerce) ಮಳಿಗೆ. 2012ರಲ್ಲಿ, ಅಂಬರೀಶ್ ಮೂರ್ತಿ ಮತ್ತು ಆಶಿಶ್ ಷಾ ಇಬ್ಬರು ಸೇರಿ ಪೆಪ್ಪರ್‌ಫ್ರೈ ಅನ್ನು ಸ್ಥಾಪಿಸಿದ್ದರು. ಕಳೆದ ಒಂದು ದಶಕದಲ್ಲಿ, ಪೆಪ್ಪರ್‌ಫ್ರೈ ಆನ್‌ಲೈನ್ ವರ್ಚುವಲ್ ಕ್ಯಾಟಲಾಗ್, ಆಂತರಿಕ ಪೂರೈಕೆ ಸರಪಳಿ ಮತ್ತು 100ಕ್ಕೂ ಹೆಚ್ಚು ಭಾರತೀಯ ನಗರಗಳಲ್ಲಿ ವ್ಯಾಪಕವಾಗಿ ಹರಡಿದೆ.
ದೆಹಲಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (B.E.) ಮತ್ತು ಕಲ್ಕತ್ತಾದ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಪದವಿ ಪಡೆದಿದ್ದರು ಅಂಬರೀಶ್. ತಮ್ಮ ವೃತ್ತಿಜೀವನವನ್ನು ಕ್ಯಾಡ್‌ಬರಿಯ ಮಾರಾಟ ಮತ್ತು ಮಾರ್ಕೆಟಿಂಗ್ ವಿಭಾಗದಿಂದ ಆರಂಭಿಸಿದ್ದರು.
ನಂತರ ಪ್ರುಡೆನ್ಶಿಯಲ್‌ನೊಂದಿಗೆ ಮಾರ್ಕೆಟಿಂಗ್ ಮತ್ತು ಗ್ರಾಹಕ ಸೇವೆಯ VP ಆಗಿ ಕೆಲಸ ಮಾಡಿದರು. ನಂತರ ಇಬೇ ಇಂಡಿಯಾದ ಫಿಲಿಪೈನ್ಸ್ ಮತ್ತು ಮಲೇಷ್ಯಾದ ಕಂಟ್ರಿ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದರು. ಅವರು ಲೆವಿ ಸ್ಟ್ರಾಸ್ ಇಂಡಿಯಾದ ಬ್ರ್ಯಾಂಡ್ ನಾಯಕರಾಗಿ ಉತ್ಪನ್ನ ಅಭಿವೃದ್ಧಿ, ಮಾರ್ಕೆಟಿಂಗ್ ತಂತ್ರಗಳ ಹೊಣೆ ಹೊತ್ತಿದ್ದರು. ಬ್ರಿಟಾನಿಯಾ ಇಂಡಸ್ಟ್ರೀಸ್‌ನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಮಹತ್ವದ ಹೊಣೆ ನಿರ್ವಹಿಸಿದ್ದರು.
ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾದ (IAMAI) ಉಪಾಧ್ಯಕ್ಷ ಸ್ಥಾನವನ್ನು ಸಹ ನಿರ್ವಹಿಸಿದ ಅವರು 2012ರಲ್ಲಿ ಪೆಪ್ಪರ್‌ಫ್ರೈ ಸ್ಥಾಪಿಸಿದ ಬಳಿಕ ಅದನ್ನು ಯಶಸ್ವೀ ಉದ್ಯಮವಾಗಿ ಮಾರುಕಟ್ಟೆಯಲ್ಲಿ ಸ್ಥಾಪಿಸಿದ್ದಾರೆ.