ನವದೆಹಲಿ: ದಿನದಿಂದ ದಿನಕ್ಕೆ ವಾತಾವರಣದ ಬಿಸಿ ಏರಿಕೆಯಾಗುತ್ತಿದೆ. ಬಿಸಿಲಿನ ಬೇಗೆಗೆ ಜನ ಹೈರಾಣಾಗಿದ್ದಾರೆ. ದೇಶದ ಹೆಚ್ಚಿನ ಭಾಗಗಳು ಉಷ್ಣಗಾಳಿ (Heat Wave)ಯ ಹೊಡೆತಕ್ಕೆ ಸಿಲುಕಿ ತತ್ತರಿಸಿವೆ. ಭಾರತದಲ್ಲಿನ ಈ ತಾಪಮಾನವು ಏಪ್ರಿಲ್‌ನಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಕೇಂದ್ರ ಮತ್ತು ಉತ್ತರ ಭಾರತದ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಉಷ್ಣ ಅಲೆ ಹೆಚ್ಚಿರುತ್ತದೆ. ಆದರೆ ಅದಕ್ಕೆ ವಿರುದ್ಧವಾಗಿ ಈ ಬಾರಿ ದಕ್ಷಿಣ ಮತ್ತು ನೈಋತ್ಯ ಕರಾವಳಿಯಲ್ಲೂ ಬಿಸಿಲಿನ ಧಗೆ ಹೆಚ್ಚಾಗಿದೆ. ಕರ್ನಾಟಕ, ಆಂಧ್ರಪ್ರದೇಶ, ಒಡಿಶಾ, ತಮಿಳುನಾಡು, ಕೇರಳ, ಜಾರ್ಖಂಡ್, ಬಿಹಾರ್, ಸಿಕ್ಕಿಂ, ಪಶ್ಚಿಮ ಬಂಗಾಳದಲ್ಲಿ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ.
1901ರ ಬಳಿಕ ರಾತ್ರಿ ತಾಪಮಾನದ ದೃಷ್ಟಿಯಿಂದ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಇದು ಅತ್ಯಂತ ಬೆಚ್ಚಗಿನ ಏಪ್ರಿಲ್ ಎನಿಸಿಕೊಂಡಿದೆ. ಜತೆಗೆ ಮೂರನೇ ಅತಿ ಹೆಚ್ಚಿನ ಸರಾಸರಿ ತಾಪಮಾನವಾಗಿದೆ. ಹವಾಮಾನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಗರಿಷ್ಠ, ಕನಿಷ್ಠ ಮತ್ತು ಸರಾಸರಿ ತಾಪಮಾನದ ದೃಷ್ಟಿಯಿಂದ ಇದು ದೇಶದ ಎರಡನೇ ಅತಿ ಹೆಚ್ಚು ಬೆಚ್ಚಗಿನ ಏಪ್ರಿಲ್ ಆಗಿದೆ.
ಕಾರಣವೇನು?
ʼʼಕೆಲವು ರಾಜ್ಯಗಳಲ್ಲಿ ಕಂಡು ಬರುವ ಇಂತಹ ಅಸಾಮಾನ್ಯ ಹೆಚ್ಚಿನ ತಾಪಮಾನಕ್ಕೆ ಪ್ರಮುಖ ಕಾರಣವೆಂದರೆ ಎಲ್ ನಿನೊ ಮತ್ತು ಹವಾಮಾನ ಬದಲಾವಣೆ” ಎಂದು ಹವಾಮಾನ ಕಚೇರಿಯ ಹವಾಮಾನ ಮೇಲ್ವಿಚಾರಣೆಯ ಮುಖ್ಯಸ್ಥ ಒ.ಪಿ.ಶ್ರೀಜಿತ್ ಹೇಳಿದ್ದಾರೆ. “ದುರದೃಷ್ಟವಶಾತ್, ಶಾಖದಿಂದ ಸಂಭವಿಸಿದ ಸಾವುಗಳ ಬಗ್ಗೆ ನಮ್ಮಲ್ಲಿ ಇನ್ನೂ ಯಾವುದೇ ಅಂಕಿ-ಅಂಶಗಳಿಲ್ಲ. ಅತಿಯಾದ ಉಷ್ಣತೆಯಿಂದ ವರದಿಯಾಗುವ ಸಾವುಗಳನ್ನು ಮುಖ್ಯವಾಗಿ ದಾಖಲಿಸಲಾಗುವುದಿಲ್ಲ” ಎಂದು ಅವರು ತಿಳಿಸಿದ್ದಾರೆ. ಇದು ದೇಶದ ಒಟ್ಟಾರೆ ಒಂಬತ್ತನೇ ಅತಿ ಹೆಚ್ಚಿನ ತಾಪಮಾನವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
1901ರ ನಂತರ ಭಾರತದಲ್ಲಿ ಅತ್ಯಂತ ಬೆಚ್ಚಗಿನ ಏಪ್ರಿಲ್ 2016ರಲ್ಲಿ ದಾಖಲಾಗಿತ್ತು. ಅದು ಎಲ್ ನಿನೋ ವರ್ಷವಾಗಿತ್ತು. ಎಲ್ ನಿನೊ ಎನ್ನುವುದು ಉಷ್ಣವಲಯದ ಪೆಸಿಫಿಕ್ ಮಹಾಸಾಗರದಲ್ಲಿನ ಹವಾಮಾನ ವೈಪರೀತ್ಯವಾಗಿದ್ದು, ಇದು ಭಾರತದಲ್ಲಿ ದುರ್ಬಲ ಮಾನ್ಸೂನ್ ಮತ್ತು ಶುಷ್ಕ ಹವಾಮಾನಕ್ಕೆ ಕಾರಣವಾಗುತ್ತದೆ.
ಮಂಗಳವಾರ (ಏಪ್ರಿಲ್ 30) ಪಶ್ಚಿಮ ಬಂಗಾಳದ ಬಹುತೇಕ ಎಲ್ಲ ಕೇಂದ್ರಗಳಲ್ಲಿ ತೀವ್ರ ಶಾಖದ ಅಲೆಗಳು ದಾಖಲಾಗಿವೆ. ಪನಗರ್‌ನಲ್ಲಿ 45.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 10 ಡಿಗ್ರಿ ಹೆಚ್ಚಾಗಿದೆ ಮತ್ತು ಕಲೈಕುಂಡದಲ್ಲಿ 47.2 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಜಾರ್ಖಂಡ್‌ನ ಪೂರ್ವ ಸಿಂಗ್ಭುಮ್ ಜಿಲ್ಲೆಯ ಬಹರಗೋರಾದಲ್ಲಿ ಗರಿಷ್ಠ ತಾಪಮಾನವು 47.1 ಡಿಗ್ರಿಗಳಿಗೆ ಏರಿದೆ. ಇದು ಸಾಮಾನ್ಯಕ್ಕಿಂತ 7.7 ಡಿಗ್ರಿ ಸೆಲ್ಸಿಯಸ್ ಹೆಚ್ಚು ಎನ್ನುವುದು ಗಮನಾರ್ಹ.
ಇದನ್ನೂ ಓದಿ: Karnataka Weather : ಮುಂದಿನ 4 ತಿಂಗಳು ವಾಡಿಕೆಗಿಂತ ಹೆಚ್ಚು ಮಳೆ; ನಾಳಿನ ಹವಾಮಾನ ಏನು?
ಇನ್ನು ದಕ್ಷಿಣ ಭಾರತದ ಆಂಧ್ರಪ್ರದೇಶದ ಅನಂತಪುರದಲ್ಲಿ 44.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಆರೋಗ್ಯಾವರಂನಲ್ಲಿ 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಎರಡನೇ ಗರಿಷ್ಠ ತಾಪಮಾನವಾಗಿದೆ. ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ 44.2 ಡಿಗ್ರಿ ತಾಪಮಾನ ದಾಖಲಾಗಿದೆ. ಉದಕಮಂಡಲಂನಲ್ಲಿ 29.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.