Site icon Vistara News

Heavy Rain: ನೋಡ ನೋಡುತ್ತಿದ್ದಂತೆ ನದಿಯಲ್ಲಿ ಕೊಚ್ಚಿ ಹೋಯ್ತು ಬಹುಮಹಡಿ ಕಟ್ಟಡ; ಭೀಕರ ದೃಶ್ಯ ಇಲ್ಲಿದೆ

Heavy Rain

ಧರ್ಮಶಾಲಾ: ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಅಪಾರ ನಾಶ ನಷ್ಟ ಸಂಭವಿಸುತ್ತಿದೆ (Heavy Rain). ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ (Wayanad Landslide) ಊರಿಗೆ ಊರೇ ನಾಮವಶೇಷವಾಗಿದ್ದು, 250ಕ್ಕಿಂತ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಮಧ್ಯೆ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ (Cloudburst)ವಾಗಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಪಾರ್ವತಿ ನದಿ ಮೇರೆ ಮೀರಿ ಹರಿಯುತ್ತಿದ್ದು, ಬಹುಮಹಡಿ ಕಟ್ಟಡ ಕುಸಿದು ಬೀಳುತ್ತಿರುವ ಭಯಾನಕ ವಿಡಿಯೊ ವೈರಲ್‌ ಆಗಿದೆ (Viral Video).

ಕುಲ್ಲುವಿನಲ್ಲಿ ಗುರುವಾರ ನದಿ ತೀರದ ಬಳಿ ಇದ್ದ ಕಟ್ಟಡವು ಇದ್ದಕ್ಕಿದ್ದಂತೆ ನೆಲಕ್ಕೆ ಕುಸಿದು ಬಿದ್ದು ಕೆಲವೇ ಸೆಕೆಂಡುಗಳಲ್ಲಿ ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗುವ ದೃಶ್ಯ ಇದಾಗಿದೆ. ವಿಡಿಯೊದಲ್ಲಿ ಈ ಬಹುಮಹಡಿ ಕಟ್ಟಡ ಕ್ಷಣಾರ್ಧಲ್ಲಿಯೇ ನದಿಯಲ್ಲಿ ಕಣ್ಮರೆಯಾಗುತ್ತಿರುವುದು ಕಂಡು ಬಂದಿದೆ. ತಕ್ಷಣ ಅಲ್ಲಿದ್ದವರು ಓಡಿ ಜೀವ ಉಳಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರಿಂದ ನದಿಗಳ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ.

ಇಬ್ಬರ ಸಾವು

ಇದುವರೆಗೆ ಹಿಮಾಚಲ ಪ್ರದೇಶದಲ್ಲಿ ಮಳೆ ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಸುಮಾರು 30 ಮಂದಿ ನಾಪತ್ತೆಯಾಗಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯಲ್ಲಿ ಭಾರೀ ಅನಾಹುತ ಸಂಭವಿಸಿದೆ. ಶಿಮ್ಲಾದಿಂದ 100 ಕಿ.ಮೀ. ದೂರದಲ್ಲಿರುವ ರಾಂಪುರದ ಜಕ್ರಿಯಲ್ಲಿ ಮತ್ತು ಮಂಡಿಯಲ್ಲಿ ಮೇಘಸ್ಫೋಟ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಹಿಮಾಚಲ ಪ್ರದೇಶಕ್ಕೆ ಆರೆಂಜ್ ಅಲರ್ಟ್ ನೀಡಿದ್ದು, ಮುಂದಿನ 2-3 ದಿನಗಳವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ʼʼಶಿಮ್ಲಾ ಜಿಲ್ಲೆಯ ರಾಂಪುರದಲ್ಲಿ ನಡೆದ ಮೇಘಸ್ಫೋಟದ ನಂತರ ಇಬ್ಬರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಈ ಪ್ರದೇಶದ ರಸ್ತೆಗಳು ಮತ್ತು ಜಲವಿದ್ಯುತ್ ಯೋಜನೆಗೂ ಹಾನಿಯಾಗಿದೆ. ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮತ್ತು ರಾಜ್ಯ ಪೊಲೀಸ್‌ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಯನ್ನು ನಿಯೋಜಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರಂತರ ಮಳೆಯಿಂದಾಗಿ ಭೂಕುಸಿತದ ಸಾಧ್ಯತೆ ಹೆಚ್ಚಾದ ಕಾರಣ ರಾಜ್ಯದ ಅನೇಕ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಮಂಡಿಯಲ್ಲಿ 29, ಕುಲ್ಲುನಲ್ಲಿ 8, ಶಿಮ್ಲಾದಲ್ಲಿ 4 ಮತ್ತು ಕಾಂಗ್ರಾ ಮತ್ತು ಕಿನ್ನೌರ್‌ನಲ್ಲಿ ತಲಾ 2 ಸೇರಿದಂತೆ ಒಟ್ಟು 45 ರಸ್ತೆಗಳನ್ನು ಮುಚ್ಚಲಾಗಿದೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ಸುಮಾರು 215 ಟ್ರಾನ್ಸ್‌ಫಾರ್ಮರ್‌ಗಳು ಅಸ್ತವ್ಯಸ್ತಗೊಂಡಿರುವುದರಿಂದ ವಿದ್ಯುತ್ ಸರಬರಾಜಿನ ಮೇಲೂ ಪರಿಣಾಮ ಬೀರಿದೆ.

ಇದನ್ನೂ ಓದಿ: Wayanad Landslide: ವಯನಾಡು ದುರಂತದಲ್ಲಿ ಮೃತರ ಸಂಖ್ಯೆ 254ಕ್ಕೆ ಏರಿಕೆ; ಸೇನೆಯ ತಾತ್ಕಾಲಿಕ ಸೇತುವೆ ಬಹುತೇಕ ಪೂರ್ಣ

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯಕ್ಕೆ 425 ಕೋಟಿ ರೂ.ಗಳ ನಷ್ಟವಾಗಿದೆ. ಜುಲೈ ಮೊದಲ ವಾರದಲ್ಲಿ ಸುರಿದ ಭಾರಿ ಮಳೆಯಿಂದಾಗಿ 76 ರಸ್ತೆಗಳು ಬಂದ್ ಆಗಿದ್ದು, 34 ವಿದ್ಯುತ್ ಸರಬರಾಜು ಯೋಜನೆಗಳು ಮತ್ತು 69 ನೀರು ಸರಬರಾಜು ಯೋಜನೆಗಳು ಅಸ್ತವ್ಯಸ್ತಗೊಂಡಿದ್ದವು. ಇತ್ತ ದೆಹಲಿ ಮತ್ತು ಉತ್ತರಾಖಂಡದಲ್ಲಿ ಧಾರಾಕಾರ ಮಳೆ ಆರಂಭವಾಗಿದೆ.

Exit mobile version