ತಿರುವನಂತಪುರಂ: ಕೊಚ್ಚಿಯ ನೌಕಾ ವಾಯುನೆಲೆ ಐಎನ್ಎಸ್ ಗರುಡದ ರನ್ವೇಯಲ್ಲಿ ಚೇತಕ್ ಹೆಲಿಕಾಪ್ಟರ್ (Chetak helicopter) ಶನಿವಾರ ಅಪಘಾತಕ್ಕೀಡಾಗಿದೆ (Helicopter crashes) ಎಂದು ನೌಕಾಪಡೆಯ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ತರಬೇತಿ ಹಾರಾಟದಲ್ಲಿದ್ದ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಓರ್ವ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊಚ್ಚಿಯ ನೌಕಾಪಡೆಯ ಪ್ರಧಾನ ಕಚೇರಿಯ ಐಎನ್ಎಸ್ ಗರುಡ ರನ್ವೇ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ವರದಿ ಮಾಡಿವೆ. ಅಪಘಾತದಲ್ಲಿ ಹೆಲಿಕಾಪ್ಟರ್ ಪೈಲಟ್ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಆರಂಭಿಕ ಮಾಹಿತಿಗಳು ಸೂಚಿಸಿವೆ. ಅವರು ನೌಕಾ ಪ್ರಧಾನ ಕಚೇರಿಯ ಸಂಜೀವನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಮಧ್ಯಾಹ್ನ 2.30ರ ಸುಮಾರಿಗೆ ವಾಡಿಕೆಯ ತರಬೇತಿಯ ಸಮಯದಲ್ಲಿ ಚೇತಕ್ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ ಎನ್ನಲಾಗಿದೆ.
ಮೃತಪಟ್ಟ ಅಧಿಕಾರಿ?
ಅಪಘಾತದಲ್ಲಿ ನೌಕಾಪಡೆಯ ಅಧಿಕಾರಿಯೊಬ್ಬರು ಮರಣ ಹೊಂದಿದ್ದಾರೆ ಎಂದು ಕೆಲವು ಮಾಧ್ಯಮ ವರದಿಗಳು ತಿಳಿಸಿವೆ. ರನ್ವೇಯಲ್ಲಿದ್ದ ನೌಕಾ ಅಧಿಕಾರಿ ಹೆಲಿಕಾಪ್ಟರ್ ರೋಟರ್ ಬ್ಲೇಡ್ ಡಿಕ್ಕಿ ಹೊಡೆದ ನಂತರ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಭಾರತೀಯ ನೌಕಾಪಡೆಯಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ. ಹೆಲಿಕಾಪ್ಟರ್ ಒಳಗೆ ಇಬ್ಬರಿದ್ದರು. ಅವರಿಬ್ಬರೂ ಸುರಕ್ಷಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಐಎನ್ಎಸ್ ಗರುಡ ಐಎನ್ಎಸ್ ವೆಂಡುರುತಿಯ ಪಕ್ಕದಲ್ಲಿದೆ ಮತ್ತು ದಕ್ಷಿಣ ನೌಕಾ ಕಮಾಂಡ್ನ ಪ್ರಧಾನ ಕಚೇರಿಯಾಗಿದೆ. ಐಎನ್ಎಸ್ ಗರುಡ ಪ್ರಮುಖ ನೌಕಾ ವಾಯು ತರಬೇತಿ ಕೇಂದ್ರ ಮತ್ತು ಕಾರ್ಯಾಚರಣೆಯ ನೆಲೆಯಾಗಿ ಗುರುತಿಸಿಕೊಂಡಿದೆ.
ಇದನ್ನೂ ಓದಿ: ಪರೀಕ್ಷೆ ಪಾಸಾಗಲು ಹೋದ ಬಾಲಕಿಯ ಹೃದಯವೇ ‘ಫೇಲ್’; ಹೃದಯಾಘಾತದಿಂದ ಸಾವು
ಐಎನ್ಎಸ್ ಗರುಡ ಎರಡು ರನ್ವೇಗಳನ್ನು ಹೊಂದಿದ್ದು, ಬಹುತೇಕ ಎಲ್ಲಾ ಕಾರ್ಯಾಚರಣೆಯ ವಿಮಾನಗಳು ಇಳಿಯಲು ಮತ್ತು ಟೇಕ್ ಆಫ್ ಆಗಲು ಅನುವು ಮಾಡಿಕೊಡುತ್ತದೆ. ಐಎನ್ಎಸ್ ಗರುಡ ಭಾರತೀಯ ನೌಕಾಪಡೆಯ ಕಾರ್ಯತಂತ್ರದ ಆಪರೇಟಿಂಗ್ ಸ್ಟೇಷನ್ ಆಗಿದ್ದು, ಹಲವು ತರಬೇತಿ ಶಾಲೆಗಳು, ಗುಪ್ತಚರ ಕೇಂದ್ರಗಳು, ನಿರ್ವಹಣೆ, ದುರಸ್ತಿ ಸೌಲಭ್ಯಗಳು ಮತ್ತು ಪ್ರಾಯೋಗಿಕ ಕೇಂದ್ರಗಳು ಇಲ್ಲಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ