ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜಾರ್ಖಂಡ್‌ನ (Jharkhand) ಮಾಜಿ ಸಿಎಂ, ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಮುಖಂಡ ಹೇಮಂತ್ ಸೋರೆನ್(Hemant Soren) ಅವರನ್ನು ಜಾರಿ ನಿರ್ದೇಶನಾಲಯವು(Enforcement directorate) ಬುಧವಾರ ರಾತ್ರಿ ಬಂಧಿಸಿದೆ. ಇದೀಗ ಹೇಮಂತ್ ಸೋರೆನ್ ತಮ್ಮ ಬಂಧನ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಸೋರೆನ್ ಅವರ ಮನವಿಯನ್ನು ನಾಳೆ ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ನಾಳೆ (ಫೆಬ್ರವರಿ 2) ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಸಿಂಘ್ವಿ ಸೋರೆನ್ ಪರವಾಗಿ ವಾದ ಮಂಡಿಸಲಿದ್ದಾರೆ. ಹಿರಿಯ ವಕೀಲ ಕಪಿಲ್ ಸಿಬಲ್ ಅವರು ತಮ್ಮ ಅರ್ಜಿಯಲ್ಲಿ, ಇಡಿ ಹೇಮಂತ್ ಸೊರೆನ್ ಅವರನ್ನು ಬಂಧಿಸಿರುವ ಬಗ್ಗೆ ತುರ್ತು ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಉಲ್ಲೇಖಿಸಿದ್ದರು. ಜಾರ್ಖಂಡ್ ಹೈಕೋರ್ಟ್‌ನಿಂದ ಸೋರೆನ್ ತಮ್ಮ ಅರ್ಜಿಯನ್ನು ಹಿಂತೆಗೆದುಕೊಳ್ಳಲಿದ್ದಾರೆ ಎಂದೂ ಸಿಬಲ್ ತಿಳಿಸಿದ್ದಾರೆ.
ಏನಿದು ಪ್ರಕರಣ?
ಭೂ ಹಗರಣದ ಆರೋಪದಲ್ಲಿ ಹೇಮಂತ್ ಸೋರೆನ್ ಅವರನ್ನು ಇಡಿ ಬಂಧಿಸಿದೆ. ಅಧಿಕೃತ ದಾಖಲೆಗಳ ಸುಳ್ಳು ಮಾಹಿತಿಯ ಮೂಲಕ ಗಳಿಸಿದ ಆದಾಯದ ಮೇಲೆ ತನಿಖೆ ನಡೆಸಲಾಗುತ್ತಿದೆ. ‘ನಕಲಿ ಮಾರಾಟಗಾರರು’, ʼನಕಲಿ ಖರೀದಿದಾರರುʼ ಮತ್ತು ʼನಕಲಿ ದಾಖಲೆʼಗಳನ್ನು ಬಳಸಿಕೊಂಡು ಕೋಟ್ಯಂತರ ಮೌಲ್ಯದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎನ್ನುವ ದೂರಿನ ಆಧಾರದಲ್ಲಿ ಸೋರೆನ್ ಅವರನ್ನು ಬಂಧಿಸಲಾಗಿದೆ.
ಇದಕ್ಕೂ ಮುನ್ನ ಜೆಎಂಎಂ ಹೇಮಂತ್ ಸೋರೆನ್ ಅವರ ವಿಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ʼʼಇಡಿ ತಮ್ಮ ದೆಹಲಿ ನಿವಾಸದ ಮೇಲೆ ದಾಳಿ ನಡೆಸುವ ಮೂಲಕ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸಿದೆʼʼ ಎಂದು ಆರೋಪಿಸಿದ್ದರು. ಬಂಧನಕ್ಕೆ ಮೊದಲು ರೆಕಾರ್ಡ್ ಮಾಡಿದ ಸಂದೇಶದಲ್ಲಿ, ಸೋರೆನ್ “ಅವರು (ಇಡಿ) ಇನ್ನೂ ಯಾವುದೇ ಪುರಾವೆಗಳನ್ನು ಕಂಡು ಹಿಡಿದಿಲ್ಲ. ನನ್ನ ದೆಹಲಿ ನಿವಾಸದ ಮೇಲೆ ದಾಳಿ ನಡೆಸುವ ಮೂಲಕ ಅವರು ನನ್ನ ಇಮೇಜ್ ಅನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಬಡವರು, ಆದಿವಾಸಿಗಳು, ದಲಿತರು ಮತ್ತು ಮುಗ್ಧರ ವಿರುದ್ಧ ದೌರ್ಜನ್ಯ ನಡೆಸುವವರ ವಿರುದ್ಧ ನಾವು ಈಗ ಹೊಸ ಹೋರಾಟವನ್ನು ನಡೆಸಬೇಕಾಗಿದೆ” ಎಂದು ಅವರು ಹೇಳಿದ್ದರು.
ಇದನ್ನೂ ಓದಿ: Jharkhand Politics: ಹೇಮಂತ್ ಸೋರೆನ್ ರಾಜೀನಾಮೆ, ಜಾರ್ಖಂಡ್ ನೂತನ ಸಿಎಂ ಚಂಪಯಿ ಸೋರೆನ್!
ನೂತನ ಸಿಎಂ ಚಂಪಯಿ ಸೋರೆನ್
ಈ ಮಧ್ಯೆ ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಚಂಪಯಿ ಸೋರೆನ್ ಅವರನ್ನು ಆಯ್ಕೆ ಮಾಡಲಾಗಿದೆ. ತಮಗೆ 47 ಶಾಸಕರ ಬೆಂಬಲ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. ʼʼಬಿಜೆಪಿ ತನ್ನ ಶಾಸಕರನ್ನು ಸೆಳೆಯುವ ಭೀತಿಯಿದೆ. ಹೀಗಾಗಿ ಎಲ್ಲರನ್ನು ಹೈದರಾಬಾದ್‌ಗೆ ಸ್ಥಳಾಂತರಿಸಲಾಗುವುದುʼʼ ಎಂದು ಜೆಎಂಎಂ ತಿಳಿಸಿದೆ. ಏತನ್ಮಧ್ಯೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. “ಜಾರ್ಖಂಡ್‌ನ ಜನಪ್ರಿಯ ಬುಡಕಟ್ಟು ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರನ್ನು ಕೇಂದ್ರದ ಸರ್ವಾಧಿಕಾರ ಧೋರಣೆಯ ಸರ್ಕಾರ ಹಿಂಸಿಸುತ್ತಿದೆʼʼ ಎಂದು ಹೇಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ