Site icon Vistara News

Hemant Soren: ಜಾರ್ಖಂಡ್‌ ಮಾಜಿ ಸಿಎಂ ಹೇಮಂತ್ ಸೋರೆನ್​​​ಗೆ ಒಂದು ದಿನದ ನ್ಯಾಯಾಂಗ ಬಂಧನ

soren

soren

ನವದೆಹಲಿ: ಭೂ ಹಗರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜಾರ್ಖಂಡ್‌ನ (Jharkhand) ಮಾಜಿ ಸಿಎಂ, ಜಾರ್ಖಂಡ್‌ ಮುಕ್ತಿ ಮೋರ್ಚಾ (JMM) ಮುಖಂಡ ಹೇಮಂತ್ ಸೋರೆನ್(Hemant Soren) ಅವರಿಗೆ ರಾಂಚಿಯ ಪಿಎಂಎಲ್‌ಎ ನ್ಯಾಯಾಲಯ ಒಂದು ದಿನದ ನ್ಯಾಯಾಂಗ ಬಂಧನವನ್ನು ವಿಧಿಸಿದೆ. ಹೇಮಂತ್ ಸೋರೆನ್ ಅವರನ್ನು 10 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಬೇಕು ಎಂದು ಜಾರಿ ನಿರ್ದೇಶನಾಲಯ (ಇಡಿ) ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಆದರೆ ಈ ಆದೇಶವನ್ನು ಕಾಯ್ದಿರಿಸಿ, ವಿಚಾರಣೆಯನ್ನು ಕೋರ್ಟ್‌ ನಾಳೆಗೆ ಮುಂದೂಡಿದೆ.

ʼʼಹೇಮಂತ್ ಸೋರೆನ್ ಅವರಿಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಡಿ ಹತ್ತು ದಿನಗಳ ಬಂಧನಕ್ಕೆ ಮನವಿ ಸಲ್ಲಿಸಿತ್ತು. ನಾಳೆ (ಶುಕ್ರವಾರ) ಹೆಚ್ಚಿನ ವಿಚಾರಣೆ ನಡೆಯಲಿದೆʼʼ ಎಂದು ವಕೀಲ ಮನೀಶ್‌ ಸಿಂಗ್‌ ಹೇಳಿದ್ದಾರೆ. ಬುಧವಾರ ರಾತ್ರಿ ಸೋರೆನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ರಾಂಚಿಯಲ್ಲಿನ ಭೂ ಸಂಬಂಧಿತ ಅಕ್ರಮಗಳಲ್ಲಿ ಸೋರೆನ್‌ ಅವರ ಪಾತ್ರ ಇರುವುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಇಡಿ ಹೇಳಿಕೊಂಡಿದೆ. ಅಲ್ಲಿ ದಲ್ಲಾಳಿಗಳು ಮತ್ತು ಉದ್ಯಮಿಗಳ ಜಾಲವು ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಕಲಿ ದಾಖಲೆಗಳನ್ನು ರಚಿಸುತ್ತಿದೆ ಎಂದು ಆರೋಪಿಸಿದೆ.

ವಿಡಿಯೊ ಮೂಲಕ ಆರೋಪ ನಿರಾಕರಿಸಿರುವ ಸೋರೆನ್‌

ಬಂಧನಕ್ಕೂ ಮೊದಲು ವಿಡಿಯೊ ಮಾಡಿದ್ದ ಸೋರೆನ್‌, ʼʼಇಡಿ ಸುಳ್ಳು ಪ್ರಕರಣದಲ್ಲಿ ನನ್ನನ್ನು ಸಿಲುಕಿಸುತ್ತಿದೆ. ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ. ಇಡಿ ಹೇಳಿರುವ ಭೂಮಿ ಇದುವರೆಗೆ ಮಾರಾಟವಾಗಿಲ್ಲ. ಅವರಿಗೆ ನನ್ನ ವಿರುದ್ಧ ಯಾವುದೇ ಪುರಾವೆ ಸಿಕ್ಕಿಲ್ಲ. ದೆಹಲಿಯಲ್ಲಿನ ನಿವಾಸದ ಮೇಲೆ ದಾಳಿ ನಡೆಸಿದಾಗಲೂ ಇಡಿಗೆ ಯಾವುದೇ ಸಾಕ್ಷಿ ಲಭಿಸಿಲ್ಲ. ಇವತ್ತು ಇಡೀ ದಿನ ನನ್ನನ್ನು ವಿಚಾರಣೆಗೆ ಒಳ ಪಡಿಸಿದ್ದಾರೆʼʼ ಎಂದು ಹೇಳಿದ್ದರು.

“ಅವರು ನನ್ನನ್ನು ಬಂಧಿಸಬಹುದು. ಆದರೆ ಇದರಿಂದ ನನ್ನನ್ನು ಬೆದರಿಸಲು ಸಾಧ್ಯವಿಲ್ಲ. ನಾನು ಶಿಬು ಸೋರೆನ್ ಅವರ ಮಗ. ಇದಕ್ಕೆಲ್ಲ ಜಗ್ಗುವುದಿಲ್ಲ. ಹೋರಾಟ ನನ್ನ ರಕ್ತದಲ್ಲಿದೆ. ನನಗೂ ಭೂಮಿ ಅವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲ. ನಕಲಿ ದಾಖಲೆಗಳ ಆಧಾರದ ಮೇಲೆ ನನ್ನನ್ನು ಸಿಲುಕಿಸಲಾಗಿದೆ ಎನ್ನುವುದನ್ನು ಸಾರಿ ಹೇಳುತ್ತೇನೆ. ಬಡವರು, ಆದಿವಾಸಿಗಳು, ದಲಿತರು ಮತ್ತು ಮುಗ್ಧರ ವಿರುದ್ಧ ದೌರ್ಜನ್ಯ ನಡೆಸುವವರ ವಿರುದ್ಧ ನಾವು ಈಗ ಹೊಸ ಹೋರಾಟವನ್ನು ನಡೆಸಬೇಕಾಗಿದೆʼʼ ಎಂದು ಅವರು ತಿಳಿಸಿದ್ದರು. ತಮ್ಮ ಬಂಧನ ವಿರುದ್ಧ ಸೋರೆನ್‌ ಸುಪ್ರೀಂ ಕೋರ್ಟ್‌ಗೂ ತೆರಳಿದ್ದಾರೆ. ನಾಳೆ ವಿಚಾರಣೆ ನಡೆಸಲು ನ್ಯಾಯಾಲಯ ಒಪ್ಪಿಕೊಂಡಿದೆ.

ಇದನ್ನೂ ಓದಿ: Hemant Soren: ಬಂಧನದ ವಿರುದ್ಧ ಸುಪ್ರೀಂ ಕೋರ್ಟ್‌ ಕದ ತಟ್ಟಿದ ಹೇಮಂತ್ ಸೋರೆನ್

ಈ ಮಧ್ಯೆ ಜಾರ್ಖಂಡ್‌ನ ನೂತನ ಮುಖ್ಯಮಂತ್ರಿಯಾಗಿ ಚಂಪಯಿ ಸೋರೆನ್ ಅವರನ್ನು ಆಯ್ಕೆ ಮಾಡಲಾಗಿದೆ. ತಮಗೆ 47 ಶಾಸಕರ ಬೆಂಬಲ ಇದೆ ಎಂದು ಅವರು ಹೇಳಿಕೊಂಡಿದ್ದಾರೆ. ಏತನ್ಮಧ್ಯೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. “ಜಾರ್ಖಂಡ್‌ನ ಜನಪ್ರಿಯ ಬುಡಕಟ್ಟು ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರನ್ನು ಕೇಂದ್ರದ ಸರ್ವಾಧಿಕಾರ ಧೋರಣೆಯ ಸರ್ಕಾರ ಹಿಂಸಿಸುತ್ತಿದೆʼʼ ಎಂದು ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version