ರಾಂಚಿ: ಇಡಿಯಿಂದ (Enforcement Directorate) ಬಂಧನವಾಗುವ ಭೀತಿಯಿಂದ ʼತಲೆ ಮರೆಸಿಕೊಂಡಿದ್ದಾರೆʼ ಎನ್ನಲಾದ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ (Jharkhand CM Hemant Soren) ಅವರ ಸ್ಥಾನದಲ್ಲಿ ಅವರ ಪತ್ನಿ ಕಲ್ಪನಾ ಸೊರೆನ್ (Kalpana Soren) ಅವರನ್ನು ಕೂರಿಸಲಾಗುತ್ತದೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಆಡಳಿತ ಪಕ್ಷ ಜೆಎಂಎಂ (Jharkhana Mukti Morcha – JMM) ಶಾಸಕರು ಮಂಗಳವಾರ ಯಾವುದೇ ವ್ಯಕ್ತಿಯ ಹೆಸರಿಲ್ಲದ ಬೆಂಬಲ ಪತ್ರಕ್ಕೆ ಸಹಿ ಹಾಕಿದ್ದಾರೆ.
ಹೇಮಂತ್ ಸೊರೆನ್ ಅವರ ದಿಲ್ಲಿಯ ಮನೆಯಲ್ಲಿ ಸೋಮವಾರ ಇಡಿ ಪರಿಶೀಲನೆ ನಡೆಸಿತ್ತು. ಇದಾದ ಬಳಿಕ ಸುಮಾರು 40 ಗಂಟೆಗಳ ಕಾಲದಿಂದ ಹೇಮಂತ್ ಸೊರೆನ್ ನಾಟಕೀಯವಾಗಿ ʼನಾಪತ್ತೆ’ಯಾಗಿದ್ದರು. ಹೇಮಂತ್ ಸೊರೆನ್ ಅವರು ಬಂಧನಕ್ಕೊಳಗಾದರೆ ತಮ್ಮ ಪತ್ನಿಯನ್ನು ಸಿಎಂ ಹುದ್ದೆಗೆ ಪ್ರತಿಷ್ಠಾಪಿಸಲು ಯೋಜಿಸಿದ್ದಾರೆ ಎಂದು ಬಿಜೆಪಿಯ ನಿಶಿಕಾಂತ್ ದುಬೆ ಅವರು ಹೇಳಿದ್ದಾರೆ. ಹೇಮಂತ್ ಸೊರೆನ್ ಇಂದು ಇಡಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ನೀಡಲಿದ್ದಾರೆ ಎನ್ನಲಾಗಿದೆ.
ಈ ಹಿಂದೆ, ಹೇಮಂತ್ ಸೊರೆನ್ ಅವರು ಕಲ್ಪನಾ ಅವರನ್ನು ಮುಖ್ಯಮಂತ್ರಿ ಮಾಡುವ ವದಂತಿಗಳನ್ನು ತಳ್ಳಿಹಾಕಿದ್ದರು. ಆದರೆ ಈಗ ಮತ್ತೆ ಕಲ್ಪನಾ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಊಹೆ ಮರುಕಳಿಸಿದೆ. ಈ ಕಲ್ಪನಾ ಸೊರೆನ್ ಯಾರು?
1) ಕಲ್ಪನಾ ಸೊರೆನ್ ಯಾವುದೇ ರಾಜಕೀಯ ಹಿನ್ನೆಲೆಯಿಂದ ಬಂದವರಲ್ಲ. ಅವರು ಮೂಲತಃ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯವರು.
2) ಫೆಬ್ರವರಿ 7, 2006ರಂದು ಕಲ್ಪನಾ ಅವರು ಹೇಮಂತ್ ಸೊರೆನ್ ಅವರನ್ನು ವಿವಾಹವಾದರು.
3) ಕಲ್ಪನಾ ಮತ್ತು ಹೇಮಂತ್ ಸೊರೆನ್‌ಗೆ ಇಬ್ಬರು ಮಕ್ಕಳಿದ್ದಾರೆ- ನಿಖಿಲ್ ಮತ್ತು ಅಂಶ್.
4) ಕಲ್ಪನಾಳ ತಂದೆ ಉದ್ಯಮಿ, ತಾಯಿ ಗೃಹಿಣಿ. ಕಲ್ಪನಾ ಅವರು ವ್ಯಾಪಾರ ಮತ್ತು ದಾನ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
5) ಕಲ್ಪನಾ ಸೊರೆನ್ ಅವರು ಶಾಲೆಯೊಂದನ್ನು ನಡೆಸುತ್ತಿದ್ದಾರೆ ಮತ್ತು ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
6) 1946ರಲ್ಲಿ ರಾಂಚಿಯಲ್ಲಿ ಜನಿಸಿದ ಕಲ್ಪನಾ ಎಂಜಿನಿಯರಿಂಗ್ ಮತ್ತು ಎಂಬಿಎ ಓದಿದ್ದಾರೆ.
7) ಕಲ್ಪನಾ ಸೋರೆನ್ ಎಂಎಲ್ಎ ಅಲ್ಲದ ಕಾರಣ, ಅವರು ಸಿಎಂ ಆಗಬೇಕಾದರೆ ಯಾರಾದರೊಬ್ಬ ಪ್ರಸ್ತುತ ಶಾಸಕರು ತಮ್ಮ ಸ್ಥಾನವನ್ನು ತೆರವು ಮಾಡುವ ಅಗತ್ಯವಿದೆ. ಬಿಜೆಪಿಯ ನಿಶಿಕಾಂತ್ ದುಬೆ ಪ್ರಕಾರ, ಕಲ್ಪನಾ ಸಿಎಂ ಆಗುವ ಪ್ರಸ್ತಾಪವನ್ನು ಹೇಮಂತ್ ಸಹೋದರ ಬಸಂತ್ ಸೊರೆನ್ ಮತ್ತು ಸೊಸೆ ಸೀತಾ ಸೊರೆನ್ ಒಪ್ಪಿಲ್ಲ.
8) ಆದರೆ ಹೇಮಂತ್ ಅವರ ಸಹೋದರ ಪಕ್ಷದೊಳಗಿನ ಯಾವುದೇ ಬಿರುಕುಗಳನ್ನು ಅಲ್ಲಗಳೆದಿದ್ದಾರೆ. ಜಾರ್ಖಂಡ್ ಮುಕ್ತಿ ಮೋರ್ಚಾ ಒಗ್ಗಟ್ಟಾಗಿದೆ ಎಂದಿದ್ದಾರೆ.
9) ಮಂಗಳವಾರ ನಡೆದ ಜೆಎಂಎಂ ಸಭೆಯಲ್ಲಿ ಕಲ್ಪನಾ ಸೊರೆನ್ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡುವ ಪ್ರಸ್ತಾವನೆ ತೇಲಿ ಬಂದಿದ್ದು, ಕನಿಷ್ಠ 35 ಶಾಸಕರು ಇದರ ಪರವಾಗಿ ಇದ್ದರು ಎಂದು ನಿಶಿಕಾಂತ್ ದುಬೆ ಹೇಳಿದ್ದಾರೆ. ಶಾಸಕರು ಯಾವುದೇ ಹೆಸರಿಲ್ಲದ ಬೆಂಬಲ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಗೊತ್ತಾಗಿದೆ.
10) ಮಂಗಳವಾರ ರಾಂಚಿಯಲ್ಲಿ ನಡೆದ ರಾಜ್ಯದ ಸಚಿವರು ಮತ್ತು ಪಕ್ಷದ ಶಾಸಕರ ಸಭೆಗಳಲ್ಲಿ ಕಲ್ಪನಾ ಸೊರೆನ್ ಉಪಸ್ಥಿತರಿದ್ದರು. ಹೇಮಂತ್ ಸೊರೆನ್ ದೆಹಲಿಯ ನಿವಾಸದಲ್ಲಿ ಇಡಿಗೆ ಪತ್ತೆಯಾಗದ ಹಿನ್ನೆಲೆಯಲ್ಲಿ ಪರಾರಿಯಾಗಿದ್ದಾರೆ ಎಂದು ಬಿಜೆಪಿ ಹೇಳಿತ್ತು. ಇದರ ನಡುವೆಯೇ ಹೇಮಂತ್ ಸೊರೆನ್ ದೆಹಲಿಯಿಂದ ರಾಂಚಿಗೆ ರಸ್ತೆ ಮಾರ್ಗವಾಗಿ ಬಂದು ಎರಡು ಸಭೆಗಳನ್ನು ನಡೆಸಿದ್ದಾರೆ. ಹೇಮಂತ್ ಇಂದು ಇಡಿ ಮುಂದೆ ಹೇಳಿಕೆ ದಾಖಲಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ರಾಜೀನಾಮೆ ಇಲ್ವೇ ಇಲ್ಲ; ವಿಶ್ವಾಸ ಮತ ಯಾಚಿಸಲು ಸಿದ್ಧರಾದ ಜಾರ್ಖಂಡ ಸಿಎಂ ಹೇಮಂತ್ ಸೊರೆನ್