Site icon Vistara News

Hemant Soren: ಹೇಮಂತ್‌ ಸೊರೆನ್‌ಗೆ ಮತ್ತೆ ಒಲಿದ ಸಿಎಂ ಪಟ್ಟ; ಜು.7ರಂದು ಪ್ರಮಾಣ ವಚನ- ರಾಜ್ಯಪಾಲರಿಂದ ಗ್ರೀನ್‌ ಸಿಗ್ನಲ್‌

ರಾಂಚಿ: ಅಕ್ರಮ ಹಣ ವರ್ಗಾವಣೆ (Money laundering Case), ಭೂ ವ್ಯವಹಾರ ಸೇರಿ ಹಲವು ಪ್ರಕರಣಗಳಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ ಮುಖ್ಯಸ್ಥ ಹೇಮಂತ್‌ ಸೊರೆನ್ (Hemant Soren) ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳಿಂದ ಬಂಧಿತರಾಗಿ, ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿರುವ ಬೆನ್ನಲ್ಲೇ ರಾಜ್ಯರ ರಾಜಕೀಯ ಮತ್ತೆ ಗರಿಗೆದರಿದೆ. ನಿನ್ನೆಯಷ್ಟೇ ಹಾಲಿ ಸಿಎಂ ಚಂಪೈ ಸೊರೆನ್‌ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಸರ್ಕಾರ ರಚಿಸುವಂತೆ ಜಾರ್ಖಂಡ್‌ ರಾಜ್ಯಪಾಲರು ಹೇಮಂತ್‌ ಸೊರೆನ್‌ಗೆ ಆಹ್ವಾನ ನೀಡಿದ್ದಾರೆ.

ಜಾರ್ಖಂಡ್‌ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್‌ ಗುರುವಾರ ಜೆಎಂಎಂ ನಾಯಕ ಹೇಮಂತ್‌ ಸೊರೆನ್‌ ಅವರನ್ನು ಸರ್ಕಾರ ರಚಿಸುವಂತೆ ಆಹ್ವಾನ ನೀಡಿದರು. ಈ ಆಹ್ವಾನವನ್ನು ಸ್ವೀಕರಿಸಿರುವ ಸೊರೆನ್‌ ಜು.7ರಂದು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕುರಿತು ಜೆಎಂಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ಮಾಹಿತಿ ನೀಡಿದ್ದು, ಜು.7ರಂದು ಸಿಎಂ ಹಾಗೂ ಎಲ್ಲಾ ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಿದ್ದಾರೆ.

ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಪ್ರಕರಣಗಳಲ್ಲಿ ಹೇಮಂತ್‌ ಸೊರೆನ್‌ ಅವರ ಬಂಧನವಾದ ಬಳಿಕ ಅವರ ಆಪ್ತ ಚಂಪೈ ಸೊರೆನ್‌ ಅವರು ಫೆಬ್ರವರಿ 2ರಂದು ಜಾರ್ಖಂಡ್‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಮತ್ತು ಲಾಲು ಪ್ರಸಾದ್‌ ಯಾದವ್ ಅವರ ರಾಷ್ಟ್ರೀಯ ಜನತಾ ದಳದ ಆಡಳಿತಾರೂಢ ಮೈತ್ರಿಕೂಟವು ಹೇಮಂತ್‌ ಸೊರೆನ್‌ ಅವರು ಮತ್ತೆ ಸಿಎಂ ಆಗಲು ಒಪ್ಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಅಕ್ರಮವಾಗಿ ಹಣ ವರ್ಗಾವಣೆ, ಭೂ ಅವ್ಯವಹಾರ ಪ್ರಕರಣ ಕೇಳಿಬಂದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಹೇಮಂತ್‌ ಸೊರೆನ್‌ ಅವರಿಗೆ 9 ಬಾರಿ ಸಮನ್ಸ್‌ ಜಾರಿಗೊಳಿಸಿದ್ದರು. ಆದರೆ ಹೇಮಂತ್‌ ಸೊರೆನ್‌ ಅವರು ಪ್ರತಿ ಬಾರಿ ಸಮನ್ಸ್‌ ನೀಡಿದಾಗಲೂ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಇ.ಡಿ ಅಧಿಕಾರಿಗಳು ಮನೆಗೆ ಲಗ್ಗೆ ಇಡುತ್ತಾರೆ ಎಂಬುದನ್ನು ಅರಿತಿದ್ದ ಅವರು ದೆಹಲಿಗೆ ತೆರಳಿ, ಗೌಪ್ಯ ಸ್ಥಳದಲ್ಲಿದ್ದರು. ಆದರೆ ಇ.ಡಿ ಅಧಿಕಾರಿಗಳು ಕೊನೆಗೂ ಹೇಮಂತ್‌ ಸೊರೆನ್‌ ಅವರನ್ನು ಈ ವರ್ಷದ ಜನವರಿ 31ರಂದು ಬಂಧಿಸಿದ್ದರು. ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್‌ ಸೊರೆನ್‌ ಅವರು ರಾಜೀನಾಮೆ ನೀಡಿದ್ದರು.

ಬಂಧನವನ್ನು ಪ್ರಶ್ನಿಸಿ ಹಾಗೂ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವ ಉದ್ದೇಶದಿಂದ ಹೇಮಂತ್‌ ಸೊರೆನ್‌ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಹೇಮಂತ್ ಸೊರೆನ್ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂಬ ಅಂಶವನ್ನು ಮರೆಮಾಚಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯ ಎಚ್ಚರಿಕೆ ನೀಡಿದ ನಂತರ ಸೊರೆನ್ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡರು. ಇದರಿಂದ ಸೊರೆನ್‌ ಅವರಿಗೆ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ:Koo Shut Down: ‘ಕೂ’ಗು ನಿಲ್ಲಿಸಿದ ಕನ್ನಡಿಗನೇ ಕಟ್ಟಿದ ಆ್ಯಪ್‌; ದೇಶೀಯ ಟ್ವಿಟರ್‌ ಇನ್ನು ನೆನಪು ಮಾತ್ರ!

Exit mobile version