ಕೇರಳ: ಕೊರೋನಾ ವೈರಸ್‌ನಿಂದ ವರ್ಷಾನುಗಟ್ಟಲೇ ಬಳಲಿ ಇನ್ನೇನು ಚೇತರಿಸಿಕೊಳ್ಳುತ್ತಿರುವಾಗಲೇ ಕೇರಳ(Kerala)ದಲ್ಲಿ ಮತ್ತೊಂದು ವೈರಸ್(Virus) ಜನರ ನಿದ್ದೆಗೆಡಿಸಿದೆ. ಹೆಪಟಿಟಿಸ್-ಎ(Hepatitis-A) ಖಾಯಿಲೆ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ನಾಲ್ಕು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇನ್ನು ಕೇರಳ ಗಡಿ ರಾಜ್ಯವಾಗಿರುವುದರಿಂದ ಕರ್ನಾಟಕದಲ್ಲೂ ಇದರ ಭೀತಿ ಹೆಚ್ಚಾಗಿದೆ.
ಇನ್ನು ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಬುಧವಾರ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಹೆಪಟಿಟಿಸ್-ಎ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ವಿಶೇಷವಾಗಿ ಮಣಪ್ಪುರಂ, ಎರ್ನಾಕುಲಂ, ಕೋಯಿಕ್ಕೋಡ್ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಹೆಪಟಿಟಿಸ್-ಎ ಕೇಸ್ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ವೈರಾಣು ವೇಗವಾಗಿ ಹರಡುವುದನ್ನು ತಪ್ಪಿಸಲು ತಲಮಟ್ಟದಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಎಲ್ಲಾ ಜಿಲ್ಲ ಮತ್ತು ತಾಲೂಕು ಮಟ್ಟದಲ್ಲಿ ಈ ಸಂಬಂಧ ಸಭೆ ನಡೆಸಿದ್ದು, ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಣಪ್ಪುರಣನ ಚಲಿಯಾರ್ ಮತ್ತು ಪೋತುಕಲ್ಲು ಪ್ರದೇಶದಲ್ಲಿ ಹೆಪಟಿಟಿಸ್-ಎ ಗೆ ಜನ ಬಲಿಯಾಗಿರುವ ಬಗ್ಗೆಯೂ ವರದಿಯಾಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ರೋಗಾಣುಗಳನ್ನು ತಡೆಯಲು ಮತ್ತು ಜನರಲ್ಲಿ ಅರಿವು ಮೂಡಿಸಲು ಶೀಘ್ರದಲ್ಲಿಯೇ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಪೋತುಕಲ್ಲು ಪ್ರದೇಶದಲ್ಲಿ ಈ ಖಾಯಿಲೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಹೊಸ ಕೇಸ್‌ಗಳು ಮತ್ತೆ ಪತ್ತೆಯಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆ ಆರೋಗ್ಯ ಇಲಾಖೆ ಮತ್ತು ಜನಪ್ರತಿನಿಧಿಗಳು ಚಲಿಯಾರ್ ಮತ್ತು ಪೋಲುಕಲ್ಲು ಪ್ರದೇಶದಲ್ಲಿ ತುರ್ತು ಸಭೆ ನಡೆಸಿದ್ದಾರೆ. ಈ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳಾದ ಕೆರೆ, ಬಾವಿಗಳನ್ನು ಸ್ವಚ್ಛಗೊಳಿಸುವಂತೆ ಆದೇಶ ಹೊರಡಿಸಲಾಗಿದೆ. ಅಲ್ಲದೇ ಕೇವಲ ಬಿಸಿ ನೀರನ್ನಷ್ಟೇ ಗ್ರಾಹಕರಿಗೆ ನೀಡುವಂತೆ ಎಲ್ಲಾ ಹೊಟೇಲ್, ರೆಸ್ಟೋರೆಂಟ್‌ಗಳಿಗೆ ಖಡಕ್ ಸೂಚನೆ ಹೊರಡಿಸಲಾಗಿದೆ.
ಇದನ್ನೂ ಓದಿ:Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್ ಶಾ ಘೋಷಣೆ
ಹೆಪಟಿಟಿಸ್-ಎ ಅಂದರೆ ಏನು?
ಹೆಪಟೈಟಿಸ್ ಎ ವೈರಸ್ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕಲುಷಿತ ಆಹಾರ ಮತ್ತು ನೀರಿನ ಮೂಲಕ ಅಥವಾ ಸಾಂಕ್ರಾಮಿಕ ವ್ಯಕ್ತಿಯೊಂದಿಗೆ ನೇರ ಸಂಪರ್ಕದ ಮೂಲಕ ಹರಡುತ್ತದೆ. ಈ ರೋಗವು ಮುಖ್ಯವಾಗಿ ರೋಗನಿರೋಧಕ ಶಕ್ತಿ ಇರದ ವ್ಯಕ್ತಿಗಳಲ್ಲಿ ಮತ್ತು ಎಚ್ಐವಿ ಮತ್ತು ಯಕೃತ್ತಿನ ಕಾಯಿಲೆಯಂತಹ ಅಸ್ವಸ್ಥತೆಗಳನ್ನು ಹೊಂದಿರುವವರಿಗೆ ಬಹಳ ಬೇಗ ತಗುಲುತ್ತದೆ. ಆಯಾಸ, ಜ್ವರ, ಹೊಟ್ಟೆ ನೋವು, ವಾಕರಿಕೆ, ವಾಂತಿ, ಅತಿಸಾರ, ಹಸಿವಿನ ಕೊರತೆ, ತುರಿಕೆ ಮತ್ತು ಕಾಮಾಲೆ ಸೇರಿವೆ. ಕಣ್ಣುಗಳು, ಮೂತ್ರ, ಚರ್ಮ ಮತ್ತು ಉಗುರುಗಳ ಬಿಳಿಯ ಹಳದಿ ಬಣ್ಣಕ್ಕೆ ತಿರುಗುವುದು ಇವೆಲ್ಲಾ ಈ ಖಾಯಿಲೆಯ ಲಕ್ಷಣಗಳು. ಕೇವಲ ಬಿಸಿ ನೀರು ಕುಡಿಯುವುದು, ಆಹಾರ ಸೇವೆನೆಗೂ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯುವುದರಿಂದ ಈ ಖಾಯಿಲೆಯನ್ನು ತಡೆಯಬಹುದಾಗಿದೆ.