Site icon Vistara News

Inayat Vats: 20 ವರ್ಷದ ಹಿಂದೆ ಹುತಾತ್ಮನಾದ ಅಪ್ಪ; ಈಗ ಮಗಳೂ ಸೇನೆ ಸೇರ್ಪಡೆ

Lieutenant Inayat Vats

Her Father Died In Jammu Kashmir 20 Years Ago, She Now Joins Army Wearing His Uniform

ನವದೆಹಲಿ: ದೇಶದಲ್ಲಿ ಸೈನಿಕರ ಬಗ್ಗೆ ಅಗೌರವದಿಂದ ಮಾತನಾಡುವವರಿದ್ದಾರೆ. ಕೇವಲ ದುಡ್ಡಿಗೋಸ್ಕರ ಸೇನೆ ಸೇರುತ್ತಾರೆ ಎಂದು ಹಲಬುವ ರಾಜಕಾರಣಿಗಳೂ ಇದ್ದಾರೆ. ಸೇನೆ ಸೇರುವವರು ಪಕ್ಕದ ಮನೆಯಲ್ಲೇ ಹುಟ್ಟಲಿ ಎಂಬ ಮನೋಭಾವ ತುಂಬ ಜನರಲ್ಲಿ ಇರುತ್ತದೆ. ಆದರೆ, ಒಂದಿಡೀ ಕುಟುಂಬವೇ ಸೇನೆ ಸೇರಿದ, ಅಪ್ಪನಿಂದ ಸ್ಫೂರ್ತಿಗೊಂಡು ಸೇನೆಯಲ್ಲಿ (Indian Army) ಸೇವೆ ಸಲ್ಲಿಸಿದ, ಹುತಾತ್ಮರಾದ ಯೋಧರು ದೇಶದಲ್ಲಿ ಸಾಕಷ್ಟಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, 20 ವರ್ಷದ ಹಿಂದೆ ಸೇನೆಯಲ್ಲಿ ಹುತಾತ್ಮರಾದ ಮೇಜರ್‌ ನವನೀತ್‌ ವತ್ಸ (Major Navneet Vats) ಅವರ ಪುತ್ರಿ ಇನಾಯತ್‌ ವತ್ಸ (Inayat Vats) ಅವರೂ ಈಗ ಸೇನೆಗೆ ಸೇರ್ಪಡೆಯಾಗುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

ಹೌದು, ಚೆನ್ನೈನಲ್ಲಿರುವ ಆಫೀಸರ್ಸ್‌ ಟ್ರೈನಿಂಗ್‌ ಅಕಾಡೆಮಿಯ (OTA) ಪರೇಡ್‌ನಲ್ಲಿ ಭಾಗವಹಿಸಿ, ತೇರ್ಗಡೆಯಾದ ಇನಾಯತ್ ವತ್ಸ ಈಗ ಲೆಫ್ಟಿನೆಂಟ್‌ ಆಗಿ ಭಾರತೀಯ ಸೇನೆ ಸೇರಿದ್ದಾರೆ. ತಂದೆಯಂತೆ ಮಗಳು ಕೂಡ ಭಾರತೀಯ ಸೇನೆಯ ಸಮವಸ್ತ್ರ ಧರಿಸಿದ್ದನ್ನು ಕಂಡ ಆಕೆಯ ತಾಯಿ ಭಾವುಕರಾಗಿದ್ದಾರೆ. ಈಗ ಇನಾಯತ್‌ ವತ್ಸ ಅವರು ಭಾರತೀಯ ಸೇನೆಯ ಸಮವಸ್ತ್ರ ಧರಿಸಿ ನಿಂತ ಫೋಟೊ ಕೂಡ ವೈರಲ್‌ ಆಗಿದ್ದು, ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಂದೆ ಅಗಲಿದಾಗ ಮಗಳಿಗೆ ಕೇವಲ 3 ವರ್ಷ

ಮೇಜರ್‌ ನವನೀತ್‌ ವತ್ಸ ಅವರು ಜಮ್ಮು-ಕಾಶ್ಮೀರದಲ್ಲಿ ಕೈಗೊಂಡ ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು. ಉಗ್ರರೊಂದಿಗೆ ಹೋರಾಡುತ್ತಲೇ 20 ವರ್ಷಗಳ ಹಿಂದೆ ಅವರು ಹುತಾತ್ಮರಾಗಿದ್ದರು. ಆಗ ಇನಾಯತ್‌ ವತ್ಸ ಅವರಿಗೆ ಕೇವಲ 3 ವರ್ಷ ವಯಸ್ಸು. ಅಪ್ಪನ ಪ್ರೀತಿ ಅರ್ಥವಾಗುವ ಹೊತ್ತಿನಲ್ಲೇ ಆತನನ್ನು ಕಳೆದುಕೊಂಡ ಇನಾಯತ್‌ ವತ್ಸ, ಆತನಿಂದಲೇ ಸ್ಫೂರ್ತಿಗೊಂಡು ಸೇನೆ ಸೇರಿದ್ದಾರೆ. ಮಿಲಿಟರಿ ಇಂಟಲಿಜೆನ್ಸ್‌ ಕಾರ್ಪ್ಸ್‌ನಲ್ಲಿ ಇವರೀಗ ಲೆಫ್ಟಿನೆಂಟ್‌ ಆಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Indian Army: ಭಾರತೀಯ ಸೇನೆಗೆ ಬರಲಿವೆ ₹84,560 ಕೋಟಿ ಮೌಲ್ಯದ ʼಮೇಡ್ ಇನ್ ಇಂಡಿಯಾʼ ಸಲಕರಣೆ; ಏನೇನಿವೆ?

ಅಪ್ಪ ಧರಿಸಿದ್ದ ಸಮವಸ್ತ್ರ ಧರಿಸಿದ ಇನಾಯತ್‌

ತಂದೆಯ ಮೇಲಿನ ಅಭಿಮಾನದಿಂದ, ದೇಶದ ಮೇಲಿನ ಪ್ರೀತಿಯಿಂದ ಸೇನೆ ಸೇರಿರುವ ಇನಾಯತ್‌ ವತ್ಸ ಅವರು ತಮ್ಮ ತಂದೆ ಧರಿಸಿದ್ದ ಸಮವಸ್ತ್ರವನ್ನೇ ಧರಿಸಿ ಅಭಿಮಾನ ಮೆರೆದರು. ಇದನ್ನು ಭಾರತೀಯ ಸೇನೆಯೂ ದೃಢಪಡಿಸಿದೆ. “ಮೇಜರ್‌ ನವನೀತ್‌ ವತ್ಸ ಅವರ ಪುತ್ರಿ ಇನಾಯತ್‌ ವತ್ಸ ಅವರೂ ದೇಶದ ಸೇನೆ ಸೇರಿದ್ದಾರೆ. ಅಷ್ಟೇ ಅಲ್ಲ, ತನ್ನ ಹೀರೋ (ತಂದೆ) ಧರಿಸಿದ್ದ ಸಮವಸ್ತ್ರವನ್ನೇ ಧರಿಸಿದ್ದಾರೆ” ಎಂದು ಭಾರತೀಯ ಸೇನೆಯು ಮಾಹಿತಿ ನೀಡಿದೆ. ಒಟ್ಟಿನಲ್ಲಿ, ಒಳ್ಳೆಯ ಉದ್ಯೋಗ, ಐದಂಕಿ ಸಂಬಳ, ಕಾರು, ಮನೆ ಇದ್ದರೆ ಸಾಕು ಎನ್ನುವವರ ಮಧ್ಯೆ, ತಂದೆಯಂತೆ ತಾನೂ ದೇಶಸೇವೆ ಮಾಡಬೇಕು ಎಂದು ಸೇನೆ ಸೇರಿದ ಇನಾಯತ್‌ ವತ್ಸ ಅವರ ನಿರ್ಧಾರವು ಶ್ಲಾಘನೀಯವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version