ನವದೆಹಲಿ: ಮೋದಿ ಉಪನಾಮ ಇರುವವರೆಲ್ಲರರೂ ಕಳ್ಳರೇ ಎಂಬ ಹೇಳಿಕೆ ನೀಡಿ, ಬಳಿಕ ದಾಖಲಾದ ಮಾನಹಾನಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ (Rahul Gandhi) ಅವರು ಲೋಕಸಭೆಯಿಂದಲೂ ಅನರ್ಹಗೊಂಡಿದ್ದಾರೆ. ರಾಹುಲ್ ಗಾಂಧಿ ಅನರ್ಹತೆ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 (3)ರ ಮಾನ್ಯತೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಲಾಗಿದೆ. ಅಷ್ಟರಮಟ್ಟಿಗೆ ರಾಹುಲ್ ಗಾಂಧಿ ವಿರುದ್ಧ ದಾಖಲಾದ ಮಾನಹಾನಿ ಕೇಸ್ ಪ್ರಭಾವ ಬೀರಿದೆ. ಹಾಗೆ ನೋಡಿದರೆ, ಕಾಂಗ್ರೆಸ್ ನಾಯಕನ ವಿರುದ್ಧ ಮಾನಹಾನಿ ಪ್ರಕರಣ ಒಂದೇ ಅಲ್ಲ, ಅವರ ವಿರುದ್ಧ ಇನ್ನೂ ಹಲವು ಕೇಸ್‌ಗಳು ದಾಖಲಾಗಿವೆ.
ಇವುಗಳಲ್ಲಿಯೇ ಕೆಲವೊಂದು ಕೇಸ್‌ನಲ್ಲಿ ಅವರು ಜಾಮೀನು ಪಡೆದಿದ್ದಾರೆ. ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ನೀಡಿದ ಹೇಳಿಕೆ ವಿರುದ್ಧ ದಾಖಲಾಗಿರುವುದು ಸೇರಿ ರಾಹುಲ್ ಗಾಂಧಿ ವಿರುದ್ಧ ಹಲವು ಕೇಸ್‌ಗಳು ದಾಖಲಾಗಿವೆ. ಹಾಗಾದರೆ, ಕಾಂಗ್ರೆಸ್ ನಾಯಕನ ವಿರುದ್ಧ ದಾಖಲಾಗಿರುವ ಕೇಸ್‌ಗಳು ಯಾವವು? ಯಾವ ಪ್ರಕರಣಗಳಲ್ಲಿ ಅವರು ಜಾಮೀನು ಪಡೆದಿದ್ದಾರೆ? ಪ್ರಕರಣಗಳ ಪ್ರಸ್ತುತ ಸ್ಥಿತಿಗತಿ ಹೇಗಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ನ್ಯಾಷನಲ್ ಹೆರಾಲ್ಡ್
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ 2015ರಲ್ಲಿ ಜಾಮೀನು ಸಿಕ್ಕಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ
ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು 2017ರಲ್ಲಿ ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನೀಡಿದ ಹೇಳಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. “ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಿದ್ಧಾಂತಗಳೇ ಗೌರಿ ಲಂಕೇಶ್ ಅವರನ್ನು ಹತ್ಯೆಗೈದಿವೆ” ಎಂಬುದಾಗಿ ರಾಹುಲ್ ಹೇಳಿದ್ದರು. ರಾಹುಲ್ ವಿರುದ್ಧ ಆರ್‌ಎಸ್‌ಎಸ್ ಮುಖಂಡರೊಬ್ಬರು ಮಾನಹಾನಿ ಕೇಸ್ ದಾಖಲಿಸಿದ್ದು, ಮುಂಬೈ ಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ.
ಗಾಂಧೀಜಿ ಹತ್ಯೆ ಕುರಿತು ಹೇಳಿಕೆ
ರಾಹುಲ್ ಗಾಂಧಿ ಅವರು ಆರ್‌ಎಸ್‌ಎಸ್ ಕುರಿತು ಮತ್ತೊಂದು ಹೇಳಿಕೆ ನೀಡಿದ ಕಾರಣ ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರೊಬ್ಬರು ಅವರು ರಾಹುಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. “ಮಹಾತ್ಮ ಗಾಂಧೀಜಿ ಅವರನ್ನು ಕೊಂದಿದ್ದು ಆರ್‌ಎಸ್‌ಎಸ್” ಕಾಂಗ್ರೆಸ್ ನಾಯಕ ಹೇಳಿದ್ದರು. ಈ ಪ್ರಕರಣದಲ್ಲಿ ಮಹಾರಾಷ್ಟ್ರದ ಭಿವಂಡಿ ಕೋರ್ಟ್ ಕಾಂಗ್ರೆಸ್ ನಾಯಕನಿಗೆ ಜಾಮೀನು ನೀಡಿದೆ.
‘ರೇಪ್ ಇನ್ ಇಂಡಿಯಾ’ ಕೇಸ್
ಜಾರ್ಖಂಡ್‌ನಲ್ಲಿ 2019ರಲ್ಲಿ ಭಾಷಣ ಮಾಡುವಾಗ ರಾಹುಲ್ ಗಾಂಧಿ ನೀಡಿದ ‘ರೇಪ್ ಇನ್ ಇಂಡಿಯಾ’ ಹೇಳಿಕೆಯನ್ನು ಖಂಡಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಪ್ರಕರಣ ದಾಖಲಿಸಿದ್ದಾರೆ. ಭೋಪಾಲ್ ವಿಶೇಷ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸುತ್ತಿದೆ.
ರಫೇಲ್ ಡೀಲ್ ಕೇಸ್‌ನಲ್ಲಿ ಕ್ಷಮೆಯಾಚನೆ
ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ತಪ್ಪಾಗಿ ಉಲ್ಲೇಖಿಸಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ಮೀನಾಕ್ಷಿ ಲೇಖಿ ದೂರು ಸಲ್ಲಿಸಿದ್ದರು. ಅದರಂತೆ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಕ್ಷಮೆಯಾಚಿಸಿದ್ದರು. ಇವಿಷ್ಟೇ ಅಲ್ಲ, ಆರ್‌ಎಸ್‌ಎಸ್ ವಿರುದ್ಧ ನೀಡಿದ ಹೇಳಿಕೆಗಳಿಗಾಗಿ ರಾಹುಲ್ ಗಾಂಧಿ ವಿರುದ್ಧ ಇನ್ನೂ ಹಲವು ಮಾನನಷ್ಟ ಮೊಕದ್ದಮೆಗಳು ದಾಖಲಾಗಿವೆ. ಅವುಗಳ ವಿಚಾರಣೆ ನಡೆಯುತ್ತಿದೆ.