Site icon Vistara News

ವಿಸ್ತಾರ Explainer: New Parliament Building: ನೂತನ ಸಂಸತ್ ಭವನದ ರಚನೆ, ವಿನ್ಯಾಸ ಅದ್ಭುತ! ವಿಡಿಯೊ ನೋಡಿ

New parliament Building

ನವದೆಹಲಿಯಲ್ಲಿ ನಿರ್ಮಿಸಿರುವ ನೂತನ ಸಂಸತ್‌ ಭವನಕ್ಕೆ (New Parliament Building) ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಉದ್ಘಾಟನೆಯಾಗಿದ್ದರೂ ಇದುವರೆಗೆ ಸಂಸತ್‌ ಕಲಾಪಗಳು ವೃತ್ತಾಕಾರದ ಹಳೆಯ ಭವನದಲ್ಲಿಯೇ ನಡೆದಿದ್ದವು. ಆದರೀಗ ನೂತನ ಸಂಸತ್‌ ಭವನದಲ್ಲಿ ಕಲಾಪ (Special Parliament Session) ಆರಂಭಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಗಣೇಶ ಚತುರ್ಥಿಯ (ಸೆಪ್ಟೆಂಬರ್‌ 19) ಶುಭದಿನದಂದೇ ಹೊಸ ಸಂಸತ್‌ನಲ್ಲಿ ಕಲಾಪ ಆರಂಭವಾಗಲಿದೆ.

ಈ ಹಿಂದೆ ಕಲಾಪಗಲು ನಡೆಯುತ್ತಿದ್ದ ಸಂಸತ್‌ ಭವನ ಸ್ವಾತಂತ್ರ್ಯೋತ್ತರ ಕಾಲದ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗಿದೆ. ಹಲವು ಅಧಿಕಾರ ಹಸ್ತಾಂತರಗಳು, ಹಲವು ಚಾರಿತ್ರಿಕ ಕಲಾಪಗಳು, ಹಲವು ಜಾಗತಿಕ ಖ್ಯಾತಿಯ ಮುತ್ಸದ್ಧಿಗಳು ಹಾಗೂ ಚರ್ಚೆಗಳು…ಇತ್ಯಾದಿ. ಇಷ್ಟರಲ್ಲಿಯೇ ಈ ಸಂಸತ್‌ ಭವನ ಇತಿಹಾಸ ಸೇರಲಿದೆ. ಹೊಸ, ಭವ್ಯ ಸಂಸತ್‌ ಭವನ (New Parliament Building) ಹೊಸದೊಂದು ಇತಿಹಾಸಕ್ಕೆ ಮುನ್ನುಡಿ ಬರೆಯಲಿದೆ.

ಮೂಲ ಸಂಸತ್‌ ಭವನ ಕಟ್ಟಡ ರಚನೆಯಾದುದು 1927ರಲ್ಲಿ. ಹತ್ತಿರ ಹತ್ತಿರ ಒಂದು ಶತಮಾನ ಇದಕ್ಕೆ ಪೂರ್ಣಗೊಂಡಿದೆ. ಶತಮಾನ ಹಳೆಯದಾದ ಈ ರಚನೆ ಇಂದಿನ ಹಾಗೂ ಮುಂದಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗದು. ಇದನ್ನು ಗಮನದಲ್ಲಿಟ್ಟುಕೊಂಡು ಲೋಕಸಭೆ ಮತ್ತು ರಾಜ್ಯಸಭೆ ಸಂಸತ್ತಿಗೆ ಹೊಸ ಕಟ್ಟಡ ನಿರ್ಮಿಸಲು ನಿರ್ಣಯಗಳನ್ನು ಅಂಗೀಕರಿಸಿದವು. ಡಿಸೆಂಬರ್ 10, 2020ರಂದು ಪ್ರಧಾನಿ ನರೇಂದ್ರ ಮೋದಿ ಹೊಸ ಭವನಕ್ಕೆ ಶಂಕುಸ್ಥಾಪನೆ ಮಾಡಿದರು.

ಎಷ್ಟು ದೊಡ್ಡದಿದೆ ಈ ಭವನ?

ಈ ಕಟ್ಟಡವನ್ನು 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಸೆಂಟ್ರಲ್ ವಿಸ್ಟಾ ಕಟ್ಟಡಗಳ ಮಾದರಿಯಲ್ಲಿ ನಿರ್ಮಿಸಲಾದ ಹೊಸ ಸಂಸತ್ತು ತ್ರಿಕೋನಾಕೃತಿಯಲ್ಲಿದೆ. ಇದು ಲೋಕಸಭೆ, ರಾಜ್ಯಸಭೆ, ಸೆಂಟ್ರಲ್ ಲಾಂಜ್ ಮತ್ತು ಸಾಂವಿಧಾನಿಕ ಅಧಿಕಾರಿಗಳ ಕಚೇರಿಗಳನ್ನು ಹೊಂದಿದೆ. ಹೊಸ ಲೋಕಸಭೆಯನ್ನು ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹೊಸ ರಾಜ್ಯಸಭೆಯು ರಾಷ್ಟ್ರೀಯ ಪುಷ್ಪವಾದ ಕಮಲದ ಹೋಲಿಕೆಯನ್ನು ಹೊಂದಿದೆ. ರಾಷ್ಟ್ರಪತಿ ಭವನದಂತಹ ಭಾರತದ ಪ್ರಮುಖ ಪಾರಂಪರಿಕ ಕಟ್ಟಡಗಳಿಂದಲೂ ವಿವಿಧ ವಾಸ್ತುಶಿಲ್ಪದ ಪ್ರಭಾವಗಳನ್ನು ಪಡೆದಿದೆ.

ಹಳೆಯ ಕಟ್ಟಡದಲ್ಲಿ ಲೋಕಸಭೆಯಲ್ಲಿ 543 ಮತ್ತು ರಾಜ್ಯಸಭೆಯಲ್ಲಿ 250 ಸದಸ್ಯರು ಕುಳಿತುಕೊಳ್ಳಬಹುದು. ಹೊಸ ಸಂಸತ್ ಕಟ್ಟಡ ಲೋಕಸಭೆಯಲ್ಲಿ 888 ಸದಸ್ಯರು ಮತ್ತು 384 ಸದಸ್ಯರಿಗೆ ಸ್ಥಳಾವಕಾಶವನ್ನು ಹೊಂದಿದೆ. ಕೇಂದ್ರ ಪ್ರಾಂಗಣದಲ್ಲಿ ಎರಡೂ ಸದನಗಳ ಸದಸ್ಯರು ಮುಕ್ತವಾಗಿ ಸಭೆ ಸೇರಲು ಸ್ಥಳವಿದೆ. ಜಂಟಿ ಅಧಿವೇಶನ ನಡೆದಾಗ ಇದನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಪುನರಾಭಿವೃದ್ಧಿಯಾದ ಶ್ರಮ ಶಕ್ತಿ ಭವನದಲ್ಲಿ ಸಂಸದರಿಗಾಗಿ ಸುಮಾರು 800 ಕೋಣೆಗಳನ್ನು ನಿರ್ಮಿಸಲಾಗುತ್ತಿದೆ.

ನೂತನ ಕಟ್ಟಡವು ಆರು ಸಮಿತಿ ಕೊಠಡಿಗಳನ್ನು ಹೊಂದಿರುತ್ತದೆ. ಪ್ರಸ್ತುತ ಕಟ್ಟಡದಲ್ಲಿ ಅಂತಹ ಮೂರು ಕೊಠಡಿಗಳಷ್ಟೇ ಇವೆ. ಮಂತ್ರಿಮಂಡಲದ ಬಳಕೆಗೆ 92 ಕೊಠಡಿಗಳು ಇರುತ್ತವೆ. ಹೊಸ ಕಟ್ಟಡದಲ್ಲಿ, ಲೋಕಸಭೆ ಮತ್ತು ರಾಜ್ಯಸಭೆಗಳ ಪ್ರತಿ ಬೆಂಚ್‌ನಲ್ಲಿ ಇಬ್ಬರು ಸದಸ್ಯರು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿ ಆಸನದಲ್ಲಿ ಡಿಜಿಟಲ್ ವ್ಯವಸ್ಥೆಗಳು ಮತ್ತು ಟಚ್ ಸ್ಕ್ರೀನ್‌ಗಳನ್ನು ಅಳವಡಿಸಲಾಗುತ್ತಿದೆ.

ಹಳೆಯ ಸಂಸತ್‌ ಕಟ್ಟಡದ ಬಳಕೆ ಮುಂದುವರಿಯಲಿದೆ. ಎರಡು ಕಟ್ಟಡಗಳು ಒಂದಕ್ಕೊಂದು ಪೂರಕವಾಗಿರುವಂತೆ ಇವೆ. ಇವುಗಳ ಮೂಲ ವಾಸ್ತುಶಿಲ್ಪದ ತಂತ್ರವೇ ಹಾಗಿದೆ. ಹಳೆಯ ಕಟ್ಟಡದ ಐತಿಹಾಸಿಕ ಪರಂಪರೆಯನ್ನು ಉಳಿಸಿಕೊಳ್ಳಲು ಕಾಳಜಿ ವಹಿಸಲಾಗುತ್ತದೆ. ಸಂಸತ್ತಿನ ಸಂಕೀರ್ಣದಲ್ಲಿರುವ ಎಲ್ಲಾ ಪ್ರತಿಮೆಗಳನ್ನು ಸಹ ಪುನಃಸ್ಥಾಪಿಸಲಾಗುತ್ತದೆ. ಉನ್ನತ ಮಟ್ಟದ ಭದ್ರತಾ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನು ಓದಿ : Special Parliament Session: ಸಂಸತ್ತಿನ ಮೆಟ್ಟಿಲಿಗೆ ನಾನೇಕೆ ನಮಿಸಿದೆ? ಭಾವುಕರಾದ ಮೋದಿ ಹೇಳಿದ್ದಿಷ್ಟು…

ಹೊಸ ಕಟ್ಟಡದಲ್ಲಿ ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸುವ ಸಂವಿಧಾನ ಭವನ ಇರಲಿದೆ. ಲಕ್ಷಾಂತರ ಮುದ್ರಿತ ಹಾಗೂ ಡಿಜಿಟಲ್‌ ಬುಕ್‌ಗಳನ್ನು ಹೊಂದಿರುವ ಗ್ರಂಥಾಲಯವಿರುತ್ತದೆ. ಊಟದ ಕೋಣೆ ಮತ್ತು ಸದಸ್ಯರಿಗೆ ಸಾಕಷ್ಟು ಪಾರ್ಕಿಂಗ್ ವ್ಯವಸ್ಥೆ ಸೇರಿವೆ. ಹೊಸ ಕಟ್ಟಡವು ಮಳೆನೀರು ಕೊಯ್ಲು ಮತ್ತು ನೀರಿನ ಮರುಬಳಕೆ ವ್ಯವಸ್ಥೆಯನ್ನು ಹೊಂದಿದೆ. ಕಟ್ಟಡದಾದ್ಯಂತ 100% ಯುಪಿಎಸ್ ಪವರ್ ಬ್ಯಾಕಪ್ ಒದಗಿಸಲಾಗಿದೆ.

ಹೊಸ ಕಟ್ಟಡದ ವಿನ್ಯಾಸವನ್ನು ಅಹಮದಾಬಾದ್ ಮೂಲದ HCP ಡಿಸೈನ್ ಮತ್ತು ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮಾಡಿದೆ. ಕೇಂದ್ರದ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಗಳ ಭಾಗವಾದ ಹೊಸ ಸಂಸತ್‌ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಟಾಟಾ ಪ್ರಾಜೆಕ್ಟ್ಸ್ ಪಡೆದಿದ್ದು, ಇದನ್ನು ನಿರ್ಮಿಸಿದೆ.

ಅಧಿಕಾರದ ಹಸ್ತಾಂತರಕ್ಕೆ ಸೆಂಗೋಲ್‌?

ಹೊಸ ಸಂಸತ್‌ ಭವನದ ಇನ್ನೊಂದು ಆಕರ್ಷಣೆ ಎಂದರೆ, ಪುರಾತನ ಭಾರತದಲ್ಲಿ ಅಧಿಕಾರದ ಹಸ್ತಾಂತರಕ್ಕೆ ಬಳಸುತ್ತಿದ್ದ ಸೆಂಗೋಲ್‌ ಅಥವಾ ರಾಜದಂಡ. ಕ್ರಿಸ್ತಪೂರ್ವ 3ನೇ ಶತಮಾನದಲ್ಲಿ ಆಡಳಿತ ನಡೆಸಿದ್ದ ಚೋಳ ರಾಜನ ಅವಧಿಯಲ್ಲಿ ಮಹತ್ವ ಪಡೆದ ರಾಜದಂಡ ಇದಾಗಿತ್ತು. ಸೆಂಗೋಲ್​ ಸದ್ಯ ಅಲಹಾಬಾದ್​ ಮ್ಯೂಸಿಯಂನಲ್ಲಿದೆ. ಅದನ್ನು ತಮಿಳಿನ ಹಿರಿಯರು ಪ್ರಧಾನಿಗೆ ನೀಡಲಿದ್ದು, ಅದನ್ನು ಲೋಕಸಭೆಯ ಸ್ಪೀಕರ್​ ಕುರ್ಚಿಯ ಸಮೀಪ ಪ್ರಧಾನಿ ಇಡಲಿದ್ದಾರೆ. ಚಿನ್ನದಿಂದ ಮಾಡಿದ ಈ ದಂಡವನ್ನು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಜಾಜಿಯವರು ತಮಿಳುನಾಡಿನ ಚಿನ್ನಾಭರಣ ತಯಾರಕರಿಂದ ಮಾಡಿಸಿ ತರಿಸಿ ನೆಹರೂ ಅವರಿಗೆ ನೀಡಿದ್ದರು. ನಂತರ ಇದು ಮ್ಯೂಸಿಯಂ ಸೇರಿತ್ತು.

ಬೃಹತ್‌ ರಾಷ್ಟ್ರ ಲಾಂಛನ

ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸಂಸತ್ತಿನ ಕಟ್ಟಡದ ಮೇಲಿರುವ ರಾಷ್ಟ್ರೀಯ ಲಾಂಛನವಾದ ನಾಲ್ಕು ಸಿಂಹಗಳನ್ನು ಅನಾವರಣಗೊಳಿಸಿದ್ದಾರೆ. 6.5 ಮೀಟರ್ ಎತ್ತರವಾಗಿರುವ ಈ ಲಾಂಛನ 9,500 ಕೆಜಿ ತೂಕ ಹೊಂದಿದ್ದು ಕಂಚಿನಿಂದ ಮಾಡಲ್ಪಟ್ಟಿದೆ.

ಈ ಕಟ್ಟಡದ ನಿರ್ಮಾಣಕ್ಕೆಂದು ತೆಗೆದಿರಿಸಲಾದ ಹಣದ 2600 ಕೋಟಿ ರೂ. ಇದುವರೆಗೆ ಇದರ ನಿರ್ಮಾಣದಲ್ಲಿ ಸುಮಾರು 23,04,095 ಮಾನವ ದಿನಗಳಷ್ಟು ಉದ್ಯೋಗ ನೀಡಲಾಗಿದೆ. 26,045 ಟನ್‌ ಸ್ಟೀಲ್‌ ಬಳಸಲಾಗಿದೆ. 63,807 ಟನ್ ಸಿಮೆಂಟ್‌ ಹಾಗೂ ‌9,689 ಘನ ಮೀಟರ್‌ ಹಾರುಬೂದಿ ಬಳಸಲಾಗಿದೆ.

Exit mobile version