Site icon Vistara News

Ram Mandir : ಇಲ್ಲಿದೆ ನೋಡಿ ಬಾಲ ರಾಮನ ಕಣ್ಣಿಗೆ ಜೀವಕಳೆ ನೀಡಿದ್ದ ಬಂಗಾರದ ಉಳಿ, ಬೆಳ್ಳಿ ಸುತ್ತಿಗೆಯ ಚಿತ್ರ

Ram lalla

ಬೆಂಗಳೂರು: ಜನವರಿ 22ರಂದು ಅಯೋಧ್ಯೆಯ ಸುಂದರ ದೇಗುಲದಲ್ಲಿ (Ram Mandir) ಪ್ರಾಣ ಪ್ರತಿಷ್ಠಾಪನೆ ಗೊಂಡಿರುವ ರಾಮ ಲಲ್ಲಾನ ಮೂರ್ತಿಯ (Ram lalla) ಕಣ್ಣನ್ನು ನೋಡಿ ಮನಸೋಲದವರು ಯಾರೂ ಇಲ್ಲ. ಅತ್ಯಾಕರ್ಷಕವಾಗಿದ್ದ ನೇತ್ರಗಳಲ್ಲಿ ಬಾಲ ರಾಮ ಮುಗ್ಧ ನೋಟವಿತ್ತು. ಮಿರುಗುವ ಅಕ್ಷಿಗಳು ಭಕ್ತರಿಗೆ ಅಭಯ ನೀಡುವಂತಿತ್ತು. ಕೋಟ್ಯಂತರ ರಾಮ ಭಕ್ತರು ರಾಮ ವಿಗ್ರಹ (Rama statue) ಹಾಗೂ ಮನಮೋಹಕ ಕಣ್ಣಗಳನ್ನು ನೋಡಿ ಪುನೀತರಾಗಿದ್ದರು. ಇಷ್ಟೆಲ್ಲ ಅಂದದ ಮೂರ್ತಿಯನ್ನು ಕೆತ್ತಿದವರು ಮೈಸೂರಿನ ಅರುಣ್​ ಯೋಗಿರಾಜ್ (Arun Yogiraj) ಎಂಬುದು ಕರ್ನಾಟಕದ ಮಂದಿಗೆ ಹೆಮ್ಮೆಯ ವಿಚಾರ.

ಅಯೋಧ್ಯೆಯಿಂದ ವಾಪಸ್​ ಬಂದ ಅರುಣ್​ ಯೋಗಿರಾಜ್ ಅವರು ಹಲವಾರು ಸಂದರ್ಶನಗಳಲ್ಲಿ ಅದರ ಕೆತ್ತನೆ ಕಾರ್ಯದ ಕುತೂಹಲಕಾರಿ ಸಂಗತಿಗಳನ್ನು ವಿವರಿಸಿದ್ದರು. ಪ್ರಮುಖವಾಗಿ ಕಣ್ಣುಗಳಿಗೆ ಹೊಳಪು ನೀಡಲು ಚಿನ್ನದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆಯಿಂದ ಕೆತ್ತಲಾಗಿದೆ ಎಂದು ಹೇಳಿದ್ದರು. ಇದೀಗ ಅವರು ರಾಮನ ಕಣ್ಣಿಗೆ ಜೀವ ಕಳೆ ನೀಡಿರುವ ಉಳಿ, ಸುತ್ತಿಗೆಯ ಫೋಟೋವನ್ನು ಬಹಿರಂಗ ಮಾಡಿದ್ದಾರೆ. ಆ ಚಿತ್ರ ನೋಡಿದ ಜನರು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯ ರಾಮ್ ಲಲ್ಲಾನ ದೈವಿಕ ಕಣ್ಣುಗಳನ್ನು (ನೇತ್ರೋನ್ಮಿಲನ) ಕೆತ್ತಿದ ಈ ಬೆಳ್ಳಿಯ ಸುತ್ತಿಗೆಯನ್ನು ಚಿನ್ನದ ಉಳಿಯೊಂದಿಗೆ ಹಂಚಿಕೊಳ್ಳಲು ಚಿಂತಿಸಿದೆ ಎಂದು ಅವರು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ಅರುಣ್ ಯೋಗಿರಾಜ್ ಅವರ ಟ್ವೀಟ್ ಇಲ್ಲಿದೆ

ರಾಮನ ಕಣ್ಣುಗಳಿಗೆ ಅಷ್ಟೊಂದು ಹೊಳಪು ಹೇಗೆ ನೀಡಲಾಗಿತ್ತು ಎಂಬ ಕುತೂಹಲ ಪ್ರಾಣ ಪ್ರತಿಷ್ಠಾಪನೆ ದಿನದಿಂದಲೇ ಜನರಿಗೆ ಮೂಡಿತ್ತು. ಸುದ್ದಿ ವಾಹಿನಿಗಳಿಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಅವರು ಚಿನ್ನದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆಯ ಕುರಿತು ಹೇಳಿದ್ದರು. ಅದರ ಕೌತುಕವನ್ನು ಅವರೀಗ ತಣಿಸಿದ್ದಾರೆ.

ಬಾಲರಾಮನ ಮೂರ್ತಿಯ ಸೌಂದರ್ಯದ ರಹಸ್ಯ ಇಲ್ಲಿದೆ

ರಾಮ್‌ ಲಲ್ಲಾನ ಈ ಸುಂದರ ಮತ್ತು ದೈವಿಕವಾದ ಮಂದಹಾಸಭರಿತ ಮುಖ, ಕರುಣೆ ಹಾಗೂ ಲಾಸ್ಯ ತುಂಬಿದ ಕಣ್ಣುಗಳ ರಹಸ್ಯವೇನು? ಈ ಮುದ್ದು ಮುಖ ಐದು ವರ್ಷದ ಮುಗ್ಧ ಬಾಲಕನ ಮುಖದಂತೆ ಕಾಣುತ್ತಿರುವುದರ ಹಿಂದಿನ ನಿಗೂಢತೆ ಏನು? ಈ ರಹಸ್ಯವನ್ನು ಅರುಣ ಯೋಗಿರಾಜ್‌ (Arun Yogiraj) ಅವರ ಪತ್ನಿ ಬಿಡಿಸಿಟ್ಟಿದ್ದಾರೆ.

ಇದನ್ನೂ ಓದಿ : Ram Mandir: 11 ದಿನದಲ್ಲಿ ರಾಮಮಂದಿರಕ್ಕೆ 25 ಲಕ್ಷ ಜನ ಭೇಟಿ; ದೇಣಿಗೆ ಸಂಗ್ರಹ ಎಷ್ಟು?

“ಇದು ಅವರ (ಅರುಣ್)‌ ಕೈಯಲ್ಲಿರುವ ಮ್ಯಾಜಿಕ್. ಮೊದಲು ಮೂರ್ತಿ ಹೇಗಿರಬೇಕು ಎಂಬುದರ ಕುರಿತು ನಮಗೆ ತಿಳಿಸಲಾಯಿತು. ಉಳಿದದ್ದೆಲ್ಲ ಅವರ ಕಲ್ಪನೆ” ಎಂದಿದ್ದಾರೆ ಅರುಣ ಪತ್ನಿ ವಿಜೇತಾ. ಈ ಕೆಲಸಕ್ಕೆ ತೊಡಗಿದಂದಿನಿಂದ ಅರುಣ್‌ ಯೋಗಿರಾಜ್‌, ಮಕ್ಕಳನ್ನು ಸತತವಾಗಿ ಗಮನಿಸಲು ಆರಂಭಿಸಿದರಂತೆ. ಅದಕ್ಕಾಗಿ ಪುಟ್ಟ ಮಕ್ಕಳಿರುವ ಶಾಲೆಗಳಿಗೆ ಹೋಗಿ ಕುಳಿತು, ಮಕ್ಕಳ ಮುಖ, ಚಲನವಲಗಳನ್ನು ನೋಡುತ್ತಾ ಅಭ್ಯಸಿಸಿದರಂತೆ!

ಅರುಣ್ ಯೋಗಿರಾಜ್, ಜಿ.ಎಲ್ ಭಟ್ ಮತ್ತು ಸತ್ಯನಾರಾಯಣ ಪಾಂಡೆ ಅವರಿಗೆ ದೇವಾಲಯದ ಟ್ರಸ್ಟ್ ಕೆಲವು ಮಾನದಂಡಗಳನ್ನು ನೀಡಿ ಮೂರ್ತಿ ರಚಿಸುವ ಹೊಣೆ ನೀಡಿತ್ತು. ನಗುತ್ತಿರುವ ಮುಖ, ದೈವಿಕ ನೋಟ, 5 ವರ್ಷದ ಸ್ವರೂಪ, ರಾಜಕುಮಾರ/ಯುವರಾಜನ ನೋಟ ಇರಬೇಕು ಎಂಬುದು ಮಾನದಂಡಗಳಾಗಿದ್ದವು. ಶಿಲ್ಪಕಲೆಯ ಮೊದಲ ಹಂತವೆಂದರೆ ಅದನ್ನು ಕಾಗದದ ಮೇಲೆ ಚಿತ್ರಿಸುವುದು.

ಚಿತ್ರ ಸಮರ್ಪಕವೆನಿಸಿದ ಬಳಿಕ ಅದನ್ನು ಶಿಲ್ಪಕ್ಕೆ ಇಳಿಸಲು ಅರುಣ್‌ ಯೋಗಿರಾಜ್‌ ಮುಂದಾದರು. ಶಿಲ್ಪ ಪ್ರಪಂಚದ ಪವಿತ್ರ ಗ್ರಂಥವಾದ ಶಿಲ್ಪಶಾಸ್ತ್ರದ ಪ್ರಕಾರ ಮುಖದ ವೈಶಿಷ್ಟ್ಯಗಳ (ಕಣ್ಣು, ಮೂಗು, ಗಲ್ಲದ, ತುಟಿಗಳು, ಕೆನ್ನೆಗಳು, ಇತ್ಯಾದಿ) ಅನುಪಾತವನ್ನು ರೂಪಿಸಲಾಗುತ್ತದೆ. ಶಿಲ್ಪಶಾಸ್ತ್ರವು ಶಿಲ್ಪಕಲೆ, ಚಿತ್ರಕಲೆ, ದೇವಾಲಯದ ವಾಸ್ತುಶಿಲ್ಪ, ಪ್ರತಿಮಾಶಾಸ್ತ್ರ ಮತ್ತು ಪಟ್ಟಣ ಯೋಜನೆ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿದೆ.

“ಯೋಗಿರಾಜ್ ಮುಖ ಮತ್ತು ದೇಹದ ವೈಶಿಷ್ಟ್ಯಗಳನ್ನು ಅಧ್ಯಯನ ಮಾಡಲು ಶಿಲ್ಪಶಾಸ್ತ್ರದ ಜೊತೆಗೆ ಮಾನವ ಅಂಗರಚನಾಶಾಸ್ತ್ರದ ಪುಸ್ತಕಗಳನ್ನೂ ಓದುತ್ತಿದ್ದರು. ಇದು ಮೂರ್ತಿಯನ್ನು ತುಂಬಾ ನೈಜವಾಗಿ ಕಾಣುವಂತೆ ಮಾಡಿದ ಪ್ರಮುಖ ಅಂಶ. ಅರುಣ್‌ ಪುಟ್ಟ ಮಕ್ಕಳನ್ನು ನೋಡಲು ಶಾಲೆಗಳಿಗೆ ಹೋಗುತ್ತಿದ್ದರು. ಮಕ್ಕಳು ಹೇಗೆ ನಗುತ್ತಾರೆ ಎಂಬುದನ್ನು ಆಳವಾಗಿ ಸಂಶೋಧಿಸಿದರು ಮತ್ತು ಗಮನಿಸಿದರು” ಎಂದು ವಿಜೇತಾ ಹೇಳುತ್ತಾರೆ.

“ರಾಮನ ವಿಗ್ರಹದ ಮುಖದ ಆಕಾರವು ದುಂಡಾಗಿರುತ್ತದೆ. ಇದನ್ನು ದಕ್ಷಿಣ ಭಾರತದ ಶಿಲ್ಪಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹೋಲಿಸಿದರೆ, ಉತ್ತರದ ಶಿಲ್ಪಗಳು ಹಲವಾರು ತೀಕ್ಷ್ಣವಾದ ವೈಶಿಷ್ಟ್ಯಗಳನ್ನು ಹೊಂದಿವೆ. ಒಡಿಶಾ ಮತ್ತು ಬಂಗಾಳದ ಕೆಲವು ಶಿಲ್ಪಗಳು ಅಂತಹ ದುಂಡಗಿನ ಮುಖಗಳನ್ನು ಹೊಂದಿವೆ” ಎಂದು ದೆಹಲಿಯ ಡಾ.ಬಿ.ಆರ್.ಅಂಬೇಡ್ಕರ್ ವಿಶ್ವವಿದ್ಯಾನಿಲಯದ ಹೆರಿಟೇಜ್ ರಿಸರ್ಚ್ ಅಂಡ್ ಮ್ಯಾನೇಜ್‌ಮೆಂಟ್ ಸ್ಕೂಲ್‌ನ ಅಧ್ಯಾಪಕರಾದ ಶೈಲೇಂದ್ರ ಕುಮಾರ್ ಹೇಳುತ್ತಾರೆ.

“ರಾಮ್ ಲಲ್ಲಾನ ಸೌಂದರ್ಯವನ್ನು ನೋಡುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಮುಂಗುರುಳುಗಳು, ಉಬ್ಬಿದ ಕೆನ್ನೆಗಳು, ಅತೀಂದ್ರಿಯ ನಗು ಮತ್ತು ದೈವಿಕ ಸೆಳೆತ ಅದರಲ್ಲಿದೆ” ಎಂದು ಎಕ್ಸ್‌ನಲ್ಲಿ ಇತಿಹಾಸಕಾರ ಮತ್ತು ಲೇಖಕ ವಿಕ್ರಂ ಸಂಪತ್ ಪೋಸ್ಟ್‌ ಮಾಡಿದ್ದಾರೆ.

51 ಇಂಚು ಎತ್ತರವೇ ಯಾಕೆ?

ರಾಮ್ ಲಲ್ಲಾ ವಿಗ್ರಹದ 51 ಇಂಚಿನ ಎತ್ತರವನ್ನು ಕೂಡ ವೈಜ್ಞಾನಿಕವಾಗಿ ಆಯ್ಕೆ ಮಾಡಲಾಗಿದೆ. “ಈ ಎತ್ತರದಲ್ಲಿ ಪ್ರತಿ ವರ್ಷ ರಾಮನವಮಿ ದಿನದಂದು ಮಧ್ಯಾಹ್ನ ಸೂರ್ಯನ ಕಿರಣಗಳು ರಾಮಲಲ್ಲಾನ ಹಣೆಯ ಮೇಲೆ ಬೀಳುತ್ತವೆ. ಇದು ಅಯೋಧ್ಯೆಯ ರಾಮಮಂದಿರದ ವಿಶಿಷ್ಟ ಲಕ್ಷಣ. ಪ್ರತಿ ವರ್ಷವೂ ಈ ದಿನದಂದು ಸೂರ್ಯನ ಕಿರಣಗಳು ರಾಮಲಲ್ಲಾನ ಮುಖವನ್ನು ಬೆಳಗಿಸುತ್ತವೆ” ಎಂದು ವಿಜೇತಾ ಹೇಳುತ್ತಾರೆ.

ಕೃಷ್ಣಶಿಲೆಯೇ ಯಾಕೆ?

ವಿಗ್ರಹವನ್ನು ಕೆತ್ತಲು ಕೃಷ್ಣಶಿಲೆಯನ್ನೇ ಬಳಸಿರುವುದು ಅದರ ರಾಸಾಯನಿಕ ಸಂಯೋಜನೆಗಾಗಿ. ಕೃಷ್ಣಶಿಲೆಯು ಆಮ್ಲ, ಶಾಖ ಮತ್ತು ಪ್ರತಿಕೂಲ ಹವಾಮಾನಕ್ಕೆ ಪ್ರತಿಕ್ರಿಯಿಸುವುದಿಲ್ಲ. ಹಾಲನ್ನು ಬಳಸಿ ಅಭಿಷೇಕವನ್ನು ಮಾಡಿದಾಗ, ಕಲ್ಲು ಹಾಲಿನ ಅಂಶಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆದ್ದರಿಂದ ಅಭಿಷೇಕ ಮಾಡಿದ ಹಾಲನ್ನು ಯಾವುದೇ ಅತಂಕವಿಲ್ಲದೆ ಪ್ರಸಾದವಾಗಿ ಸೇವಿಸಬಹುದು. ಕೃಷ್ಣಶಿಲೆಯು 1000 ವರ್ಷಗಳಿಗೂ ಹೆಚ್ಚು ಕಾಲ ಉಳಿಯುತ್ತದೆ.

“ಶಿಲ್ಪವನ್ನು ಕೆತ್ತಲು ಆಯ್ಕೆಯಾದ ನಾನು ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎಂದು ಭಾವಿಸುತ್ತೇನೆ” ಎಂದು ಅರುಣ್‌ ಯೋಗಿರಾಜ್‌ ಹೇಳಿದ್ದರು.

Exit mobile version