Site icon Vistara News

Hijab Ban: ತರಗತಿಯಲ್ಲಿ ಹಿಜಾಬ್‌, ಬುರ್ಖಾ ನಿಷೇಧ; ಕಾಲೇಜು ಆದೇಶ ಎತ್ತಿಹಿಡಿದ ಹೈಕೋರ್ಟ್‌

Hijab Ban

High Court refuses to interfere in hijab ban decision of Mumbai college

ಮುಂಬೈ: ಕರ್ನಾಟಕದಂತೆ ಮಹಾರಾಷ್ಟ್ರದಲ್ಲೂ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್‌, ಬುರ್ಖಾ ಧರಿಸುವ ಕುರಿತು ವಿವಾದ (Hijab Row) ಭುಗಿಲೆದ್ದಿದೆ. ಇದರ ಬೆನ್ನಲ್ಲೇ, ಕಾಲೇಜಿನಲ್ಲಿ ಹಿಜಾಬ್‌, ಬುರ್ಖಾ ನಿಷೇಧಿಸಿದ (Hijab Ban) ಮುಂಬೈ ಮೂಲದ ಕಾಲೇಜಿನ ಆದೇಶವನ್ನು ಬಾಂಬೆ ಹೈಕೋರ್ಟ್‌ (Bombay High Court) ಎತ್ತಿಹಿಡಿದಿದೆ. ಕಾಲೇಜಿನಲ್ಲಿ ಹಿಜಾಬ್‌, ಬುರ್ಖಾ ನಿಷೇಧಿಸಿದ ಕಾಲೇಜಿನ ಆಡಳಿತ ಮಂಡಳಿ ತೀರ್ಮಾನದ ವಿಷಯದಲ್ಲಿ ಮಧ್ಯಪ್ರವೇಶ ಇಲ್ಲ ಎಂಬುದಾಗಿ ಬಾಂಬೆ ಹೈಕೋರ್ಟ್‌ ಖಡಾಖಂಡಿತವಾಗಿ ಹೇಳಿದೆ.

ಮುಂಬೈನಲ್ಲಿರುವ ಚೆಂಬುರ್‌ ಟ್ರೋಂಬೆ ಎಜುಕೇಷನ್‌ ಸೊಸೈಟಿಯ ಎನ್‌.ಜಿ.ಆಚಾರ್ಯ ಹಾಗೂ ಕೆ.ಕೆ. ಮರಾಠೆ ಕಾಲೇಜಿನಲ್ಲಿ ಇತ್ತೀಚೆಗೆ ವಸ್ತ್ರಸಂಹಿತೆ ಜಾರಿಗೆ ತರಲಾಗಿದ್ದು, ಕಾಲೇಜು ಆವರಣದಲ್ಲಿ ಹಿಜಾಬ್‌, ನಕಾಬ್‌, ಬುರ್ಖಾ, ಶಾಲು, ಟೋಪಿ, ಬ್ಯಾಡ್ಜ್‌ಗಳನ್ನು ಧರಿಸಿಕೊಂಡು ಬರುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಆದರೆ, ಕಾಲೇಜಿನಲ್ಲಿ ಪದವಿಯ ದ್ವಿತೀಯ ಹಾಗೂ ಅಂತಿಮ ವರ್ಷದ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ 9 ವಿದ್ಯಾರ್ಥಿನಿಯರು ಕಾಲೇಜಿನ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಅರ್ಜಿದಾರರ ವಾದ ಏನಾಗಿತ್ತು?

ವಿದ್ಯಾರ್ಥಿಗಳ ಪರ ಹಿರಿಯ ವಕೀಲ ಅಲ್ತಾಫ್‌ ಖಾನ್‌ ವಾದ ಮಂಡಿಸಿದರು. “ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದು ಅವರ ಆಯ್ಕೆ ಹಾಗೂ ವೈಯಕ್ತಿಕ ವಿಚಾರವಾಗಿದೆ. ಹೀಗೆ, ಹಿಜಾಬ್‌ ಧರಿಸುವುದನ್ನು ನಿಷೇಧಿಸುವ ಮೂಲಕ ಕಾಲೇಜಿನ ಆಡಳಿತ ಮಂಡಳಿಯು ಕಾನೂನುಬಾಹಿರ, ನಿರಂಕುಶ ಹಾಗೂ ಹಟಮಾರಿತನದ ನಿರ್ಧಾರ ತೆಗೆದುಕೊಂಡಿದೆ. ಇಸ್ಲಾಂನಲ್ಲಿ ಹಿಜಾಬ್‌ ಧರಿಸುವುದು ಅತ್ಯವಶ್ಯಕವಾಗಿದೆ. ಈ ಕುರಿತು ಕುರಾನ್‌ನಲ್ಲಿ ಕೂಡ ಉಲ್ಲೇಖಿಸಲಾಗಿದೆ” ಎಂದು ಕುರಾನ್‌ನ ಹಲವು ಅಧ್ಯಾಯಗಳನ್ನು ಕೋರ್ಟ್‌ಗೆ ನೀಡಿದರು.

ಕಾಲೇಜು ಆಡಳಿತ ಮಂಡಳಿ ವಾದ ಹೀಗಿತ್ತು

ಕಾಲೇಜು ಆಡಳಿತ ಮಂಡಳಿ ಪರ ಅನಿಲ್‌ ಅತುರ್ಕರ್‌ ವಾದ ಮಂಡಿಸಿದರು. “ಕಾಲೇಜಿನಲ್ಲಿ ಯಾವುದೇ ಧರ್ಮ, ಜಾತಿ ಹಾಗೂ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ವಸ್ತ್ರಸಂಹಿತೆ ತಂದಿಲ್ಲ. ಎಲ್ಲ ತೀರ್ಮಾನಗಳನ್ನು ಸಮಾನ ವಸ್ತ್ರಸಂಹಿತೆ ಜಾರಿಯಲ್ಲಿರಲಿ ಎಂದು ತೆಗೆದುಕೊಳ್ಳಲಾಗಿದೆ. ಇಸ್ಲಾಂ ವಿರೋಧಿಯಾಗಿ, ಯಾವುದೇ ಧರ್ಮದ ವಿರೋಧಿಯಾಗಿ ಈ ತೀರ್ಮಾನ ತೆಗೆದುಕೊಂಡಿಲ್ಲ” ಎಂದು ಹೇಳಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳಾದ ಎ.ಎಸ್.ಚಂದುರ್ಕರ್‌ ಹಾಗೂ ರಾಜೇಶ್‌ ಪಾಟೀಲ್‌ ಅವರಿದ್ದ ಪೀಠವು, ಕಾಲೇಜು ಆಡಳಿತ ಮಂಡಳಿಯ ತೀರ್ಮಾನದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ತಿಳಿಸಿತು.

ಇದನ್ನೂ ಓದಿ: Hijab Row : ಹಾಸನ ಖಾಸಗಿ ಕಾಲೇಜಿನಲ್ಲಿ ಹಿಜಾಬ್‌ VS ಕೇಸರಿ ಶಾಲು

Exit mobile version