Site icon Vistara News

ಬ್ಯಾಂಕುಗಳಿಂದ ವಿಪರೀತ ಬಡ್ಡಿ, ಮೂಕಪ್ರೇಕ್ಷಕ ಆರ್‌ಬಿಐ! ಅಲಹಾಬಾದ್ ಹೈಕೋರ್ಟ್ ಚಾಟಿ

High interest from banks, silent RBI Says Allahabad High Court

ನವದೆಹಲಿ: ಬ್ಯಾಂಕುಗಳು ಗ್ರಾಹಕರಿಗೆ ಹೆಚ್ಚಿನ ಬಡ್ಡಿ (High Interest Rates) ವಿಧಿಸಲು ಅವಕಾಶ ಕಲ್ಪಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಮೂಕಪ್ರೇಕ್ಷಕರಂತೆ ವರ್ತಿಸುತ್ತಿದೆ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ(Allahabad High Court). ಬ್ಯಾಂಕುಗಳು ವಿಧಿಸುತ್ತಿರುವ ಹೆಚ್ಚಿನ ಬಡ್ಡಿ ಸಂಬಂಧ ಮನ್ಮೀತ್ ಸಿಂಗ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿದಾರರು ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನಿಂದ 12.5% ಬಡ್ಡಿ ದರದಲ್ಲಿ 9 ಲಕ್ಷ ರೂಪಾಯಿಗಳ ಸಾಲವನ್ನು ಪಡೆದಿದ್ದಾರೆ.

ಅರ್ಜಿದಾರರು ಸಮಯಕ್ಕೆ ಸರಿಯಾಗಿ ತಮ್ಮ ಸಾಲವನ್ನು ಮರು ಪಾವತಿಸಿದ್ದರು. ಆದರೆ, ಅವರು ತಮ್ಮ ಸಾಲದ ಖಾತೆಯನ್ನು ಪರಿಶೀಲಿಸಿದಾಗ 17 ಲಕ್ಷ ರೂ. ಬದಲಿಗೆ 27 ಲಕ್ಷ ರೂ. ಬ್ಯಾಂಕ್ ಪಾವತಿಸಿಕೊಂಡಿತ್ತು. ವಾಸ್ತವದಲ್ಲಿ ಅರ್ಜಿದಾರರು ಬ್ಯಾಂಕಿಗೆ 17 ಲಕ್ಷ ರೂಪಾಯಿ ಮಾತ್ರವನ್ನೇ ಪಾವತಿಸಬೇಕಿತ್ತು. ಬಡ್ಡಿಯ ದರವು ವ್ಯತ್ಯಾಸವಾಗಿರುವುದರಿಂದ, ಸಾಲದ ಅವಧಿಯಲ್ಲಿ 16% ಮತ್ತು 18% ರ ನಡುವೆ ಬಡ್ಡಿದರವನ್ನು ವಿಧಿಸಲಾಗುತ್ತದೆ ಎಂದು ಬ್ಯಾಂಕ್ ವಾದಿಸಿದೆ.

ಫ್ಲೋಟಿಂಗ್ ಬಡ್ಡಿ ದರಕ್ಕೆ ಅರ್ಜಿದಾರರು ತಮ್ಮ ಒಪ್ಪಿಗೆ ನೀಡಿದ್ದಾರೆ. ಮಾರುಕಟ್ಟೆಯ ಸ್ಥಿತಿಗತಿಯ ಆಧಾರದ ಮೇಲೆ ಬಡ್ಡಿ ದರವನ್ನು ಪರಿಷ್ಕರಿಸುವ ಅಧಿಕಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿದೆ ಎಂದು ಬ್ಯಾಂಕ್ ಕೋರ್ಟ್‌ನಲ್ಲಿ ವಾದಿಸಿದೆ. ಅಲ್ಲದೇ, ಬಡ್ಡಿ ದರವನ್ನು ಪರಿಷ್ಕರಿಸುವ ಸಂಬಂಧ ಅರ್ಜಿದಾರರಿಗೆ ನೋಟಿಸ್ ಕೂಡ ನೀಡಲಾಗಿತ್ತು ಎಂದು ಬ್ಯಾಂಕ್ ಹೇಳಿದೆ. ಆದರೆ, ವಾಸ್ತವದಲ್ಲಿ ಅರ್ಜಿದಾರರಿಗೆ ಬ್ಯಾಂಕ್ ನೋಟಿಸ್ ತಲುಪಲೇ ಇಲ್ಲ. ಅವರು ಕಳುಹಿಸಿದ ವಿಳಾಸ ಕೂಡ ತಪ್ಪಾಗಿತ್ತು.

ಬ್ಯಾಂಕಿನ ವಿಪರೀತ ಬಡ್ಡಿದರವನ್ನು ಪ್ರಶ್ನಿಸಿ ಅರ್ಜಿದಾರರು ಬ್ಯಾಂಕಿಂಗ್ ಒಂಬುಡ್ಸಮನ್ ಮೊರೆ ಹೋದರು. ಅರ್ಜಿದಾರರಿಗೆ ವಾದವನ್ನು ಮಂಡಿಸಲು ಸರಿಯಾದ ಅವಕಾಶವನ್ನೂ ನೀಡದೇ, ಅವರ ವಿರುದ್ಧವೇ ಆದೇಶವನ್ನು ನೀಡಲಾಯಿತು. ವಿಪರೀತ ಬಡ್ಡಿ ದರ ಏರಿಕೆ ಸೂಕ್ತ ಕಾರಣಗಳನ್ನು ಬ್ಯಾಂಕ್ ನೀಡಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಫ್ಲೋಟಿಂಗ್ ಬಡ್ಡಿದರವನ್ನು ಪಾವತಿಸಲು ಸಾಲ ಒಪ್ಪಂದದಲ್ಲಿ ಅರ್ಜಿದಾರರು ಒಪ್ಪಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಬ್ಯಾಂಕ್ ತನ್ನ ಅನಿಯಂತ್ರಿತ ಮತ್ತು ಕಾನೂನುಬಾಹಿರ ಕ್ರಮವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ಎಂದು ಹೈಕೋರ್ಟ್ ಹೇಳಿದೆ. ಸಾಲಗಾರನ ಕ್ರೆಡಿಟ್ ಅರ್ಹತೆ, ಸಾಲದ ಬಂಡವಾಳದ ಅಪಾಯ ಮತ್ತು ಮೇಲಾಧಾರದ ಲಭ್ಯತೆಯು ಈ ಸಂದರ್ಭದಲ್ಲಿ ಒಂದೇ ಆಗಿರುತ್ತದೆ ಮತ್ತು ಆದ್ದರಿಂದ, ಅಂತಹ ಅತಿಯಾದ ಬಡ್ಡಿ ದರವು ಆಧಾರರಹಿತವಾಗಿದೆ ಎಂದು ಕೋರ್ಟ್ ಹೇಳಿದೆ.

ಬಡ್ಡಿ ವಿಧಿಸುವ ಪಾರದರ್ಶಕ ವಿಧಾನವನ್ನು ಒದಗಿಸಲು ಮತ್ತು ಅಳವಡಿಸಿಕೊಳ್ಳಲು ಬ್ಯಾಂಕ್ ವಿಫಲವಾಗಿದೆ ಮತ್ತು ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಆ ದರದಲ್ಲಿನ ಯಾವುದೇ ಬದಲಾವಣೆಯನ್ನು ನೋಟಿಸ್ ನೀಡದೆ ಮತ್ತು ಗ್ರಾಹಕರ ಒಪ್ಪಿಗೆಯಿಲ್ಲದೆ ಗ್ರಾಹಕರಿಗೆ ಅನ್ವಯಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ಸುದ್ದಿಯನ್ನೂ ಓದಿ: Money Guide: ಇನ್ನು ಸಾಲ ಮಾಡಿ ತುಪ್ಪ ತಿನ್ನೋದು ತುಸು ಕಷ್ಟ!; ಆರ್‌ಬಿಐ ನಿಯಮ ಏನು ಹೇಳುತ್ತದೆ?

Exit mobile version