Site icon Vistara News

G20 Summit 2023: ದಿಲ್ಲಿಗೆ ಬರಲಿರುವ ಜಾಗತಿಕ ನಾಯಕರಿಗೆ ಊಹೆಗೂ ಮೀರಿದ ಭದ್ರತಾ ವ್ಯವಸ್ಥೆ!

g20 summit security

ಹೊಸದಿಲ್ಲಿ: ರಾಜಧಾನಿಯಲ್ಲಿ ನಡೆಯಲಿರುವ G20 ಶೃಂಗಸಭೆಗೆ (G20 Summit 2023) ಪ್ರಮುಖ ಜಾಗತಿಕ ನಾಯಕರು ಆಗಮಿಸಲಿದ್ದಾರೆ. ಇವರ ಸುರಕ್ಷತೆಗಾಗಿ ಸೆಕ್ಯುರಿಟಿ ಕಣ್ಣು ತಪ್ಪಿಸಿ ಸೊಳ್ಳೆ ಕೂಡ ಒಳನುಸುಳಲಾಗದಂಥ ಭಾರೀ ಭದ್ರತಾ ವ್ಯವಸ್ಥೆಗಳನ್ನು (G20 Summit 2023 security) ಕೈಗೊಳ್ಳಲಾಗುತ್ತಿದೆ.

G20 ಸಭೆಗೆ (G20 Summit in Delhi) ಆಗಮಿಸಲಿರುವ ಪ್ರಮುಖ ಜಾಗತಿಕ ಆರ್ಥಿಕತೆಗಳ ಪ್ರತಿನಿಧಿಗಳ ಸುರಕ್ಷತೆಗೆ ಭಾರತೀಯ ಭದ್ರತಾ ಏಜೆನ್ಸಿಗಳು ವಿಸ್ತಾರವಾದ ಭದ್ರತಾ ಕ್ರಮಗಳನ್ನು ಕೈಗೊಂಡಿವೆ. ದೆಹಲಿ ಪೊಲೀಸ್ ಮತ್ತು ಇತರ ಅರೆಸೈನಿಕ ಘಟಕಗಳನ್ನು ವಿಶೇಷವಾಗಿ ನಿಯೋಜಿಸಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ಕ್ಯಾಮೆರಾಗಳು, ಸಾಫ್ಟ್‌ವೇರ್ ಅಲಾರಂಗಳು ಮತ್ತು ಡ್ರೋನ್‌ಗಳನ್ನು ಶೃಂಗಸಭೆಯ ಸ್ಥಳಗಳಲ್ಲಿ ಜನರ ಚಲನವಲನ ಮೇಲ್ವಿಚಾರಣೆ ಮಾಡಲು ಬಳಸಲಾಗುತ್ತದೆ.

ಯಾವುದೇ ಅನುಮಾನಾಸ್ಪದ ಚಲನವಲನವನ್ನು ಪತ್ತೆಹಚ್ಚಲು ಇಂತಹ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾರಾದರೂ ಗೋಡೆಗಳನ್ನು ಹತ್ತುವುದು, ಓಡುವುದು ಅಥವಾ ಕೆಳಗೆ ಬಾಗುವುದು ಮುಂತಾದ ಅಸಾಮಾನ್ಯ ಚಲನೆಗಳನ್ನು ಮಾಡಿದರೆ, AI ಕ್ಯಾಮೆರಾಗಳು ಭದ್ರತಾ ಸಿಬ್ಬಂದಿಯನ್ನು ಎಚ್ಚರಿಸುತ್ತವೆ. ಹೆಚ್ಚುವರಿ ಭದ್ರತೆಗಾಗಿ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಕಮಾಂಡೋಗಳು ಮತ್ತು ಸೇನಾ ಸ್ನೈಪರ್‌ಗಳನ್ನು ನಿಯೋಜಿಸಲಾಗುತ್ತಿದೆ.

ಇದಲ್ಲದೆ ಅಮೆರಿಕದ ಸಿಐಎ, ಬ್ರಿಟನ್‌ನ ಎಂಐ-6 ಮತ್ತು ಚೀನಾದ ಎಂಎಸ್‌ಎಸ್ ಸೇರಿದಂತೆ ಅಂತರರಾಷ್ಟ್ರೀಯ ಭದ್ರತಾ ಗುಪ್ತಚರ ಸಂಸ್ಥೆಗಳ ತಂಡಗಳು ತಮ್ಮ ಪ್ರತಿನಿಧಿಗಳಿಗೆ ಭದ್ರತಾ ವ್ಯವಸ್ಥೆಗಳನ್ನು ಮಾಡಲು ಈಗಾಗಲೇ ದೆಹಲಿಗೆ ಆಗಮಿಸಿವೆ. ಶೃಂಗಸಭೆಯ ಸಮಯದಲ್ಲಿ ಸಂಭಾವ್ಯ ಡ್ರೋನ್ ದಾಳಿ ಬೆದರಿಕೆಗಳನ್ನು ತಟಸ್ಥಗೊಳಿಸಲು NSG, ಭಾರತೀಯ ವಾಯುಪಡೆ, ಏರ್ ಟ್ರಾಫಿಕ್ ಕಂಟ್ರೋಲ್ (ATC) ಮತ್ತು ಇತರ ಏಜೆನ್ಸಿಗಳು ನಿಕಟವಾಗಿ ಕಾರ್ಯನಿರ್ವಹಿಸಲಿವೆ.

ಸ್ಪೆಶಲ್‌ 50 ತಂಡ

ವಿಐಪಿ ಭದ್ರತೆಯಲ್ಲಿ ಅನುಭವ ಹೊಂದಿರುವ ಸುಮಾರು 1,000 ಭದ್ರತಾ ಸಿಬ್ಬಂದಿಯನ್ನು ಒಳಗೊಂಡ ʼಸ್ಪೆಶಲ್‌ ವಿಶೇಷ 50ʼ ತಂಡವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿದ್ಧಪಡಿಸಿದೆ. ಇವರು ಎನ್‌ಎಸ್‌ಜಿ ಕಮಾಂಡೋಗಳಾಗಿದ್ದು, ವಿಶೇಷ ಕಾರ್ಯಾಚರಣೆಗಳಲ್ಲಿ ಅನುಭವ ಹೊಂದಿದವರಾಗಿದ್ದಾರೆ. ಸ್ಫೋಟಕಗಳನ್ನು ಪತ್ತೆಹಚ್ಚುವ ದೆಹಲಿ ಪೊಲೀಸ್ ಶ್ವಾನದಳದ ಶ್ವಾನಗಳು ಕಾರ್ಯಾಚರಣೆಯಲ್ಲಿದ್ದು, ಲಗೇಜ್, ವಾಹನಗಳು ಮತ್ತು ಪ್ಯಾಕೇಜ್‌ಗಳಲ್ಲಿ ಇಡಲಾದ ಡಮ್ಮಿ ಸ್ಫೋಟಕಗಳನ್ನು ಪತ್ತೆಹಚ್ಚಲು ಅಣಕು ಡ್ರಿಲ್‌ಗಳನ್ನು ನಡೆಸಿವೆ.

ಯಾವಾಗ ಸಭೆ?

G-20 ವಿಶ್ವ ನಾಯಕರ ಶೃಂಗಸಭೆಯು ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿದೆ. ಈ ಶೃಂಗಸಭೆಯು ಭಾರತದಲ್ಲಿ ನಡೆದ ಇದುವರೆಗಿನ ವಿಶ್ವ ನಾಯಕರ ಅತಿದೊಡ್ಡ ಕೂಟಗಳಲ್ಲಿ ಒಂದು. ಭಾರತ ಡಿಸೆಂಬರ್ 1, 2022ರಂದು ಇಂಡೋನೇಷ್ಯಾದಿಂದ ಜಿ-20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತ್ತು. G20 ಸಂಘಟನೆಯು ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳ ಅಂತಾರಾಷ್ಟ್ರೀಯ ವೇದಿಕೆ. ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ ಮತ್ತು ಯುರೋಪಿಯನ್ ಒಕ್ಕೂಟವನ್ನು ಒಳಗೊಂಡಿವೆ.

ಇದನ್ನೂ ಓದಿ: G20 Summit 2023: ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಾರೆ! ಪ್ರಧಾನಿ ಮೋದಿಗೆ ಫೋನ್ ಮಾಡಿ ಮಾಹಿತಿ ನೀಡಿದ ಪುಟಿನ್

Exit mobile version