ಹೈದರಾಬಾದ್: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರಿಗೆ ಪುನಃ ನೋಟಿಸ್ ಕಳಿಸುವಂತೆ ತೆಲಂಗಾಣದ ವಿಶೇಷ ತನಿಖಾ ದಳಕ್ಕೆ ತೆಲಂಗಾಣ ಹೈಕೋರ್ಟ್ ಸೂಚನೆ ನೀಡಿದೆ.
ಎಸ್‌ಐಟಿಗೆ ನ್ಯಾಯಮೂರ್ತಿ ಬಿ.ವಿಜಯಸೇನ ರೆಡ್ಡಿ ಅವರು ಈ ಸೂಚನೆ ನೀಡಿದ್ದು, ನೋಟಿಸನ್ನು ಇಮೈಲ್ ಮತ್ತು ವಾಟ್ಸ್ಯಾಪ್ ಮೂಲಕ ಕಳಿಸಲು ತಿಳಿಸಿದ್ದಾರೆ. ಆದರೆ, ಸಂತೋಷ್ ಅವರ ಬಂಧನದ ಬಗೆಗೆ ನೀಡಲಾಗಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಅವರು ನಿರಾಕರಿಸಿದ್ದಾರೆ. ನ.29ರಂದು ಪ್ರಕರಣದ ತನಿಖೆಯ ಸ್ಥಿತಿಗತಿಯ ಬಗ್ಗೆ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚಿಸಲಾಗಿದೆ. ನ.30ರಂದು ಮುಂದಿನ ವಿಚಾರಣೆ ನಡೆಯಲಿದೆ.
ಬಿ.ಎಲ್ ಸಂತೋಷ್ ಅವರು ತನಿಖಾ ಸಂಸ್ಥೆ ಮುಂದೆ ಹಾಜರಾಗುತ್ತಿಲ್ಲ; ಪ್ರಕರಣದ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಎಸ್‌ಐಟಿ ಕೋರ್ಟ್‌ಗೆ ದೂರಿತ್ತು. ಈಗಾಗಲೇ ಸಂತೋಷ್ ಅವರಿಗೆ ಸಿಪಿಸಿ ಸೆಕ್ಷನ್ 41ಎ ಅಡಿ ನೋಟಿಸ್ ನೀಡಲಾಗಿದೆ. ಸಂತೋಷ್ ಪರ ವಕೀಲರು ಅರ್ಜಿ ಸಲ್ಲಿಸಿ, ನೋಟಿಸ್‌ಗೆ ತಡೆಯಾಜ್ಞೆ ನೀಡಲು ಕೋರಿದ್ದರು. ಆದರೆ ಕೋರ್ಟ್ ಅದನ್ನು ಮಾನ್ಯ ಮಾಡಿರಲಿಲ್ಲ. ಅವರು ಎಸ್‌ಐಟಿ ಮುಂದೆ ಹಾಜರಾಗುವುದು ನ್ಯಾಯೋಚಿತ ಎಂದು ಕೋರ್ಟ್ ಹೇಳಿತ್ತು; ಆದರೆ ಅವರ ಬಂಧನಕ್ಕೆ ಒಪ್ಪಿಗೆ ನೀಡಿರಲಿಲ್ಲ.
ಇದನ್ನೂ ಓದಿ | BL Santosh | ಬಿಜೆಪಿ ನಾಯಕ ಸಂತೋಷ್ ಈಗ ತೆಲಂಗಾಣ ಶಾಸಕರ ಖರೀದಿ ಪ್ರಕರಣದ ಆರೋಪಿ
ತೆಲಂಗಾಣ ಸರ್ಕಾರ ಸಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸಂತೋಷ್ ಅವರಿಗೆ ನೋಟಿಸ್ ಮುಟ್ಟಿಸಲು ನೆರವಾಗುವಂತೆ ದಿಲ್ಲಿ ಪೊಲೀಸ್ ಆಯುಕ್ತರಿಗೆ ಆದೇಶಿಸಲು ಕೋರಿತ್ತು. ಯಾವುದೇ ವಿಳಂಬವಿಲ್ಲದೆ ನೋಟಿಸ್ ತಲುಪಿಸಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು.
ಕಳೆದ ತಿಂಗಳು ಶಾಸಕರ ಖರೀದಿ ಪ್ರಯತ್ನಕ್ಕೆ ಸಂಬಂಧಿಸಿ ಬಂಧಿಸಲಾದ ಮೂವರು ಆರೋಪಿಗಳ ತನಿಖೆಯ ಸಂದರ್ಭ ಸಂತೋಷ್ ಅವರ ಹೆಸರು ಕೇಳಿಬಂದಿತ್ತು. ಟಿಆರ್‌ಎಸ್‌ನ ನಾಲ್ವರು ಶಾಸಕರನ್ನು ಬಿಜೆಪಿಗೆ ಎಳೆದುಕೊಳ್ಳಲು ಭಾರಿ ಮೊತ್ತದ ಹಣದ ಆಮಿಷ ಒಡ್ಡಿದ್ದರ ಕುರಿತು ತಿಳಿದುಬಂದಿತ್ತು. ಪ್ರಕರಣದಲ್ಲಿ ಸಂತೋಷ್ ಅವರನ್ನು ಆರೋಪಿಯಾಗಿ ತೆಲಂಗಾಣ ಪೊಲೀಸರು ಇಂದು ಮುಂಜಾನೆ ಹೆಸರಿಸಿದ್ದರು. ಜತೆಗೆ ಇನ್ನಿಬ್ಬರನ್ನೂ ಹೆಸರಿಸಿದ್ದು, ಒಟ್ಟಾರೆಯಾಗಿ ಆರೋಪಿಗಳ ಸಂಖ್ಯೆ ಏಳಕ್ಕೇರಿದೆ. ಸಂತೋಷ್ ವಿರುದ್ಧ ಲುಕ್‌ಔಟ್ ನೋಟಿಸ್ ಕೂಡ ಹೊರಡಿಸಲಾಗಿದೆ.