ಪಣಜಿ: ಲೋಕಸಭೆ ಇರಲಿ, ವಿಧಾನಸಭೆ ಚುನಾವಣೆಯೇ ಹತ್ತಿರ ಬರಲಿ. ಆಗೆಲ್ಲ ರಾಜಕಾರಣಿಗಳ ಪಕ್ಷಾಂತರವು ಸರ್ವೇಸಾಮಾನ್ಯ. ಆದರೆ, ಗೋವಾದಲ್ಲಿ ಇತ್ತೀಚಿಗೆ ಪಕ್ಷಾಂತರಕ್ಕೂ, ಚುನಾವಣೆ ಸಮೀಪಿಸುವುದಕ್ಕೂ ಸಂಬಂಧವೇ ಇಲ್ಲ ಎನ್ನುವಷ್ಟರಮಟ್ಟಿಗೆ ಪಕ್ಷಾಂತರ ಸಾಮಾನ್ಯವಾಗಿದೆ. ಇದಕ್ಕೆ, ಬುಧವಾರ ಕಾಂಗ್ರೆಸ್‌ನ ಎಂಟು ಶಾಸಕರು ಬಿಜೆಪಿ ಸೇರ್ಪಡೆಯಾಗಿರುವುದೇ ಸಾಕ್ಷಿಯಾಗಿದೆ. ಹೀಗೆ, ಇತ್ತೀಚಿನ ವರ್ಷಗಳಲ್ಲಿ ಯಾವ ಪಕ್ಷದ ಶಾಸಕರು, ನಾಯಕರು ಪಕ್ಷಾಂತರ ಮಾಡಿದ್ದಾರೆ? ಗೋವಾದಲ್ಲಿ ಪಕ್ಷಾಂತರ ಪರ್ವ ಹೇಗಿದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಶೇ.೬೦ರಷ್ಟು ಶಾಸಕರ ಪಕ್ಷಾಂತರ
ಕಳೆದ ಫೆಬ್ರವರಿಯಲ್ಲಿ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನೀಡಿದ ಮಾಹಿತಿ ಪ್ರಕಾರ, ಗೋವಾದಲ್ಲಿ ಕಳೆದ ಐದು ವರ್ಷದಲ್ಲಿ ಒಟ್ಟು ೪೦ ಶಾಸಕರ ಪೈಕಿ ೨೪ ಶಾಸಕರು ಪಕ್ಷಾಂತರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ಯಾವುದೇ ರಾಜ್ಯದಲ್ಲೂ ಪಕ್ಷಾಂತರ ಪರ್ವ ಇಷ್ಟೊಂದು ಪ್ರಮಾಣದಲ್ಲಿ ಇಲ್ಲ ಎಂದೂ ಎಡಿಆರ್ ಮಾಹಿತಿ ನೀಡಿರುವುದು ಆತಂಕ ಮೂಡಿಸುವಂತಿದೆ.
೨೦೧೭ರ ಚುನಾವಣೆ ಬಳಿಕ ಪಕ್ಷಾಂತರ
“ಗೆಲುವಿಗೆ ನೂರಾರು ಅಪ್ಪಂದಿರು, ಸೋಲು ಮಾತ್ರ ಅನಾಥ” ಎಂಬ ಮಾತಿನಂತೆ ಯಾವುದೇ ಚುನಾವಣೆಯಲ್ಲಿ ಪಕ್ಷವೊಂದು ಸೋತರೆ ಪಕ್ಷಾಂತರ ಸಾಮಾನ್ಯ. ಇದರಂತೆ, ೨೦೧೭ರ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುಂಡ ಬಳಿಕ ಹಿರಿಯ ನಾಯಕ ಪ್ರತಾಪ್ ಸಿಂಗ್ ರಾಣೆ ಪುತ್ರ ವಿಶ್ವಜಿತ್ ರಾಣೆ ಬಿಜೆಪಿ ಸೇರಿದರು. ಇದಾದ ಒಂದು ವರ್ಷದ ಬಳಿಕವೂ ಕಾಂಗ್ರೆಸ್ ಶಾಸಕರಾದ ಸೌರಭ್ ಶಿರೋಡ್ಕರ್ ದಯಾನಂದ ಸೊಪ್ಟೆ ಅವರು ಕಾಂಗ್ರೆಸ್‌ಗೆ ವಿದಾಯ ಹೇಳಿ, ಕಮಲ ಪಾಳಯ ಸೇರ್ಪಡೆಯಾದರು.
೨೦೧೯ರಲ್ಲಿ ಪಕ್ಷಾಂತರ ಪರ್ವ
ಗೋವಾದಲ್ಲಿ ಕಾಂಗ್ರೆಸ್ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ಇದಕ್ಕೆ ಉದಾಹರಣೆ ಎಂದರೆ, ೨೦೧೯ರಲ್ಲಿ ಕಾಂಗ್ರೆಸ್‌ನ ೧೦ ಶಾಸಕರು ರಾಜೀನಾಮೆ ನೀಡಿ, ತಮ್ಮ ಇಡೀ ತಂಡವನ್ನು ಬಿಜೆಪಿ ಜತೆ ವಿಲೀನಗೊಳಿಸಿದರು. ಚಂದ್ರಕಾಂತ್ ಕಾವ್ಳೆಕರ್, ಇಸಿಡೋರ್ ಫರ್ನಾಂಡಿಸ್ ಅವರಂತಹ ಪ್ರಮುಖ ನಾಯಕರು ಬಿಜೆಪಿ ಜತೆಗೂಡಿದರು. ಇದರಿಂದ ಗೋವಾದಲ್ಲಿ ಬಿಜೆಪಿ ಶಾಸಕರ ಸಂಖ್ಯೆ ೨೭ಕ್ಕೆ ಏರಿಕೆಯಾಯಿತು. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬಲವೂ ಹೆಚ್ಚಾಯಿತು. ಅಷ್ಟೇ ಅಲ್ಲ, ಗೋವಾದ ಹಳೆಯ ಪ್ರಾದೇಶಿಕ ಪಕ್ಷಗಳಲ್ಲಿ ಒಂದಾದ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (ಎಂಜಿಪಿ)ಯು ಇದೇ ವರ್ಷ ಇಬ್ಭಾಗವಾಯಿತು. ಮೂವರಲ್ಲಿ ಇಬ್ಬರು ಶಾಸಕರು ಬಿಜೆಪಿ ಜತೆ ವಿಲೀನವಾದರು.
೨೦೨೨ರ ಚುನಾವಣೆಗೂ ಮೊದಲು ಜಿಗಿತ
ಚುನಾವಣೆ ಇಲ್ಲದೆಯೇ ಪಕ್ಷಾಂತರ ನಡೆಯುವ ಗೋವಾದಲ್ಲಿ ಚುನಾವಣೆ ವೇಳೆ ಕೇಳಬೇಕೆ? ೨೦೨೨ರ ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಲುಯಿಜಿನೋ ಫಲೆರಿಯೋ ಅವರು ರಾಜೀನಾಮೆ ನೀಡಿ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾದರು. ಈಗ ದಿಗಂಬರ್ ಕಾಮತ್, ಮೈಕೆಲ್ ಲೋಬೋ ಸೇರಿ ಎಂಟು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದು, ಇವರಲ್ಲಿ ಮೂವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
35 ವರ್ಷದಲ್ಲಿ ೧೬ ಸಿಎಂಗಳು
ಗೋವಾದಲ್ಲಿ ರಾಜಕೀಯ ಅಸ್ಥಿರತೆ ಇದೆ ಎಂಬುದಕ್ಕೆ ರಾಜ್ಯದ ಮಾನ್ಯತೆ ದೊರೆತ ೩೫ ವರ್ಷದಲ್ಲಿ ೧೬ ಮುಖ್ಯಮಂತ್ರಿಗಳನ್ನು ಕಂಡಿದ್ದೇ ಸಾಕ್ಷಿಯಾಗಿದೆ. ೧೯೮೭ರಲ್ಲಿ ಗೋವಾಗೆ ರಾಜ್ಯ ಮಾನ್ಯತೆ ದೊರೆತಿದ್ದು, ಇದುವರೆಗೆ ೧೬ ಸಿಎಂಗಳ ಜತೆಗೆ ಮೂರು ಬಾರಿ ರಾಷ್ಟ್ರಪತಿ ಆಳ್ವಿಕೆಯನ್ನೂ ಜಾರಿ ಮಾಡಲಾಗಿದೆ.
ಇದನ್ನೂ ಓದಿ | ಮೋದಿಯನ್ನು ಇನ್ನಷ್ಟು ಬಲಪಡಿಸಲು ಬಿಜೆಪಿ ಸೇರಿದ್ದೇವೆ: ಗೋವಾದಲ್ಲಿ ʼಕೈʼ ಬಿಟ್ಟ 8 ಶಾಸಕರ ಮಾತು!