ನವ ದೆಹಲಿ: ಹಿಜಾಬ್ ನಿಷೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪಿನಲ್ಲಿ ಕರ್ನಾಟಕ ಹೈಕೋರ್ಟ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿರುವುದು ಬಹಳ ನೋವುಂಟು ಮಾಡಿದೆ ಹಾಗೂ ಇದು ಸಂಪೂರ್ಣವಾಗಿ ಪಕ್ಷಪಾತಿಯಾಗಿದೆ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಮುಸ್ಲಿಮ್ ಅರ್ಜಿದಾರರು ವಾದಿಸಿದ್ದಾರೆ. ಇದೇ ವೇಳೆ, ಪವಿತ್ರ ಕುರಾನ್ ಕುರಿತು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ನಡೆಸಿದ ವಿಚಾರಣೆ ವೇಳೆ ಹೇಳಿದೆ.
ಶಾಲೆ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಕುರಿತಾದ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು. ಈ ತೀರ್ಪು ಪ್ರಶ್ನಿಸಿ ದಾಖಲಾಗಿರುವ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ವೇಳೆ, ತಮ್ಮ ವಾದ ಮಂಡಿಸಿದ ಮುಸ್ಲಿಮ್ ಅರ್ಜಿದಾರರು, ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ Pakistan or Partition of India ಕೃತಿಯಲ್ಲಿ ಪರದಾ ಪದ್ಧತಿಯ ಬಗ್ಗೆ ಬರೆದಿದ್ದಾರೆ. ಈ ಕೃತಿಯಲ್ಲಿನ ಕೆಲವು ಭಾಗಗಳನ್ನು ಕರ್ನಾಟಕ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಬಳಸಿಕೊಂಡಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡನೆಯ ವೇಳೆ, ಅರ್ಜಿದಾರ ಪರ ವಕೀಲ ಅವರು ಪೀಠದ ಗಮನಕ್ಕೆ ಈ ವಿಷಯವನ್ನು ತಂದರು.
ಸುಪ್ರೀಂ ಕೋರ್ಟ್ ವ್ಯಾಖ್ಯಾನ ಮಾಡಲ್ಲ
ಪವಿತ್ರ ಕುರಾನ್ ಅನ್ನು ವ್ಯಾಖ್ಯಾನ ಮಾಡಲು ಕೋರ್ಟ್ ಹೋಗುವುದಿಲ್ಲ. ನ್ಯಾಯಾಲಯಗಳು ಧರ್ಮಗ್ರಂಥಗಳನ್ನು ವ್ಯಾಖ್ಯಾನ ಮಾಡಲು ಹೋಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.
ವಾದ ಮಂಡನೆ ವೇಳೆ ಅರ್ಜಿದಾರ ಪರ ವಕೀಲರು, ಇಸ್ಲಾಮ್ ಮ್ತತು ಧಾರ್ಮಿಕ ಆಚರಣೆಗಳ ಕುರಿತು ಹೈಕೋರ್ಟ್ ತಪ್ಪಾಗಿ ವ್ಯಾಖ್ಯಾನ ಮಾಡಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಹೈಕೋರ್ಟ್ ಏನು ಬೇಕಾದರೂ ಹೇಳಬಹುದು. ಆದರೆ, ಕೋಟ್ ಸ್ವತಂತ್ರ ನಿಲುವು ತೆಗೆದುಕೊಳ್ಳುತ್ತಿದೆ ಎಂದು ಹೇಳಿತು.